ಸಾಮಾನ್ಯ ಬಜೆಟ್‌ನಲ್ಲಿ ರೈಲ್ವೆ ಬಜೆಟ್ ವಿಲೀನಗೊಂಡಿದ್ದು ಏಕೆ?
ನವದೆಹಲಿ, ಜನವರಿ 28; ಕೇಂದ್ರ ಬಜೆಟ್ ಮಂಡನೆಗೆ ತಯಾರಿ ಆರಂಭವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಫೆಬ್ರವರಿ 1ರಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಮಾಡಲಿದ್ದಾರೆ. ಈಗ ರೈಲ್ವೆ ಬಜೆಟ್ ಪ್ರತ್ಯೇಕವಾಗಿ ಮಂಡಿಸುವುದಿಲ್ಲ. ಸಾಮಾನ್ಯ ಬಜೆಟ್‌ನಲ್ಲಿಯೇ ಅದನ್ನು ವಿಲೀನಗೊಳಿಸಲಾಗಿದೆ.
2017ರಲ್ಲಿ ಪ್ರತ್ಯೇಕವಾಗಿ ರೈಲ್ವೆ ಬಜೆಟ್ ಮಂಡಿಸುವ ಪದ್ಧತಿಗೆ ಅಂತ್ಯ ಹಾಡಲಾಯಿತು. 1924ರಲ್ಲಿ ಬ್ರಿಟಿಷರು ಪ್ರತ್ಯೇಕವಾಗಿ ರೈಲ್ವೆ ಬಜೆಟ್ ಮಂಡಿಸಲು ಆರಂಬಿಸಿದ್ದರು. ಈ ಪದ್ಧತಿಯನ್ನು ಅಂತ್ಯಗೊಳಿಸಿ ಸಾಮಾನ್ಯ ಬಜೆಟ್‌ನಲ್ಲಿಯೇ ರೈಲ್ವೆ ಬಜೆಟ್ ವಿಲೀನಗೊಳಿಸಲಾಯಿತು.
ನೀತಿ ಆಯೋಗ ಪ್ರತ್ಯೇಕವಾಗಿ ರೈಲು ಬಜೆಟ್ ಮಂಡಿಸುವುದನ್ನು ಸ್ಥಗಿತಗೊಳಿಸಬೇಕು ಎಂದು ಶಿಫಾರಸು ಮಾಡಿತ್ತು. ಆಗ ಸುರೇಶ್ ಪ್ರಭು ರೈಲ್ವೆ ಖಾತೆ ಸಚಿವರಾಗಿದ್ದರು. ಅವರು ಆಗ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿಗೆ ಪತ್ರ ಬರೆದು ರೈಲ್ವೆ ಬಜೆಟ್ ಸಾಮಾನ್ಯ ಬಜೆಟ್‌ನಲ್ಲಿ ವಿಲೀನಗೊಳಿಸಲು ಕೋರಿದರು.

ಅರುಣ್ ಜೇಟ್ಲಿ 2016ರಲ್ಲಿ ರಾಜ್ಯಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದರು. ಸಾಮಾನ್ಯ ಬಜೆಟ್‌ನಲ್ಲಿ ರೈಲು ಬಜೆಟ್ ವಿಲೀಗೊಳಿಸಲು ವಿಶೇಷ ಸಮಿತಿಯನ್ನು ರಚನೆ ಮಾಡಲಾಯಿತು. ನೀತಿ ಆಯೋಗದ ಶಿಫಾರಸಿನ ಅನ್ವಯ ಪ್ರತ್ಯೇಕ ರೈಲ್ವೆ ಬಜೆಟ್ ಅಗತ್ಯವಿಲ್ಲ ಎಂದು ಸಮಿತಿ ಹೇಳಿತು.
1924ರಲ್ಲಿ ಬ್ರಿಟಿಷರು ರೈಲ್ವೆಯಿಂದ ದೇಶದ ಜಿಡಿಪಿಗೆ ಹೆಚ್ಚಿನ ಆದಾಯ ಬರುತ್ತಿದ್ದರಿಂದ ಪ್ರತ್ಯೇಕ ಬಜೆಟ್ ಮಂಡನೆ ಮಾಡುತ್ತಿದ್ದರು ಎಂದು ಸಮಿತಿ ಹೇಳಿತ್ತು. ಭಾರತ ದೇಶದಲ್ಲಿ ಮಾತ್ರ ಪ್ರತ್ಯೇಕವಾಗಿ ರೈಲು ಬಜೆಟ್ ಮಂಡಿಸಲಾಗುತ್ತಿದೆ ಎಂದು ಸಮಿತಿ ತಿಳಿಸಿತ್ತು.
ಮೊದಲ ಬಜೆಟ್ ಮಂಡನೆ; 2017ರಲ್ಲಿ ರೈಲ್ವೆ ಬಜೆಟ್ ಸಾಮಾನ್ಯ ಬಜೆಟ್‌ನಲ್ಲಿ ವಿಲೀಗೊಂಡಿತು. ಹಣಕಾಸು ಸಚಿವ ಅರುಣ್ ಜೇಟ್ಲಿ ಸಾಮಾನ್ಯ ಬಜೆಟ್ ಮಂಡಿಸುವಾಗಲೇ ರೈಲ್ವೆ ಬಜೆಟ್ ಮಂಡನೆ ಮಾಡಿದರು.
ಬಳಿಕ ಕೇಂದ್ರ ಸರ್ಕಾರ ಇದೇ ಸಂಪ್ರದಾಯ ಮುಂದುವರೆಸಿಕೊಂಡು ಬಂದಿತು. ರೈಲ್ವೆ ಇಲಾಖೆಯ ಹೊಸ ಘೋಷಣೆಗಳು, ಅನುದಾನ ಹಂಚಿಕೆ, ಹೊಸ ರೈಲುಗಳು, ಹೊಸ ಮಾರ್ಗ ಸಮೀಕ್ಷೆ ಸೇರಿದಂತೆ ಎಲ್ಲಾ ಘೋಷಣೆಗಳನ್ನು ಸಾಮಾನ್ಯ ಬಜೆಟ್‌ನಲ್ಲಿಯೇ ಮಾಡಲಾಗುತ್ತದೆ.
ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಬಜೆಟ್‌ನಲ್ಲಿ ವಿಲೀನಗೊಳಿಸುವುದರಿಂದ ರೈಲ್ವೆ ಸ್ವಾಯತ್ತೆಗೆ ಧಕ್ಕೆ ಆಗಿಲ್ಲ. ಇದರಿಂದ ಹಣವನ್ನು ಪರಿಣಾಮಕಾರಿಯಾಗಿ ವೆಚ್ಚ ಮಾಡಲು ಸಾಧ್ಯವಾಗುತ್ತದೆ ಎಂದು ಆಗ ರೈಲ್ವೆ ಸಚಿವರಾಗಿದ್ದ ಸುರೇಶ್ ಪ್ರಭು ಹೇಳಿದ್ದರು. ಕಾಂಗ್ರೆಸ್ ಮತ್ತು ಜೆಡಿಯು ಕೇಂದ್ರ ಸರ್ಕಾರದ ತೀರ್ಮಾನವನ್ನು ಲೋಕಸಭೆಯಲ್ಲಿ ಪ್ರಶ್ನೆ ಮಾಡಿದ್ದವು.
ಸಾಮಾನ್ಯ ಬಜೆಟ್‌ಗೆ ಹೋಲಿಕೆ ಮಾಡಿದರೆ ರೈಲ್ವೆ ಬಜೆಟ್ ಗಾತ್ರ ಸಣ್ಣದಾಗಿದೆ. ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸುವುದು ಒಂದು ಸಂಪ್ರದಾಯದಂತೆ ಮಾತ್ರ ಜಾರಿಯಲ್ಲಿದೆ ಎಂದು ನೀತಿ ಆಯೋಗದ ಸದಸ್ಯ ವಿವೇಕ್ ದೇಬ್‌ರಾಯ್ ನೇತೃತ್ವದ ಸಮಿತಿ ಶಿಫಾರಸಿನಲ್ಲಿ ಹೇಳಿತ್ತು.
ಸರ್ಕಾರದ ಒಟ್ಟಾರೆ ಹಣಕಾಸಿನ ವ್ಯವಹಾರದಲ್ಲಿ ರೈಲ್ವೆ ಬಜೆಟ್ ಸಹ ಒಂದಾಗಿರಬೇಕು ಎಂದು ಸಮಿತಿ ಸರ್ಕಾರಕ್ಕೆ ವರದಿ ನೀಡಿತ್ತು. ಸಾಮಾನ್ಯ ಬಜೆಟ್‌ನಲ್ಲಿ ರೈಲ್ವೆ ಬಜೆಟ್ ವಿಲೀನಗೊಂಡ ಬಳಿಕ ರೈಲ್ವೆ ಇಲಾಖೆ ಎಲ್ಲಾ ಪ್ರಸ್ತಾವನೆಗಳು ಸಾಮಾನ್ಯ ಬಜೆಟ್‌ನಲ್ಲಿಯೇ ಘೋಷಣೆಯಾಗುತ್ತಿವೆ.
ರೈಲ್ವೆ ಬಜೆಟ್ ಸಾಮಾನ್ಯ ಬಜೆಟ್‌ನಲ್ಲಿ ವಿಲೀನಗೊಂಡರೂ ರೈಲ್ವೆ ಇಲಾಖೆ ವೆಚ್ಚಗಳ ಬಗ್ಗೆ ಅಧಿವೇಶನದಲ್ಲಿ ಪ್ರತ್ಯೇಕವಾಗಿ ಚರ್ಚೆ ನಡೆಯುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಸರ್ಕಾರ ಹೇಳಿತ್ತು. ಹೀಗೆ ಚರ್ಚೆ ಮಾಡುವುದರಿಂದ ರೈಲ್ವೆ ಇಲಾಖೆಯ ಹಣಕಾಸಿನ ವ್ಯವಹಾರಗಳ ಸಂಸತ್ತು ವಿಸ್ತೃತವಾಗಿ ಪರಿಶೀಲನೆ ಮಾಡಲು ಸಾಧ್ಯವಾಗುತ್ತದೆ ಎಂದು ಸರ್ಕಾರ ತಿಳಿಸಿತ್ತು.
ಫೆಬ್ರವರಿ ಮೊದಲ ವಾರದಲ್ಲೇ ಬಜೆಟ್; ಸಾಮಾನ್ಯ ಬಜೆಟ್‌ನಲ್ಲಿ ರೈಲ್ವೆ ಬಜೆಟ್‌ನಲ್ಲಿ ವಿಲೀನ ಮಾತ್ರ ಮಾಡಲಿಲ್ಲ. ಮೊದಲು ಫೆಬ್ರವರಿ ಅಂತ್ಯದಲ್ಲಿ ಸಾಮಾನ್ಯ ಬಜೆಟ್ ಮತ್ತು ರೈಲ್ವೆ ಬಜೆಟ್ ಮಂಡನೆ ಮಾಡಲಾಗುತ್ತಿತ್ತು. ಈಗ ಫೆಬ್ರವರಿ ಮೊದಲ ವಾರದಲ್ಲಿ ಬಜೆಟ್ ಮಂಡನೆ ಮಾಡಲಾಗುತ್ತಿದೆ.












Click it and Unblock the Notifications