Arijit Singh: ಸಾಕು ಎಂದವನೇ ನಿಜವಾದ ಸಾಹುಕಾರ: ಅರ್ಜಿತ್ ಸಿಂಗ್ ನಿರ್ಧಾರ ಮೆಚ್ಚಿದ ರಂಗಣ್ಣ
ಬಾಲಿವುಡ್ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ಅರ್ಜಿತ್ ಸಿಂಗ್ ಅವರು ಇನ್ಮುಂದೆ ಹಿನ್ನೆಲೆ ಗಾಯಕನಾಗಿ ಹಾಡುವುದಿಲ್ಲ ಎಂದು ಹೇಳಿದ್ದಾರೆ. ಅರ್ಜಿತ್ ಸಿಂಗ್ ಅವರು ಹಿನ್ನೆಲೆ ಗಾಯನಕ್ಕೆ ವಿದಾಯ ಹೇಳಿರುವುದು ಅವರ ಅಭಿಮಾನಿಗಳಲ್ಲಿ ಅಚ್ಚರಿ - ಆಘಾತಕ್ಕೆ ಕಾರಣವಾಗಿದೆ.
"ಎಲ್ಲವೂ ಇದ್ದು ಸರಳವಾಗಿ ಬದುಕುವುದು ಇವತ್ತಿನ ಸಮಾಜದಲ್ಲಿ, ಕಾಲಘಟ್ಟದಲ್ಲಿ ಬಹಳ ಕಷ್ಟ. ಅರ್ಜಿತ್ ನಿಜಕ್ಕೂ ಅಂತಹ ವಜ್ರ" ಆರ್ಥಿಕ ತಜ್ಞ ರಂಗಸ್ವಾಮಿ ಮೂಕನಹಳ್ಳಿ ಅವರ ಬರಹ ಇಲ್ಲಿದೆ.
ಒಂದೆರಡು ಕೋಟಿ ಆಸ್ತಿ ಮಾಡಿದವರನ್ನು ಹಿಡಿಯುವುದಕ್ಕೆ ಆಗುವುದಿಲ್ಲ. ಹತ್ತಾರು ಕೋಟಿ ಮಾಡಿದವರಲ್ಲಿ ನಾವೇನೂ ಮಹತ್ತರ ಸಾಧಿಸಿ ಬಿಟ್ಟೆವು ಎನ್ನುವ ಅಹಂಭಾವ ಬೆಳೆದು ಬಿಟ್ಟಿರುತ್ತದೆ. ಎಲ್ಲರೂ ಅಂತಲ್ಲ , ಬಹುತೇಕರು ಇರುವುದು ಹೀಗೆ. ಅದರಲ್ಲೂ ಭಾರತದಲ್ಲಿ ಹಣ ಮಾಡಿದವರಲ್ಲಿ ಇರುವಷ್ಟು ಕೊಬ್ಬು ಬೇರೆ ದೇಶಗಳಲ್ಲಿ ಇರುವುದಿಲ್ಲ. ಇದನ್ನು ಪ್ರತ್ಯಕ್ಷ ಕಂಡ ಕಾರಣ ಹೇಳುತ್ತಿದ್ದೇನೆ. ನಾನು ಹಲವಾರು ವ್ಯಕ್ತಿಗಳನ್ನು ಬಹಳ ಇಷ್ಟ ಪಡುತ್ತೇನೆ. ಆದರೆ ವ್ಯಕ್ತಿ ಪೂಜೆಯ ಮಟ್ಟಕ್ಕೆ ಎಂದೂ ಹೋಗಿಲ್ಲ. ವ್ಯಕ್ತಿ ಬಹಳ ಇಷ್ಟವಾಗುವುದು ಕೂಡ ಅವರಲ್ಲಿನ ವಿಶೇಷ ಗುಣಗಳಿಂದ ವಿನಃ ಅವರು ಸಂಪಾದಿಸಿದ ಹಣದಿಂದ ಅಥವಾ ಅವರಿರುವ ಸ್ಥಾನದಿಂದ ಖಂಡಿತ ಅಲ್ಲ.

ನನಗೆ ಅರ್ಜಿತ್ ಸಿಂಗ್ ಹಾಡುಗಳಿಂದ ಮಾತ್ರ ಪರಿಚಿತರು. ಅವರು ಇನ್ಮುಂದೆ ಹಿನ್ನೆಲೆ ಗಾಯನ ನಿಲ್ಲಿಸುವುದಾಗಿ ಹೇಳಿದ್ದಾರೆ. ಸಂಗೀತದ ಕಲಿಕೆಗೆ ಕೊನೆಯಿಲ್ಲ. ಹೀಗಾಗಿ ಕಲಿಕೆ ಮುಂದುವರೆಯುತ್ತದೆ ಎಂದಿದ್ದಾರೆ. ಈ ಮನುಷ್ಯ ಇವತ್ತಿಗೆ 450 ಕೋಟಿ ರೂಪಾಯಿ ನಿವ್ವಳ ಆಸ್ತಿಯನ್ನು ಹೊಂದಿದ್ದಾರೆ. ಒಂದೆರಡು ಕೋಟಿ ಮಾಡಿದವರು ಸಾಲದಲ್ಲಿ BMW, Audi, Porsche ಕೊಳ್ಳುವ ಕಾಲದಲ್ಲಿ ಈತ ಹೋಂಡಾ ಆಕ್ಟಿವಾ ಸ್ಕೂಟರ್ ಚಲಾಯಿಸುತ್ತಾರೆ! ಅವಶ್ಯಕತೆ ಇದ್ದಾಗ ಮಾತ್ರ ಕಾರು. ಹತ್ತಾರು ಕೋಟಿ ಗಳಿಸಿದವರು ಮಾಡುವುದೇನು? ತಕ್ಷಣ ಒಂದೆರೆಡು ರೆಸ್ಟೋರೆಂಟ್ ತೆಗೆಯುವುದು, ಇನ್ನು ಸ್ವಲ್ಪ ಹಣ ಹೆಚ್ಚಿದ್ದವರು ಸೆಲೆಬ್ರೆಟಿಗಳು ದುಬೈನಲ್ಲಿ, ಲಂಡನ್, ಆಮ್‌ಸ್ಟರ್‌ಡ್ಯಾಮ್‌ಗಳಲ್ಲಿ ರೆಸ್ಟೋರೆಂಟ್ ತೆಗೆಯುತ್ತಾರೆ.
ಅರ್ಜಿತ್ ವಿಭಿನ್ನವಾಗಿ ನಿಲ್ಲುವುದು ಇದೇ ಕಾರಣಕ್ಕೆ ಆತ ಐಷಾರಾಮಿ ಕಾರು ಕೊಳ್ಳಬಹುದಿತ್ತು. ದೇಶ ಅಥವಾ ವಿದೇಶದಲ್ಲಿ ರೆಸ್ಟೋರೆಂಟ್ ಬಿಸಿನೆಸ್ ತೆಗೆಯಬಹುದಿತ್ತು. ಆದರೆ ಆತ ಹೋಂಡಾ ಆಕ್ಟಿವಾ ಸಾಕು ಎಂದರು. ತನ್ನ ಹುಟ್ಟೂರು ಜಿಯಾಗಂಜ್, ಮುರ್ಶಿದಾಬಾದ್, ವೆಸ್ಟ್ ಬೆಂಗಾಲದಲ್ಲಿ Heshel ಹೆಸರಿನಲ್ಲಿ ಒಂದು ಹೋಟೆಲ್ ತೆಗೆದಿದ್ದಾರೆ. ಅಲ್ಲಿ ಊಟಕ್ಕೆ 40 ರೂಪಾಯಿ ಬೆಲೆ ಇಟ್ಟಿದ್ದಾರೆ. ಪುಕ್ಕಟೆ ನೀಡದೆ, ಜೋಬಿಗೆ ಭಾರವಾಗದಂತೆ ಎಲ್ಲರೂ ಬಂದು ತಿನ್ನುವಂತಹ ಹೋಟೆಲ್ ತೆರೆದಿದ್ದಾರೆ.
ಎಲ್ಲವೂ ಇದ್ದು ಸರಳವಾಗಿ ಬದುಕುವುದು ಇವತ್ತಿನ ಸಮಾಜದಲ್ಲಿ, ಕಾಲಘಟ್ಟದಲ್ಲಿ ಬಹಳ ಕಷ್ಟ. ಎಷ್ಟೇ ಇದ್ದರೂ ಇನ್ನೂ ಬೇಕು ಎನ್ನುವ ಜನರ ಮಧ್ಯದಲ್ಲಿ ನಿಂತು 'ಸಾಕು' ಎನ್ನುವ ಮನೋಭಾವದ ವ್ಯಕ್ತಿಗಳು ಸಿಕ್ಕುವುದು ಅಪರೂಪದಲ್ಲಿ ಅಪರೂಪ. ಕೋಟಿಗಳಿಗೆ ಒಬ್ಬರು! ಅರ್ಜಿತ್ ನಿಜಕ್ಕೂ ಅಂತಹ ವಜ್ರ. ಸಾತ್ವಿಕ ವ್ಯಕ್ತಿತ್ವದ ಮೇರು ಪರ್ವತ.
ನಾವಿಲ್ಲಿಗೆ ಬಂದಿರುವುದು ಆತ್ಮದ ಪ್ರಯಾಣದ ಭಾಗವಾಗಿ ಎಂದು ನಮಗೆ ಅನ್ನಿಸುವವರೆಗೂ ಬೇಕು ಎನ್ನುವುದು ನಿಲ್ಲುವುದಿಲ್ಲ. ಸಾಕು ಎಂದವನೇ ನಿಜವಾದ ಸಾಹುಕಾರ , ಸರದಾರ. ಬದುಕಿನ ಈ ಪ್ರಯಾಣದಲ್ಲಿ ಇಂತಹ ಅನುಭೂತಿ ನಮ್ಮೆಲ್ಲರದೂ ಆಗಲಿ. ಸಹೋದರ ಅರ್ಜಿತ್ ನಿಮಗೆ ಒಳ್ಳೆಯದಾಗಲಿ. ದೈವ ಕೃಪೆ ಸದಾ ಇರಲಿ. ಶುಭವಾಗಲಿ.












Click it and Unblock the Notifications