ಕೋವ್ಯಾಕ್ಸಿನ್ ಲಸಿಕೆಗೆ WHO ಅನುಮೋದನೆ; ಅಕ್ಟೋಬರ್‌ನಲ್ಲಿ ಅಂತಿಮ ನಿರ್ಧಾರ
ನವದೆಹಲಿ, ಸೆಪ್ಟೆಂಬರ್ 30: ಭಾರತದಲ್ಲಿ ಅಭಿವೃದ್ಧಿಯಾಗಿರುವ 'ಕೋವ್ಯಾಕ್ಸಿನ್' ಕೊರೊನಾ ಲಸಿಕೆಯನ್ನು ತುರ್ತು ಬಳಕೆ ಪಟ್ಟಿಯಲ್ಲಿ ಸೇರಿಸಲು ಅನುಮೋದನೆ ನೀಡುವ ಕುರಿತು ಮುಂದಿನ ತಿಂಗಳು ಚಿಂತನೆ ನಡೆಸುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ತಿಳಿಸಿದೆ.
ಇದೇ ಅಕ್ಟೋಬರ್ ತಿಂಗಳಿನಲ್ಲಿ ಭಾರತದ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ನೀಡುವ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸೆಪ್ಟೆಂಬರ್ 29ರಂದು ತನ್ನ ವೆಬ್‌ಸೈಟ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ.
ಸದ್ಯ ಕೋವ್ಯಾಕ್ಸಿನ್ ಲಸಿಕೆಯ ಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದೆ.

ಭಾರತ್ ಬಯೋಟೆಕ್ ಏಪ್ರಿಲ್ 19ರಂದು ತನ್ನ ಲಸಿಕೆಯ ಅನುಮೋದನೆಗೆ ವಿಶ್ವ ಆರೋಗ್ಯ ಸಂಸ್ಥೆಗೆ ಅನುಮೋದನೆಗೆ ಅರ್ಜಿ ಸಲ್ಲಿಸಿತ್ತು. ಜುಲೈ 6ರಂದು ವಿಶ್ವ ಆರೋಗ್ಯ ಸಂಸ್ಥೆ ಲಸಿಕೆಯ ಮಾಹಿತಿ ಪರಿಶೀಲನೆಯನ್ನು ಆರಂಭಿಸಿತ್ತು. ನಂತರ ವಿಶ್ಲೇಷಣಾ ಪ್ರಕ್ರಿಯೆಯನ್ನು ಕೈಗೊಂಡಿತ್ತು.
ತುರ್ತು ಬಳಕೆ ಅನುಮೋದನೆ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಬುಧವಾರ ಭಾರತ್ ಬಯೋಟೆಕ್ ಮಾಹಿತಿ ನೀಡಿದೆ.
ಅಕ್ಟೋಬರ್ 5ರಂದು ಕೊರೊನಾ ಲಸಿಕೆ ಸಂಬಂಧ ತಜ್ಞರ ಸಲಹಾ ಸಮಿತಿ (SAGE) ಸಭೆ ಸೇರಲಿದ್ದು, ಅಂದು ಕೋವ್ಯಾಕ್ಸಿನ್ ಲಸಿಕೆಗೆ ತುರ್ತು ಬಳಕೆ ಅನುಮೋದನೆ (EUL) ನೀಡುವ ಸಂಬಂಧ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ. ಆದರೆ ಪ್ರಕ್ರಿಯೆ ಇನ್ನಷ್ಟು ಮುಂದುವರೆಯುವ ಸಾಧ್ಯತೆಯಿದೆ.

'ಕೋವ್ಯಾಕ್ಸಿನ್‌ನ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ, ಲಸಿಕೆಯು 77.8% ದಕ್ಷತೆ ಪ್ರದರ್ಶಿಸಿದೆ. EULಗಾಗಿ ಆರೋಗ್ಯ ಸಂಸ್ಥೆಗೆ ಎಲ್ಲಾ ಸಂಬಂಧಿತ ಪ್ರಯೋಗದ ಮಾಹಿತಿಗಳನ್ನು ಸಲ್ಲಿಸಲಾಗಿದೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಎಲ್ಲಾ ಪ್ರಶ್ನೆಗಳಿಗೆ ಸ್ಪಷ್ಟೀಕರಣ ನೀಡಲಾಗಿದೆ. ಹಲವು ಲಸಿಕೆಗಳನ್ನು ಜವಾಬ್ದಾರಿಯುತವಾಗಿ ಅಭಿವೃದ್ಧಿಪಡಿಸಿರುವ ಸಂಸ್ಥೆಯಾಗಿ, ಈ ವಿಳಂಬದ ಕುರಿತು ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ' ಎಂದು ಕಂಪನಿ ಹೇಳಿಕೊಂಡಿದೆ.
ಭಾರತದಲ್ಲಿ ಕೋವ್ಯಾಕ್ಸಿನ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಡಿಸಿಜಿಐ ಅನುಮೋದನೆ ನೀಡಿದೆ. ಹಲವು ದೇಶಗಳಿಗೆ ಈ ಲಸಿಕೆಯನ್ನು ರಫ್ತು ಮಾಡಲಾಗಿದೆ. ಇದಾಗ್ಯೂ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ವಿಳಂಬವಾಗುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಬೇರೆ ದೇಶಗಳಿಗೆ ಕೊರೊನಾ ಲಸಿಕೆ ರಫ್ತು ಮಾಡಲು ಭಾರತ್ ಬಯೋಟೆಕ್‌ಗೆ ತುರ್ತು ಬಳಕೆ ಪಟ್ಟಿ (EUL) ಅವಶ್ಯಕವಾಗಿದೆ. ಅನುಮೋದನೆ ದೊರೆತರೆ ಕೋವ್ಯಾಕ್ಸಿನ್ ಲಸಿಕೆಯನ್ನು ಇನ್ನಷ್ಟು ದೇಶಗಳಿಗೆ ರಫ್ತು ಮಾಡಲು ಸಾಧ್ಯವಾಗಲಿದೆ. ಜೊತೆಗೆ ಈ ಲಸಿಕೆ ಪಡೆದ ಜನರಿಗೆ ಅಂತರರಾಷ್ಟ್ರೀಯ ಪ್ರಯಾಣವನ್ನು ಸರಾಗಗೊಳಿಸಲಿದೆ.
ಇಲ್ಲಿಯವರೆಗೆ ಆಸ್ಟ್ರಾಜೆನೆಕಾ- ಆಕ್ಸ್‌ಫರ್ಡ್‌ನ ಕೋವಿಶೀಲ್ಡ್, ಮಾಡೆರ್ನಾ, ಜಾನ್ಸನ್ ಅಂಡ್ ಜಾನ್ಸನ್, ಫೈಜರ್, ಸಿನೋಫಾರ್ ಹಾಗೂ ಸಿನೋವ್ಯಾಕ್ ಲಸಿಕೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ.
ಭಾರತದಲ್ಲಿ ಆರಂಭಿಕವಾಗಿ ಅನುಮೋದನೆ ಪಡೆದ ಎರಡು ಕೊರೊನಾ ಲಸಿಕೆಗಳಲ್ಲಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯೂ ಒಂದು.
ಆರಂಭದಲ್ಲಿ, ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಾಯೋಗಿಕ ದತ್ತಾಂಶ ಕೊರತೆ ಕಾರಣವಾಗಿ ಕೋವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಲು ಹಿಂದೇಟು ಹಾಕಿತ್ತು. ಲಸಿಕೆಯ ವೈದ್ಯಕೀಯ ಪ್ರಯೋಗಗಳ ಮಾಹಿತಿ ಕೊರತೆಯನ್ನು ಉಲ್ಲೇಖಿಸಿದ್ದ ಅಮೆರಿಕದ ಆಹಾರ ಹಾಗೂ ಔಷಧ ನಿಯಂತ್ರಕ ಸಂಸ್ಥೆ, ಈ ಲಸಿಕೆಯ ತುರ್ತು ಬಳಕೆಯ ದೃಢೀಕರಣಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು. ಇದು ವಿದೇಶಗಳಲ್ಲಿ ಅನುಮೋದನೆ ಪಡೆಯಲು ಕೋವ್ಯಾಕ್ಸಿನ್‌ಗೆ ಅಡೆತಡೆ ಉಂಟು ಮಾಡಿದೆ.
ಕೋವ್ಯಾಕ್ಸಿನ್ ಲಸಿಕೆಗೆ WHO ಅನುಮೋದನೆ ನೀಡುವ ಸಂಬಂಧ ಹಲವು ತಿಂಗಳುಗಳಿಂದ ಪ್ರಕ್ರಿಯೆ ಮುಂದುವರೆದಿದೆ.












Click it and Unblock the Notifications