Haryana: 30 ವರ್ಷಗಳಲ್ಲಿ 55 ಬಾರಿ ವರ್ಗಾವಣೆಗೊಂಡ IAS ಅಧಿಕಾರಿ!
ಚಂಡೀಗಢ ಜ.10 : ಆಡಳಿತ ವ್ಯವಸ್ಥೆಯಲ್ಲಿನ ಬದಲಾವಣೆಗಾಗಿ ಹರಿಯಾಣ ಸರ್ಕಾರವು ಸೋಮವಾರದಂದು ಹಿರಿಯ ಐಎಎಸ್ ಅಧಿಕಾರಿಯ ಅಶೋಕ ಖೇಮ್ಕಾ ಅವರನ್ನು ವರ್ಗಾವಣೆ ಮಾಡಿ ಆದೇಶವನ್ನು ಹೊರಡಿಸಿದೆ. ಈ ಮೂಲಕ ಖೇಮ್ಕಾ ಅವರ 30 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ 55ನೇ ವರ್ಗಾವಣೆ ಇದಾಗಿದೆ.
ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಖೇಮ್ಕಾ ಅವರನ್ನು ಪತ್ರಾಗಾರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನಾಗಿ ನಿಯೋಜಿಸಲಾಗಿದೆ.
ಈ ಹಿಂದಿನ ಅವಧಿಯಲ್ಲಿ ಖೇಮ್ಕಾ ಅವರು ಪತ್ರಾಗಾರ ಇಲಾಖೆಯ ಮಹಾ ನಿರ್ದೇಶಕರಾಗಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತದಲ್ಲಿ ಪತ್ರಾಗಾರ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 1990ರ ಬ್ಯಾಚ್‌ನ ಐಎಎಸ್ ಅಧಿಕಾರಿ ಡಾ.ರಾಜಶೇಖರ್ ವುಂಡ್ರು ಅವರ ಸ್ಥಾನಕ್ಕೆ ಖೇಮ್ಕಾ ನೇಮಕವಾಗಲಿದ್ದಾರೆ. ಈ ಮೂಲಕ ಖೇಮ್ಕಾ ಅವರನ್ನು ನಾಲ್ಕನೇ ಬಾರಿ ಪತ್ರಾಗಾರ ಇಲಾಖೆಗೆ ನಿಯೋಜಿಸಲಾಗಿದೆ. 2013ರಲ್ಲಿ ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮೊದಲ ಬಾರಿಗೆ ಇಲಾಖೆಗೆ ವರ್ಗಾಯಿಸಲಾಗಿತ್ತು.

ಬಲ್ಲ ಮೂಲಗಳ ಮಾಹಿತಿ ಪ್ರಕಾರ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯನ್ನು ಉನ್ನತ ಶಿಕ್ಷಣ ಇಲಾಖೆಯೊಂದಿಗೆ ವಿಲೀನಗೊಳಿಸಿದ ನಂತರ ಕೆಲಸದ ಹೊರೆ ಕಡಿಮೆಯಾಗಿದೆ. ಈ ಇಲಾಖೆಯಲ್ಲಿ ವಾರದಲ್ಲಿ ಎರಡರಿಂದ ಮೂರು ಗಂಟೆ ಮಾತ್ರ ಕೆಲಸ ಮಾಡಲಾಗುತ್ತಿದೆ ಎಂದು ಹರಿಯಾಣದ ಮುಖ್ಯ ಕಾರ್ಯದರ್ಶಿ ಸರ್ವೇಶ್ ಕೌಶಲ್ ಅವರಿಗೆ ಖೇಮ್ಕಾ ಪತ್ರ ಬರೆದಿದ್ದರು. ಈ ಮಾಹಿತಿಯನ್ವ ಪತ್ರ ಬರೆದ ಕೆಲವೇ ದಿನಗಳಲ್ಲಿ ವರ್ಗಾವಣೆ ಆದೇಶ ಹೊರಡಿಸಲಾಗಿದೆ ಎನ್ನಲಾಗುತ್ತಿದೆ.
ಎಸಿಎಸ್ ಶ್ರೇಣಿಯ ಅಧಿಕಾರಿ ವಾರಕ್ಕೆ ಕನಿಷ್ಠ 40 ಗಂಟೆಗಳ ವರೆಗೆ ಕಾರ್ಯ ನಿರ್ವಹಿಸಬೇಕು. ಕೇಡರ್ ಅಧಿಕಾರಿಗಳಿಗೆ ಸಾಕಷ್ಟು ಕೆಲಸದ ಹೊರೆ ಇಲ್ಲದಿದ್ದರೆ ನಾನ್ ಕೇಡರ್ ಅಧಿಕಾರಿಗಳನ್ನು ಆಡಳಿತಾತ್ಮಕ ಕಾರ್ಯದರ್ಶಿಗಳ ಅದೇಶದ ಮೇರೆಗೆ ನಿಯೋಜಿತ ಹುದ್ದೆಯಿಂದ ತೆಗೆದು ಹಾಕಬೇಕು. ಅಥವಾ ಅವರನ್ನು ತಮ್ಮ ಸ್ವಂತ ಇಲಾಖೆಗಳಿಗೆ ಮರಳಿ ಕಳುಹಿಸಬಹುದು ಎಂದು ಖೇಮ್ಕಾ ಪತ್ರದಲ್ಲಿ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಐಎಎಸ್ ಅಧಿಕಾರಿ ಖೇಮ್ಕಾ ವೃತ್ತಿ ಜೀವನದಲ್ಲಿ ಹಲವಾರು ವಿವಾದ ಮತ್ತು ವರ್ಗಾವಣೆಗಳಿಂದ ಗುರುತಿಸಿಕೊಂಡಿದ್ದರು. 2012 ರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಮತ್ತು ಡಿಎಲ್ಎಫ್ ಕಂಪನಿ ನಡುವಿನ ಭೂ ವ್ಯವಹಾರವನ್ನು ರದ್ದುಗೊಳಿಸುವ ಮೂಲಕ ಭಾರಿ ಸುದ್ದಿಯಲ್ಲಿದ್ದರು.

ಐದು ಅಧಿಕಾರಿಗಳ ವರ್ಗಾವಣೆ !
ಅಶೋಕ ಖೇಮ್ಕಾ ಸೇರಿದಂತೆ ಐವರು ಅಧಿಕಾರಿಗಳನ್ನು ಹರಿಯಾಣ ಸರ್ಕಾರ ವರ್ಗಾಯಿಸಿದೆ. ಮಾನವ ಮಲಿಕ್, ಅಮಿತ್ ಕುಮಾರ್, ಮಾಯಾಂಕ್ ಭಾರದ್ವಾಜ್ ಮತ್ತು ದೇವೇಂದ್ರ ಶರ್ಮಾ ಎಂಬ ಅಧಿಕಾರಿಗಳನ್ನು ವಿವಿಧ ವಿಭಾಗಗಳಿಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಮಾನವ ಮಲಿಕ್ ಅವರನ್ನು ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿಯ ವಿಚಾರಣಾ ಅಧಿಕಾರಿಯಾಗಿ ನಿಯೋಜಿಸಲಾಗಿದೆ. ಅಮಿತ್ ಕುಮಾರ್ ಮತ್ತು ದೇವೇಂದ್ರ ಶರ್ಮಾ ಅವರನ್ನು ಉಪ ವಿಭಾಗಾಧಿಕಾರಿಯಾಗಿ ಮತ್ತು ಮಾಯಾಂಕ್ ಭಾರದ್ವಾಜ್ ಅವರನ್ನು ರೇವಾರಿಯ ಮ್ಯಾಜಿಸ್ಟ್ರೇಟ್ ಆಗಿ ವರ್ಗಾಯಿಸಲಾಗಿದೆ.












Click it and Unblock the Notifications