ಬಿಜೆಪಿ-ಎಐಎಡಿಎಂಕೆ ಮೈತ್ರಿಗೆ ಹುಳಿ ಹಿಂಡಿದ್ದು ಯಾರು? ಪ್ರಮುಖ ಕಾರಣಗಳೇನು? ಇನ್‌ಸೈಡ್ ರಿಪೋರ್ಟ್
ಬಿಜೆಪಿಯೊಂದಿಗಿನ ಮೈತ್ರಿಯನ್ನು ಎಐಎಡಿಎಂಕೆ ಮುರಿದುಕೊಂಡಿದೆ. ದೀರ್ಘಾವಧಿಯ ಸ್ನೇಹದಿಂದ ದೂರವಾಗಿರುವ ಎಐಎಡಿಎಂಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ ಎಂದು ಹೇಳಲಾಗುತ್ತಿದೆ. ಮೈತ್ರಿ ಮುರಿದುಕೊಳ್ಳುವ ನಿರ್ಧಾರ ಹೊರಬೀಳುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಎಐಎಡಿಎಂಕೆ ಪ್ರಧಾನ ಕಛೇರಿ ಎದುರು ಪಟಾಕಿ ಸಿಡಿಸಿ ಸಂಭ್ರಮಾಚರಣೆಯನ್ನು ಮಾಡಿದ್ದಾರೆ. ಈ ಮೈತ್ರಿಗೆ ಹುಳಿ ಹಿಂಡಿದ್ದು ಯಾರು? ಇದಕ್ಕೆ ಪ್ರಮುಖ ಕಾರಣಗಳೇನು ಎಂಬುದನ್ನು ತಿಳಿಯಿರಿ
ಬಿಜೆಪಿ ಹಾಗೂ ಎಐಎಡಿಎಂ ನಡುವೆ ಸುದೀರ್ಘ ಕಾಲದ ಮೈತ್ರಿ ಇತ್ತು. ಕರುಣಾನಿಧಿ ಅವರ ಡಿಎಂಕೆ ಕಾಂಗ್ರೆಸ್ ಜೊತೆ ಸಖ್ಯ ಹೊಂದಿದ್ದರೆ, ಜಯಲಲಿತಾ ನೇತೃತ್ವದ ಎಐಎಡಿಎಂಕೆ ಬಿಜೆಪಿ ಜೊತೆ ಸಖ್ಯ ಬೆಳೆಸಿದರು. ಆದರೆ, ಈ ಮೈತ್ರಿ ನಿನ್ನೆಗೆ ಕೊನೆಗೊಂಡಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ಎಐಎಡಿಎಂಕೆ ನಾಯಕರು ನಿರ್ಧರಿಸಿದ್ದಾರೆ. ತಮಿಳುನಾಡಿನಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ ಬಿಜೆಪಿಗೆ ಇದು ಆಘಾತವೆಂದೇ ಹೇಳಬಹುದು.

ಈ ಮೈತ್ರಿ ಮುರಿದು ಬೀಳಲು ಪ್ರಮುಖ ಕಾರಣವೆಂದರೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ. ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟದ ವಿಸರ್ಜನೆಗೆ ಅವರು ಸಂಪೂರ್ಣ ಹೊಣೆಗಾರರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
2024 ರ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿರುವಾಗ, ಎಐಎಡಿಎಂಕೆ ಈ ನಿರ್ಧಾರ ತೆಗೆದುಕೊಂಡಿದೆ. ಜಯಲಲಿತಾ ನಿಧನದ ಬಳಿಕ ಪಕ್ಷವು ಉತ್ತಮವಾದ ಸ್ಥಿತಿಯಲ್ಲಿ ಉಳಿದಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಕೊಂಡಿದೆ. ಪಕ್ಷದಲ್ಲಿ ಆಂತರಿಕ ಬಿನ್ನಾಭಿಪ್ರಾಯಗಳು ದೊಡ್ಡ ಮಟ್ಟದಲ್ಲೇ ಇವೆ. ಇದು ಎಐಎಡಿಎಂಕೆಯನ್ನು ಸಂಪೂರ್ಣವಾಗಿ ನೆಲಕಚ್ಚುವಂತೆ ಮಾಡಿದೆ.

ಈಗ ಮೈತ್ರಿಯಿಂದ ಹೊರಬರುವ ನಿರ್ಧಾರದಂತೆ, ಪಕ್ಷಕ್ಕೆ ಬಲ ತುಂಬಲು ಎಐಎಡಿಎಂಕೆ ನಾಯಕರು ನಿರ್ಧರಿಸಿದ್ದಾರೆ. ಒಂದು ವೇಳೆ, ಬಿಜೆಪಿ ಜೊತೆ ಹೋದರೆ, ತಮ್ಮ ಪಕ್ಷಕ್ಕೆ ಉಳಿಗಾಲವಿಲ್ಲ ಎಂಬುದನ್ನು ಮನಗಂಡಿರುವ ಎಐಎಡಿಎಂಕೆ ನಾಯಕರು ಮೈತ್ರಿ ಮುರಿದುಕೊಳ್ಳುವ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ.
ಮುರಿದುಬಿದ್ದ ಮೈತ್ರಿ ಹಿಂದಿನ ಕಾರಣಗಳೇನು?
ಜೂನ್ 2022: ತಮಿಳುನಾಡಿನಲ್ಲಿ ಎಐಎಡಿಎಂಕೆಯನ್ನು ಬಳಸಿಕೊಂಡು ಬಿಜೆಪಿ ಬೆಳೆಯಲು ಪ್ರಯತ್ನಿಸುತ್ತಿದೆ ಎಂದು ಹಿರಿಯ ಎಐಎಡಿಎಂಕೆ ನಾಯಕ ಸಿ ಪೊನ್ನಯ್ಯನ್ ಹೇಳಿಕೆ ನೀಡಿದ್ದರು.
ಫೆಬ್ರವರಿ 2023: ಈರೋಡ್ ಉಪಚುನಾವಣೆಯ ಸಮಯದಲ್ಲಿ, ಎಐಎಡಿಎಂಕೆ ತನ್ನ ಒಕ್ಕೂಟವನ್ನು 'ಎನ್‌ಡಿಎ' ಬದಲಿಗೆ 'ಎಐಎಡಿಎಂಕೆ ಮೈತ್ರಿ' ಎಂದು ಕರೆಯುವ ಬ್ಯಾನರ್ ಅನ್ನು ಹಾಕಲಾಗಿತ್ತು.
ಮಾರ್ಚ್ 2023: ಬಿಜೆಪಿ ಐಟಿ ವಿಭಾಗದ ಕಾರ್ಯಾಧ್ಯಕ್ಷ ಸಿ ಟಿ ಆರ್ ನಿರ್ಮಲ್ ಕುಮಾರ್ ಎಐಎಡಿಎಂಕೆಗೆ ಸೇರ್ಪಡೆಯಾಗುತ್ತಿದ್ದಂತೆ ಬಿಜೆಪಿ ಮತ್ತು ಎಐಎಡಿಎಂಕೆ ಪದಾಧಿಕಾರಿಗಳು ಪರಸ್ಪರ ವಾಗ್ದಾಳಿ ನಡೆಸಿದ್ದರು.

ಅಣ್ಣಾಮಲೈ ಅವರು ತಮ್ಮ ಪತ್ನಿ ಜಯಲಲಿತಾ ಅವರಿಗಿಂತ ಶೇ 100 ರಷ್ಟಯ ಹೆಚ್ಚು ಶಕ್ತಿಶಾಲಿ ಎಂದು ಹೇಳಿದ್ದರು. ಇದಕ್ಕೆ ಎಐಎಡಿಎಂಕೆ ಕೆಂಡಾಮಂಡಲವಾಗಿತ್ತು.
ಏಪ್ರಿಲ್ 2023: ಇದುವರೆಗೆ ತಮಿಳುನಾಡಿನಲ್ಲಿ ಆಡಳಿತ ನಡೆಸಿದ ಎಲ್ಲ ಪಕ್ಷಗಳು ಮಾಡಿರುವ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತೇವೆ ಎಂದು ಅಣ್ಣಾಮಲೈ ಗುಡುಗಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ್ದ ಇಪಿಎಸ್, 'ಆತನ (ಅಣ್ಣಾಮಲೈ) ಬಗ್ಗೆ ಪ್ರಶ್ನೆಗಳನ್ನು ಕೇಳಬೇಡಿ. ಪ್ರಬುದ್ಧ ರಾಜಕಾರಣಿಗಳ ಟೀಕೆಗಳಿಗೆ ನಾನು ಪ್ರತಿಕ್ರಿಯಿಸಲು ಸಿದ್ಧನಿದ್ದೇನೆ. ಆತನಿಗಲ್ಲ' ಎಂದು ಇಪಿಎಸ್ ಹೇಳಿದ್ದರು.
ಜೂನ್ 2023: ತಮಿಳುನಾಡಿನ ಮಾಜಿ ಸಿಎಂಗಳು ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕ್ಷೆಗೆ ಗುರಿಯಾಗಿದ್ದಾರೆ ಎಂದು ಅಣ್ಣಾಮಲೈ ಟೀಕಿಸಿದ್ದರು. ಇದು ಜಯಲಲಿತಾ ವಿರುದ್ಧದ ಪರೋಕ್ಷ ಹೇಳಿಕೆಯಾಗಿತ್ತು. ಈ ಕುರಿತು ಅಣ್ಣಾಮಲೈ ಅವರನ್ನು ಖಂಡಿಸುವ ನಿರ್ಣಯವನ್ನು ಎಐಎಡಿಎಂಕೆ ಅಂಗೀಕರಿಸಿತು.
ಸೆಪ್ಟೆಂಬರ್ 18: ಸದ್ಯಕ್ಕೆ ಬಿಜೆಪಿಯೊಂದಿಗೆ ಮೈತ್ರಿ ಇಲ್ಲವೆಂದು ಎಐಎಡಿಎಂಕೆ ನಾಯಕ ಡಿ ಜಯಕುಮಾರ್ ಘೋಷಿಸಿದ್ದಾರೆ












Click it and Unblock the Notifications