ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಮಾಡಲಾಗದಿದ್ದನ್ನು ರಾಜಸ್ಥಾನದಲ್ಲಿ ಗೆಹ್ಲೋಟ್ ಮಾಡಿ ತೋರಿಸಿದರು
ರಾಜಸ್ಥಾನದಲ್ಲಿ ಉಪಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನದಿಂದ ಸಚಿನ್ ಪೈಲಟ್ ಅವರನ್ನು ವಜಾಗೊಳಿಸಿದ ನಂತರ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸದ್ಯದ ಮಟ್ಟಿಗೆ ಮೇಲುಗೈ ಸಾಧಿಸಿದ್ದಾರೆ.
Recommended Video
ರಾಹುಲ್ ಗಾಂಧಿಯವರ ಆಪ್ತ ವಲಯದಲ್ಲಿ ಪೈಲಟ್ ಗುರುಸಿಕೊಂಡಿದ್ದರೂ, ರಾಜಸ್ಥಾನದ ಸಿಎಲ್ಪಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವಾಗಿದ್ದರಿಂದ, ಪೈಲಟ್ ಅವರ ತಲೆದಂಡಕ್ಕೆ ಹೈಕಮಾಂಡ್ ಒಪ್ಪಿಗೆ ಸೂಚಿಸಲೇ ಬೇಕಾಯಿತು.
ರಾಜಸ್ಥಾನದಲ್ಲಿ ಒಂದು ವೇಳೆ ವಿಶ್ವಾಸಮತ ಸಾಬೀತು ಪಡಿಸಬೇಕಾದ ಪರಿಸ್ಥಿತಿ ಎದುರಾದಲ್ಲಿ, ಅದು ಸಿಎಂ ಗೆಹ್ಲೋಟ್ ಗೆ ಸುಲಭದ ತುತ್ತೇನೂ ಅಲ್ಲ. ಪೈಲಟ್ ಬಣದ ಶಾಸಕರ ಲೆಕ್ಕ ತೆಗೆದುಕೊಳ್ಲದಿದ್ದರೂ, ಗೆಹ್ಲೋಟ್ ಗೆ ಬಹುಮತವಿದೆ ಎನ್ನುವುದು ಈಗಿನ ಲೆಕ್ಕಾಚಾರ.
ರಾಜಸ್ಥಾನದ ಕಾಂಗ್ರೆಸ್ ಸಿಎಲ್ಪಿ ಸಭೆಯಲ್ಲಿ, ವಜಾಗೊಳಿಸುವಂತಹ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಬಹುಷಃ ಸಚಿನ್ ಪೈಲಟ್ ನಿರೀಕ್ಷಿಸಿರಲಿಕ್ಕಿಲ್ಲ. ಅಶೋಕ್ ಗೆಹ್ಲೋಟ್ ತೆಗೆದುಕೊಂಡಂತಹ ನಿರ್ಧಾರವನ್ನು ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ತೆಗೆದುಕೊಳ್ಳಲು ವಿಫಲರಾಗಿದ್ದರು.

ಕಮಲ್ ನಾಥ್ ವಿಫಲ
ಕೆಲವು ತಿಂಗಳ ಹಿಂದೆ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿತ್ತು. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ-ಕಾಂಗ್ರೆಸ್ ಬಲಾಬಲ ಒಂದೇ ರೀತಿಯಲ್ಲಿ ಇಲ್ಲದಿದ್ದರೂ, ಅಶೋಕ್ ಗೆಹ್ಲೋಟ್ ತೆಗೆದುಕೊಂಡಂತಹ ಗಟ್ಟಿ ನಿರ್ಧಾರವನ್ನು ಕಮಲ್ ನಾಥ್ ತೆಗೆದುಕೊಳ್ಳಲು ವಿಫಲರಾದರು.

ಸಚಿನ್ ಪೈಲಟ್ ಅವರ ಜೊತೆಗಿನ ಭಿನ್ನಾಭಿಪ್ರಾಯ
ಮಧ್ಯಪ್ರದೇಶದಲ್ಲಿ ಇದ್ದಂತಹ ಪರಿಸ್ಥಿತಿ ರಾಜಸ್ಥಾನದಲ್ಲೂ ಇತ್ತು. ಗೆಹ್ಲೋಟ್ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ, ಸಚಿನ್ ಪೈಲಟ್ ಅವರ ಜೊತೆಗಿನ ಭಿನ್ನಾಭಿಪ್ರಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇತ್ತು. ಇದರ ಮುನ್ಸೂಚನೆಯನ್ನು ಅರಿತ ಗೆಹ್ಲೋಟ್ ತನ್ನ ಬಣದ ಜೊತೆಗೆ ಗುರುತಿಸಿಕೊಂಡಿರುವ ಶಾಸಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದರು.

ಬಿಜೆಪಿಯ ಸರಕಾರ ಉರುಳಿಸುವ ಕಾರ್ಯತಂತ್ರ
ಆದರೆ, ಮಧ್ಯಪ್ರದೇಶದಲ್ಲಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸಕ್ಕೆ ಕಮಲ್ ನಾಥ್ ಮುಂದಾಗಿರಲಿಲ್ಲ. ಈ ಆಪಾದನೆ ಅವರ ಮೇಲೆ ಬರುತ್ತಲೇ ಇತ್ತು. ಇನ್ನು, ಬಿಜೆಪಿಯವರು ಸರಕಾರ ಉರುಳಿಸಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎನ್ನುವ ಖಚಿತ ಮಾಹಿತಿಯಿದ್ದರೂ, ಅವರು ತಡವಾಗಿ ಸ್ಪಂದಿಸಿದರು.

ಕಮಲ್ ನಾಥ್ ಮಾಡಲಾಗದಿದ್ದನ್ನು ರಾಜಸ್ಥಾನದಲ್ಲಿ ಗೆಹ್ಲೋಟ್ ಮಾಡಿ ತೋರಿಸಿದರು
ಇನ್ನು, ಪೈಲಟ್ ರೀತಿಯಲ್ಲಿ ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಕೂಡಾ ಪ್ರಭಾವಿ ಮುಖಂಡ. ಅವರು ಬಿಜೆಪಿಯ ಕೇಂದ್ರ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನುವ ಮಾಹಿತಿಯಿದ್ದರೂ, ಕಮಲ್ ನಾಥ್, ಯಾವುದೇ ಕಠಿಣ ಕ್ರಮಕ್ಕೆ ಮುಂದಾಗಲಿಲ್ಲ. ಹಾಗಾಗಿ, ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಮಾಡಲಾಗದಿದ್ದನ್ನು ರಾಜಸ್ಥಾನದಲ್ಲಿ ಗೆಹ್ಲೋಟ್ ಮಾಡಿ ತೋರಿಸಿದರು ಎಂದು ಸದ್ಯದ ರಾಜಕೀಯ ಪರಿಸ್ಥಿತಿ ನೋಡಿದಾಗ ಅವಲೋಕಿಸಬಹುದು.












Click it and Unblock the Notifications