ISRO: ಎಸ್ಎಸ್ಎಲ್‌ವಿಗೆ ಶಕ್ತಿ ತುಂಬಿದ ಇಸ್ರೋ ಬೂಸ್ಟರ್
ISRO: ಎಸ್ಎಸ್ಎಲ್‌ವಿಗೆ ಶಕ್ತಿ ತುಂಬಿದ ಇಸ್ರೋ ಬೂಸ್ಟರ್ ನೀಡಿದೆ ಈ ಬಗ್ಗೆ ಲೇಖಕರು, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಗಿರೀಶ್ ಲಿಂಗಣ್ಣ ಅವರ ಬರಹ ಇಲ್ಲಿದೆ. ಭಾರತದ ಅತ್ಯಂತ ಸಣ್ಣದಾದ ರಾಕೆಟ್‌ಗೆ ಈಗ ದೊಡ್ಡ ಸಾಮರ್ಥ್ಯ ಲಭಿಸಿದೆ. ಆಗಸ್ಟ್ 11, 2026ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಎಸ್ಎಸ್1 ಎನ್ನುವ ಸುಧಾರಿತ ಸಾಲಿಡ್ ಬೂಸ್ಟರ್ ಹಂತದ ಭೂ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಇದು ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌ನ (ಎಸ್ಎಸ್ಎಲ್‌ವಿ) ಮೊದಲ ಹಂತವಾಗಿರಲಿದೆ. ಪ್ರಸ್ತುತ ಪರೀಕ್ಷೆಯನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಸ್ಟಾಟಿಕ್ ಪರೀಕ್ಷಾ ವ್ಯವಸ್ಥೆಯಲ್ಲಿ ನಡೆಸಲಾಯಿತು.
ಸ್ಟ್ಯಾಟಿಕ್ ಪರೀಕ್ಷೆ ಎಂದರೆ, ಮೋಟಾರನ್ನು ಸ್ಥಿರವಾಗಿ ಭೂಮಿಯಲ್ಲಿ ಅಳವಡಿಸಿ, ಅದು ಎಲ್ಲಿಗೂ ಚಲಿಸದಿರುವಾಗಲೇ ಪರೀಕ್ಷಿಸುವುದಾಗಿದೆ. ಇಲ್ಲಿ ರಾಕೆಟ್ ಹಂತವನ್ನು ಬಲವಾಗಿ ಅಳವಡಿಸಿ, ಉರಿಸಿ, ಸಂಪೂರ್ಣವಾಗಿ ದಹಿಸುವಂತೆ ಮಾಡಲಾಗುತ್ತದೆ. ಇಂಜಿನಿಯರ್‌ಗಳು ಈ ಸಂಪೂರ್ಣ ಪ್ರಕ್ರಿಯೆಯ ಪ್ರತಿಯೊಂದು ಸೆಕೆಂಡನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ. ಒಂದು ಘನ ಇಂಧನ ಮೋಟಾರನ್ನು ಒಂದು ಬಾರಿ ಚಾಲ್ತಿಗೊಳಿಸಿದರೆ, ಅದನ್ನು ನಿಲ್ಲಿಸಲಾಗಲಿ, ನಿಧಾನಗೊಳಿಸಲಾಗಲಿ, ಅಥವಾ ಪುನರಾರಂಭಿಸಲಾಗಲಿ ಸಾಧ್ಯವಿಲ್ಲದ್ದರಿಂದ ಇಂತಹ ಪರೀಕ್ಷೆ ಮುಖ್ಯವಾಗುತ್ತದೆ. ಇದು ಇಂಧನ ಸಂಪೂರ್ಣವಾಗಿ ಖಾಲಿಯಾಗುವ ತನಕ ದಹಿಸುತ್ತದೆ. ಆದ್ದರಿಂದ, ಮೊದಲೇ ಎಲ್ಲವನ್ನೂ ಖಚಿತಪಡಿಸಿಕೊಳ್ಳಬೇಕು. ಸಮುದ್ರ ಮಟ್ಟದಿಂದ ಐವತ್ತು ಕಿಲೋಮೀಟರ್ ಎತ್ತರದಲ್ಲಿ ದೋಷ ಪತ್ತೆಹಚ್ಚುವುದರಿಂದ, ಭೂಮಿಯಲ್ಲೇ ದೋಷ ಅಥವಾ ದೌರ್ಬಲ್ಯಗಳನ್ನು ಗುರುತಿಸುವುದು ಹೆಚ್ಚು ಸುರಕ್ಷಿತವಾಗಿದೆ.

ISRO: ಎಸ್ಎಸ್1 ರಲ್ಲಿ ಸುಧಾರಣೆಯಾಗಿರುವುದೇನು ?
ಮೊದಲ ಬದಲಾವಣೆ ಆಗಿರುವುದು ಇಂಧನದಲ್ಲಿ. ಘನ ಇಂಧನವನ್ನು ಮೋಟಾರ್ ಒಳಗೆ ದಪ್ಪನೆಯ ಕ್ಯಾಂಡಲ್ ರೀತಿಯಲ್ಲಿ ಅಳವಡಿಸಲಾಗುತ್ತದೆ. ಇದು ಸಂಪೂರ್ಣವಾಗಿ ಒಳಗಿನಿಂದಲೇ ದಹಿಸುತ್ತದೆ. ಗ್ರೇಯ್ನ್ ಎಂದು ಕರೆಯಲಾಗುವ ಈ ಘನ ಇಂಧನದ ಆಕಾರವನ್ನು ಬದಲಾಯಿಸುವುದರಿಂದ, ಯಾವುದೇ ಕ್ಷಣದಲ್ಲಾದರೂ ಎಷ್ಟರ ಪ್ರಮಾಣದಲ್ಲಿ ಇದು ದಹಿಸುತ್ತದೆ, ಎಷ್ಟು ವೇಗವಾಗಿ ದಹಿಸುತ್ತದೆ ಎನ್ನುವುದನ್ನು ಇಂಜಿನಿಯರ್‌ಗಳು ನಿಯಂತ್ರಿಸಬಹುದು. ನೂತನ ವಿನ್ಯಾಸದಲ್ಲಿ, ಮೋಟಾರ್‌ನ ಎರಡು ವಿಭಾಗಗಳಲ್ಲಿರುವ ಇಂಧನ ಹೆಚ್ಚು ವೇಗವಾಗಿ ದಹಿಸಿ, ಅನಿಲಗಳನ್ನು ಬೇಗನೆ ಹೊರಹಾಕಿ, ಅವಶ್ಯಕ ಥ್ರಸ್ಟ್ ಅನ್ನು ಹೆಚ್ಚು ದಕ್ಷವಾಗಿ ಒದಗಿಸುತ್ತದೆ.
ಎರಡನೆಯ ಸುಧಾರಣೆ ಇರುವುದು ಥರ್ಮಲ್ ಉತ್ಪಾದನಾ ವ್ಯವಸ್ಥೆಯಲ್ಲಿ. ಘನ ಇಂಧನ ದಹಿಸುವಾಗ, ಒಳಭಾಗದ ತಾಪಮಾನ ಸಾಕಷ್ಟು ಹೆಚ್ಚಾಗಿ, ಲೋಹಕ್ಕೂ ಹಾನಿಯಾಗಬಹುದು. ಆದ್ದರಿಂದಲೇ ಒಳ ಗೋಡೆಗಳನ್ನು ತಾಪ ನಿರೋಧಕ ವಸ್ತುಗಳೊಡನೆ ಜೋಡಿಸಲಾಗಿರುತ್ತದೆ. ಇದನ್ನು ಫ್ಲಾಸ್ಕ್ ಬಿಸಿಯಾದ ಚಹಾ ನಿಮ್ಮ ಕೈ ಸುಡದಂತೆ ತಡೆಯುವುದಕ್ಕೆ ಹೋಲಿಸಬಹುದು.
ಇನ್ನು ಮೂರನೇ ಬದಲಾವಣೆ ಇರುವುದು ನಾಜಲ್, ಅಂದರೆ, ಕೆಳಭಾಗದಲ್ಲಿ ಬಿಸಿಯಾದ ಅನಿಲಗಳು ಹೊರಸಾಗಿ, ಥ್ರಸ್ಟ್ ಉತ್ಪಾದಿಸುವ ಗಂಟೆಯಾಕಾರದ ವಸ್ತುವಿನಲ್ಲಿ. ನೂತನ ನಾಜಲ್ ವಿನ್ಯಾಸ ಸರಳವಾಗಿದ್ದು, ಹಗುರವೂ ಆಗಿದೆ. ಇದು ದೊಡ್ಡ ಸಂಖ್ಯೆಯಲ್ಲಿ ಉತ್ಪಾದನೆ ನಡೆಸಲು ಅನುಕೂಲಕರವಾಗಿದೆ. ರಾಕೆಟ್ರಿಯಲ್ಲಿ ತೂಕ ಅತ್ಯಂತ ಮುಖ್ಯವಾದ ವಿಚಾರ. ಬಾಹ್ಯಾಕಾಶಕ್ಕೆ ಚಿಮ್ಮುವ ರಾಕೆಟ್‌ನ ಒಂದೊಂದು ಕೆಜಿಯೂ ಒಂದೊಂದು ಕೆಜಿಯಷ್ಟು ಉಪಗ್ರಹಕ್ಕೆ ಅವಕಾಶ ನೀಡುತ್ತಿತ್ತು. ಆದ್ದರಿಂದ, ಹಗುರವಾದ ಬೂಸ್ಟರ್ ನೇರವಾಗಿಯೇ ರಾಕೆಟ್‌ನ ದಕ್ಷತೆಯನ್ನು ಹೆಚ್ಚಿಸುತ್ತದೆ.
ದಹನ ಪ್ರಕ್ರಿಯೆಯ ಸಂದರ್ಭದಲ್ಲಿ, ಮೋಟಾರನ್ನು ಸೆನ್ಸರ್‌ಗಳ ಜಾಲದಿಂದ ಗಮನಿಸಲಾಗಿದ್ದು, ಅವು 600ಕ್ಕೂ ಹೆಚ್ಚು ವಿವಿಧ ನಿಯತಾಂಕಗಳನ್ನು ದಾಖಲಿಸಿವೆ. ಈ ಉಪಕರಣಗಳು ಮೋಟಾರ್ ಎಷ್ಟು ಸುಗಮವಾಗಿ ದಹಿಸಿತು, ಇಂಧನ ಹೇಗೆ ಉರಿದು, ಥ್ರಸ್ಟ್ ಉತ್ಪಾದಿಸಿತು, ಮೋಟಾರ್ ಎಷ್ಟು ಗಟ್ಟಿಯಾಗಿ ಉಳಿಯಿತು, ಎಷ್ಟು ತಾಪ ಬಿಡುಗಡೆಯಾಯಿತು, ಮೋಟಾರ್ ಎಷ್ಟು ಕಂಪಿಸಿ ಅಲ್ಲಾಡಿತು, ಎಷ್ಟು ಶಬ್ದ ಮತ್ತು ಒತ್ತಡ ಬಿಡುಗಡೆಯಾಯಿತು ಎನ್ನುವುದನ್ನು ಗಮನಿಸಿದವು. ಇದನ್ನು ರಾಕೆಟ್ ಅತ್ಯಧಿಕ ಒತ್ತಡದಲ್ಲಿ ಇರುವಾಗಲೇ ನಡೆಸಿದ ಪೂರ್ಣ ದೇಹದ ಆರೋಗ್ಯ ತಪಾಸಣೆ ಎಂದುಕೊಳ್ಳಿ.
ಫಲಿತಾಂಶಗಳೂ ಪ್ರೋತ್ಸಾಹದಾಯಕವಾಗಿದ್ದವು. ಮೋಟಾರ್ ಇಸ್ರೋದ ಲೆಕ್ಕಾಚಾರಗಳು ನಿರೀಕ್ಷಿಸಿದ್ದ ರೀತಿಯಲ್ಲೇ ವರ್ತಿಸಿ, ವಿನ್ಯಾಸ ಬದಲಾವಣೆ ಊಹಿಸಿದಂತೆಯೇ ಕಾರ್ಯಾಚರಿಸಿರುವುದನ್ನು ಸಾಬೀತುಪಡಿಸಿತು. ಇದರ ಪ್ರಯೋಜನ ನೇರವಾಗಿದ್ದು, ಅಳತೆಗೆ ಸಿಗುವಂತಿದೆ: ಸುಧಾರಿತ ಎಸ್ಎಸ್1 ಹಂತದ ಮೂಲಕ, ಎಸ್ಎಸ್ಎಲ್‌ವಿ ಅಂದಾಜು 100 ಕೆಜಿಯಷ್ಟು ಹೆಚ್ಚುವರಿ ತೂಕವನ್ನು ಭೂಮಿಯ ಕೆಳ ಕಕ್ಷೆಗೆ ಒಯ್ಯಬಲ್ಲದು. ಕೆಳ ಕಕ್ಷೆ ಭೂಮಿಗೆ ಹೆಚ್ಚು ಸನಿಹವಿದ್ದು, ಇಲ್ಲಿ ಬಹುತೇಕ ಸಣ್ಣ ಉಪಗ್ರಹಗಳು ಕಾರ್ಯಾಚರಿಸುತ್ತವೆ.
ಎಸ್ಎಸ್ಎಲ್‌ವಿ ಎನ್ನುವುದು ಇಸ್ರೋ ನಿರ್ಮಿಸಿರುವ ಸಣ್ಣ ರಾಕೆಟ್ ಆಗಿದ್ದು, ಸಣ್ಣ ಉಪಗ್ರಹಗಳನ್ನು ಒಯ್ಯುತ್ತದೆ. ಇದು ಗಾತ್ರದಲ್ಲಿ ಸಣ್ಣದು, ಹೆಚ್ಚು ವೇಗ ಹೊಂದಿದ್ದು, ಉಪಗ್ರಹಗಳಿಗೆ ಬೃಹತ್ ರಾಕೆಟ್ ಅವಶ್ಯಕತೆ ಇಲ್ಲದಿರುವ ಸಂದರ್ಭಗಳಿಗೆ ಸೂಕ್ತವಾಗಿದೆ. ಎಸ್ಎಸ್ಎಲ್‌ವಿ ಅಂದಾಜು 34 ಮೀಟರ್ ಎತ್ತರ, 2 ಮೀಟರ್ ಅಗಲವಿದ್ದು, ಮೇಲಕ್ಕೇರುವ ಸಂದರ್ಭದಲ್ಲಿ ಅಂದಾಜು 120 ಟನ್ ತೂಕ ಹೊಂದಿದೆ. ಇದು 500 ಕೆಜಿಯಷ್ಟು ತೂಕವನ್ನು 500 ಕಿಲೋಮೀಟರ್ ಎತ್ತರದ ಭೂಮಿಯ ಕೆಳ ಕಕ್ಷೆಯಲ್ಲಿ ಅಳವಡಿಸಬಲ್ಲದು.
ರಾಕೆಟ್ ಮೂರು ಘನ ಇಂಧನ ಹಂತಗಳನ್ನು ಒಂದರ ನಂತರ ಒಂದರಂತೆ ಬಳಸಿಕೊಂಡು ಮೇಲಕ್ಕೆ ಹಾರುತ್ತದೆ. ಇದರ ಸಂಪೂರ್ಣ ಮೇಲ್ಭಾಗದಲ್ಲಿ ದ್ರವ ಇಂಧನ ವೆಲೋಸಿಟಿ ಟ್ರಿಮ್ಮಿಂಗ್ ಮಾಡ್ಯುಲ್ ಅಥವಾ ವಿಟಿಎಂ ಇರುತ್ತದೆ. ಘನ ಇಂಧನ ಹಂತಗಳನ್ನು ಮಾರ್ಗ ಮಧ್ಯದಲ್ಲಿ ವೇಗಗೊಳಿಸಲಾಗಲಿ, ನಿಲ್ಲಿಸಲಾಗಲಿ ಸಾಧ್ಯವಿಲ್ಲದ್ದರಿಂದ, ಅವು ಹೆಚ್ಚು ಬಲವಾದ, ಆದರೆ ಅಷ್ಟು ನಿಖರವಲ್ಲದ ತಳ್ಳುವಿಕೆ ಒದಗಿಸುತ್ತವೆ. ಆದರೆ ವಿಟಿಎಂ ದ್ರವ ಇಂಧನವಾಗಿದ್ದು, ಇದನ್ನು ನಿಯಂತ್ರಿಸಬಹುದು, ಅವಶ್ಯಕತೆ ಎದುರಾದಾಗ ಸ್ಥಗಿತಗೊಳಿಸಬಹುದು. ಇದು ಉಪಗ್ರಹವನ್ನು ಅದರ ನಿಖರ ಕಕ್ಷೆಗೆ ಜೋಡಿಸಲು ಬೇಕಾದ ಸೂಕ್ಷ್ಮ ಅಂತಿಮ ಹೊಂದಾಣಿಕೆಗಳನ್ನು ನಡೆಸುತ್ತದೆ.
ಸಿದ್ಧತಾ ವೇಗವೂ ಎಸ್ಎಸ್ಎಲ್‌ವಿಯನ್ನು ಭಿನ್ನವಾಗಿಸುತ್ತದೆ. ದೊಡ್ಡ ರಾಕೆಟ್‌ಗಳನ್ನು ಜೋಡಿಸಿ, ಪರೀಕ್ಷೆ ನಡೆಸಲು ಉಡಾವಣೆಗೆ ಮುನ್ನ ಹಲವು ವಾರಗಳು ಬೇಕಾಗುತ್ತವೆ. ಆದರೆ, ಎಸ್ಎಸ್ಎಲ್‌ವಿಯನ್ನು ಜೊತೆಯಾಗಿಡುವ ರೀತಿಯಲ್ಲಿ ವಿನ್ಯಾಸಗೊಳಿಸಿದ್ದು, ಇದನ್ನು ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಸಿದ್ಧಪಡಿಸಬಹುದು. ಇದಕ್ಕೆ ಕನಿಷ್ಠ ಉಡಾವಣಾ ಸೌಕರ್ಯಗಳು ಸಾಕಾಗುತ್ತವೆ. ಇದು ಅವಶ್ಯಕತೆಗೆ ಬೇಕಾದಾಗ ಉಡಾವಣೆ ಎನ್ನುಬುದು ಕೇವಲ ಘೋಷಣೆಯಾಗದೆ, ನಿಜವಾಗುವಂತೆ ಮಾಡುತ್ತದೆ.
ಹಾಗೆಂದು ಎಸ್ಎಸ್ಎಲ್‌ವಿ ಸಾಗಿಬಂದ ಹಾದಿ ಸುಲಭದ್ದಾಗಿರಲಿಲ್ಲ. 2022ರಲ್ಲಿ ಇದರ ಮೊದಲ ಹಾರಾಟ ಸಮಸ್ಯೆಗಳನ್ನು ಎದುರಿಸಿತ್ತು. ಆದರೆ, 2023ರಲ್ಲಿ ಎಸ್ಎಸ್ಎಲ್‌ವಿ-ಡಿ2 ಮತ್ತು 2024ರಲ್ಲಿ ಎಸ್ಎಸ್ಎಲ್‌ವಿ-ಡಿ3ಗಳು ಯಶಸ್ವಿಯಾಗಿ ಅಭಿವೃದ್ಧಿ ಯೋಜನೆಯನ್ನು ಪೂರ್ಣಗೊಳಿಸಿದವು.
ಇಸ್ರೋ ಎಸ್ಎಸ್ಎಲ್‌ವಿ ತಂತ್ರಜ್ಞಾನವನ್ನು ಭಾರತೀಯ ಕಂಪನಿಗಳಿಗೆ ವರ್ಗಾಯಿಸುವುದನ್ನು ಆರಂಭಿಸಿ, ಅವುಗಳು ಸ್ವತಃ ರಾಕೆಟ್ ನಿರ್ಮಿಸಲು ಅನುಕೂಲವಾಗುವಂತೆ ಮಾಡಿದೆ. ಎಸ್ಎಸ್ಎಲ್‌ವಿ ರಾಕೆಟ್‌ಗಳನ್ನು ದೊಡ್ಡ ಸಂಖ್ಯೆಯಲ್ಲಿ ಉತ್ಪಾದಿಸಿ, ವೇಗವಾಗಿ ಬೆಳೆಯುತ್ತಿರುವ ಸಣ್ಣ ಉಪಗ್ರಹ ಮಾರುಕಟ್ಟೆಗೆ ನಂಬಿಕಾರ್ಹ ಉಡಾವಣಾ ಸೇವೆ ಒದಗಿಸುವುದು ಇದರ ಉದ್ದೇಶ. ನೂತನ ಭೂ ಪರೀಕ್ಷೆ ಆ ಗುರಿಯನ್ನು ಇನ್ನಷ್ಟು ಹತ್ತಿರಾಗಿಸಿದೆ.
ಬರಹ
ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)


Click it and Unblock the Notifications
