ವರ್ಕಿಂಗ್ ವುಮೆನ್ ಹಾಸ್ಟೆಲ್ ಸ್ಕೀಮ್ ಎಂದರೇನು? ಈ ಯೋಜನೆಗೆ ಯಾರ್ಯಾರು ಅರ್ಹರು..?
ಬೆಂಗಳೂರು, ಸೆಪ್ಟೆಂಬರ್ 01: ಕಾಲ ಬದಲಾಗಿದೆ. ನಾಲ್ಕು ಗೋಡೆಗಳ ಮಧ್ಯ ಇದ್ದ ಮಹಿಳೆ ಇದೀಗ ಎಲ್ಲಾ ಕ್ಷೇತ್ರಗಳಲ್ಲೂ ತನ್ನನ್ನು ತಾನು ಗುರುತಿಸಿಕೊಂಡಿದ್ದಾಳೆ. ಉದಾಹರಣೆಗೆ ಭಾರತ ಬಾಹ್ಯಾಕಾಶ ಸಂಸ್ಥೆ ಇಸ್ರೋ ಚಂದ್ರಯಾನ-3 ಯಶಸ್ಸಿನ ಹಿಂದೆ ಮಹಿಳೆಯರು ಇರುವುದನ್ನು ನೀವು ನೆನಪಿಸಿಕೊಳ್ಳಬಹುದು.
ಆರ್ಥಿಕವಾಗಿಯೂ ಮಹಿಳೆಯರು ಸಬಲರಾಗುತ್ತಿದ್ದು, ಕೆಲಸದ ನಿಮಿತ್ತ ಮಹಿಳೆಯರು ತಮ್ಮ ಮನೆಗಳನ್ನು ಬಿಟ್ಟು ಬೇರೆ ನಗರಗಳಿಗೆ ಊರುಗಳಿಗೆ ತೆರಳುತ್ತಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಕಾರ್ಯನಿರತ ಮಹಿಳೆಯರಿಗೆ ಸಹಕಾರವಾಗು ದೃಷ್ಟಿಯಿಂದ ಸರ್ಕಾರ ಮಹಿಳಾ ಹಾಸ್ಟೆಲ್ ಯೋಜನೆ ಆರಂಭಿಸಿದೆ.

ವರ್ಕಿಂಗ್ ವುಮೆನ್ ಹಾಸ್ಟೆಲ್ ಸ್ಕೀಮ್ ಎಂದರೇನು?
ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ಸರ್ಕಾರವು ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ಇತರ ನಗರಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸರ್ಕಾರದಿಂದ ಹಾಸ್ಟೆಲ್ ಸೌಲಭ್ಯವನ್ನು ನೀಡಲಾಗುತ್ತದೆ. ಈ ಹಾಸ್ಟೆಲ್‌ನಲ್ಲಿ ಮಹಿಳೆಯರು ಸುರಕ್ಷಿತವಾಗಿ ಇದ್ದು, ತಮ್ಮ ಕೆಲಸಗಳಿಗೆ ತೆರಳಬಹುದಾಗಿದೆ.
ವರ್ಕಿಂಗ್ ವುಮೆನ್ ಹಾಸ್ಟೆಲ್ ಸ್ಕೀಮ್ ಉದ್ದೇಶವೇನು?
ಕೆಲಸ ಮಾಡುವ ಮಹಿಳೆಯರಿಗೆ ಸುರಕ್ಷತೆ ಹಾಗೂ ಉತ್ತಮ ವಸತಿ ಸೌಲಭ್ಯ ನೀಡುವ ಉದ್ದೇಶದಿಂದ ಮಹಿಳೆಯರಿಗೆ ಉದ್ಯೋಗಾವಕಾಶ ಇರುವ ನಗರ, ಅರೆ-ನಗರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ವರ್ಕಿಂಗ್ ವುಮೆನ್ ಹಾಸ್ಟೆಲ್ ವ್ಯವಸ್ಥೆ ಮಾಡಿರಲಾಗುತ್ತದೆ. ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಕೆಲಸ ಮಾಡುವ ಮಹಿಳೆಯರಿಗೆ ಇದು ಲಭ್ಯವಾಗುತ್ತದೆ. ಯೋಜನೆಯಡಿ ನಿರ್ದಿಷ್ಟ ಷರತ್ತುಗಳಿಗೆ ಒಳಪಟ್ಟು ಉದ್ಯೋಗಕ್ಕಾಗಿ ತರಬೇತಿ ಪಡೆಯುತ್ತಿರುವ ಮಹಿಳೆಯರಿಗೆ ಸಹ ಅವಕಾಶ ಸಿಗುತ್ತದೆ.

ವರ್ಕಿಂಗ್ ವುಮೆನ್ ಹಾಸ್ಟೆಲ್ ಸ್ಕೀಮ್ಗೆ ಅರ್ಹರು ಯಾರು?
ಕೆಲಸ ಮಾಡುವ ಮಹಿಳಾ ಹಾಸ್ಟೆಲ್ ಯೋಜನೆಯಡಿ, ಕೆಲಸದ ಕಾರಣದಿಂದ ತಮ್ಮ ನಗರವನ್ನು ಬಿಟ್ಟು ಬೇರೆ ಯಾವುದಾದರೂ ನಗರದಲ್ಲಿ ವಾಸಿಸುವ ಮಹಿಳೆಯರಿಗೆ ಸರ್ಕಾರವು ಹಾಸ್ಟೆಲ್ ಸೌಲಭ್ಯವನ್ನು ಒದಗಿಸುತ್ತದೆ.
ಒಂಟಿ ಮಹಿಳೆಯರಿಗೆ, ವಿಚ್ಛೇದಿತ ಮಹಿಳೆಯರಿಗೆ, ಉದ್ಯೋಗಸ್ಥ ಮಹಿಳೆಯರಿಗೆ ಅಥವಾ ವಿಧವೆಯರಿಗಾಗಿ. ಈ ಹಾಸ್ಟೆಲ್ ಗಳಲ್ಲಿ ಸ್ಥಳಾವಕಾಶ ನೀಡಲಾಗುತ್ತದೆ.
ವಿವಾಹಿತ ಮಹಿಳೆ ತನ್ನ ಕೆಲಸದ ಆಧಾರದ ಮೇಲೆ ಅರ್ಜಿ ಸಲ್ಲಿಸಬಹುದು. ಆದರೆ ಪತಿ ಅಥವಾ ಸಂಬಂಧಿಕರು ಮಹಿಳೆ ಕೆಲಸ ಮಾಡುವ ನಗರದಲ್ಲಿ ಇರಬಾರದು.
18 ವರ್ಷಕ್ಕಿಂತ ಮೇಲ್ಪಟ್ಟ 50,000 ರೂ.ಗಿಂತ ಕಡಿಮೆ ವೇತನ ಇರುವ ಮಹಿಳೆಯರು ಅರ್ಜಿ ಸಲ್ಲಿಸಬಹುದು. ನಿಬಂಧನೆಗಳ ಪ್ರಕಾರ ಆದಾಯದ ಮಿತಿಯನ್ನು ದಾಟಿದ ಗರಿಷ್ಠ 6 ತಿಂಗಳ ಅವಧಿಯಲ್ಲಿ ಹಾಸ್ಟೆಲ್ ಅನ್ನು ಖಾಲಿ ಮಾಡಬೇಕು.
ವಿಲಕ ಚೇತನ ಹಾಗೂ ಹಿಂದುಳಿದ ಸಮುದಾಯದ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಇರುತ್ತದೆ.
ಈ ಯೋಜನೆಯಡಿಯಲ್ಲಿ ಒದಗಿಸಲಾದ ಡೇ ಕೇರ್ ಸೆಂಟರ್‌ನ ಸೌಲಭ್ಯಗಳನ್ನು ದುಡಿಯುವ ತಾಯಂದಿರು ಸಹ ಪಡೆದುಕೊಳ್ಳಬಹುದು.
ವರ್ಕಿಂಗ್ ವುಮೆನ್ ಹಾಸ್ಟೆಲ್ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಕೆಳಗಿನ ಹಂತಗಳನ್ನು ಅನುಸರಿಸಬೇಕು
ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು, ಕೆಲಸ ಮಾಡುತ್ತಿರುವ ಮಹಿಳೆಯ ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್‌ಪೋರ್ಟ್, ಹಾಗೂ ಫೋಟೋಕಾಪಿ ಸೇರಿದಂತೆ ಇತರ ದಾಖಲೆಗಳನ್ನು ನೀಡಬೇಕು. ಜೊತೆಗೆ ಕೆಲಸ ಮಾಡುವ ಸ್ಥಳದ ಗುರುತಿನ ಚೀಟಿ, ನಿಮ್ಮ ಕಚೇರಿಯ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
ಮೊದಲ ಹಂತ
ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಮಹಿಳಾ ಅರ್ಜಿದಾರರು ಸಂಬಂಧಪಟ್ಟ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಬೇಕು .
ಎರಡನೇ ಹಂತ
ಅರ್ಜಿಯನ್ನು ಪಡೆದ ಮಹಿಳೆ ನಿಗದಿತ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಕೇಳಲಾದ ಎಲ್ಲಾ ಮಾಹಿತಿಯನ್ನು ತಪ್ಪಿಲ್ಲದೇ ಭರ್ತಿ ಮಾಡಬೇಕು.
ಮೂರನೇ ಹಂತ
ಸ್ಕೀಮ್ ಅರ್ಜಿ ಸಲ್ಲಿಸಲು ನೀಡಬೇಕಾದ ಎಲ್ಲಾ ದಾಖಲೆಗಳ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಪಡೆದು ಅದನ್ನು ಅರ್ಜಿ ಜೊತೆಗೆ ಲಗತ್ತಿಸ ಬೇಕು. ಇನ್ನು ಹೆಚ್ಚಿನ ಮಾಹಿತಿಗಳಿಗಾಗಿ ಸ್ಥಳೀಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಅವರೊಂದಿಗೆ ಚರ್ಚಿಸಿ ವರ್ಕಿಂಗ್ ವುಮೆನ್ ಹಾಸ್ಟೆಲ್ ಯೋಜನೆಗೆ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.












Click it and Unblock the Notifications