ಕೊರೊನಾ ಸೋಂಕು ತಗುಲಿದ ಸಂದರ್ಭ ಲಸಿಕೆ ಪಡೆದರೆ ಏನಾಗಬಹುದು?
ನವದೆಹಲಿ, ಆಗಸ್ಟ್ 14: ಸೋಂಕಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಕೊರೊನಾ ಲಸಿಕೆ ಪಡೆಯುವುದು ಅತ್ಯವಶ್ಯಕ. ಆದರೆ ಯಾವುದೇ ಲಕ್ಷಣಗಳು ಗೋಚರಿಸದೇ ಕೊರೊನಾ ಸೋಂಕು ತಗುಲಿದ್ದ ಸಂದರ್ಭ ಅದರ ಅರಿವಿಲ್ಲದೇ ಕೊರೊನಾ ಲಸಿಕೆ ಪಡೆದರೆ ಏನಾಗುತ್ತದೆ?
ಸೋಂಕಿನ ಸಂದರ್ಭದಲ್ಲಿ ಲಸಿಕೆ ಪಡೆದರೆ ಸಮಸ್ಯೆಯಾಗಬಹುದೇ ಇಲ್ಲವೇ ಸೋಂಕು ಬೇಗ ಗುಣಮುಖವಾಗಬಹುದೇ? ಈ ಪ್ರಶ್ನೆಗೆ ತಜ್ಞರು ಕೆಲವು ಉತ್ತರಗಳನ್ನು ಕಂಡುಕೊಂಡಿದ್ದಾರೆ. ಲಸಿಕೆ ಪ್ರಭಾವ ಕೂಡ ಸೋಂಕಿನ ಗಂಭೀರತೆ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದ್ದಾರೆ.
ಇದರೊಂದಿಗೆ, ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದ್ದ ಸಂದರ್ಭ ಲಸಿಕೆ ಪಡೆದರೆ ಲಸಿಕೆಯ ದಕ್ಷತೆಯು ತಗ್ಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸೋಂಕು ದೇಹದಲ್ಲಿದ್ದಾಗ ಲಸಿಕೆಯು ರೋಗನಿರೋಧಕ ಶಕ್ತಿಯನ್ನು ಉತ್ಪಾದಿಸುವಲ್ಲಿ ಹಿಂದೆ ಬೀಳಬಹುದು ಎಂದಿದ್ದಾರೆ. ವ್ಯಕ್ತಿಯು ಅನಾರೋಗ್ಯಕ್ಕೆ ತುತ್ತಾದಾಗ ದೇಹದಲ್ಲಿ ಅದಾಗಲೇ ಪ್ರತಿರಕ್ಷಣಾ ವ್ಯವಸ್ಥೆ ಸೋಂಕಿನ ವಿರುದ್ಧ ಹೋರಾಟದಲ್ಲಿ ನಿರತವಾಗಿರುತ್ತದೆ ಹಾಗೂ ಲಸಿಕೆ ಪಡೆದಾಗ ಆರೋಗ್ಯಕರ ಹಾಗೂ ಪರಿಣಾಮಕಾರಿ ಪ್ರತಿಕಾಯ ಸೃಷ್ಟಿಸಲು ತೊಡಕಾಗಬಹುದು ಎಂದು ತಿಳಿಸಿದ್ದಾರೆ.

ಸೋಂಕು ಈಗಾಗಲೇ ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯನ್ನು ಕ್ರಿಯಾಶೀಲಗೊಳಿಸಿರುವುದರಿಂದ, ಇದು ಲಸಿಕೆಯಿಂದ ಉತ್ಪತ್ತಿಯಾಗುವ ಪ್ರತಿರಕ್ಷಣೆ ಮೇಲೆ ನೇರ ಪರಿಣಾಮ ಬೀರಬಹುದು. ಕೊರೊನಾ ಲಸಿಕೆಯಿಂದ ಉಂಟಾಗುವ ಅಡ್ಡಪರಿಣಾಮಗಳ ತೀವ್ರತೆಯೂ ಹೆಚ್ಚಾಗುವ ಸಾಧ್ಯತೆಯಿದೆ. ಇಲ್ಲವೇ ಸೋಂಕಿನಿಂದ ಗುಣಮುಖರಾಗಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ಈ ಸಾಧ್ಯತೆಗಳು ಒಂದೆಡೆಯಾದರೆ, ಸೋಂಕಿನಿಂದ ಬೇಗ ಚೇತರಿಸಿಕೊಳ್ಳಲು ಕೂಡ ಲಸಿಕೆ ನೆರವಾಗಬಹುದು ಎಂದು ತಿಳಿಸಿದ್ದಾರೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುವುದರಿಂದ ಬೇಗ ಗುಣಮುಖರಾಗುವ ಅವಕಾಶವೂ ಹೆಚ್ಚಿದೆ ಎಂದು ತಿಳಿಸಿದ್ದಾರೆ.
ಆದರೆ ಕೊರೊನಾ ಸೋಂಕಿತರು ಹೊರಗೆ ಓಡಾಡಿದರೆ, ಅದೂ ಲಸಿಕೆ ಪಡೆಯಲು ಹೆಚ್ಚು ಜನರು ಸೇರಿರುವ ಜಾಗಕ್ಕೆ ಬಂದರೆ ಇತರರಿಗೂ ಸೋಂಕು ತಗುಲುವುದರಿಂದ ಸೋಂಕಿನ ಯಾವುದೇ ಲಕ್ಷಣ ಸ್ವಲ್ಪ ಮಟ್ಟದಲ್ಲಿ ಗೋಚರಿಸಿದರೂ ಹೊರಗೆ ಹೋಗಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ಇದಲ್ಲದೇ ತಮ್ಮ ಮನೆಯಲ್ಲಿ ಯಾರಿಗಾದರೂ ಕೊರೊನಾ ಸೋಂಕು ಇದ್ದ ಸಂದರ್ಭದಲ್ಲಿಯೂ ಲಸಿಕೆ ಪಡೆಯಲು ಹೊರಗೆ ಬರಬೇಡಿ. ಕ್ವಾರಂಟೈನ್ ಅವಧಿ ಮುಗಿಯುವವರೆಗೂ ಮನೆಯಲ್ಲೇ ಇದ್ದರೆ ಇತರರಿಗೆ ಸೋಂಕು ಹರಡುವುದು ತಪ್ಪುತ್ತದೆ ಎಂದು ಸಲಹೆ ನೀಡಿದ್ದಾರೆ.

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯಲ್ಲಿ ಡೆಲ್ಟಾ ರೂಪಾಂತರ ವೈರಸ್ ಅಟ್ಟಹಾಸ ತೋರಿದ್ದು ಆಗಿದೆ. ದೇಶದಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ತಳಿಯು ಮೂರನೇ ಅಲೆಗೆ ಮುಖ್ಯ ಕಾರಣವಾಗಲಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಡೆಲ್ಟಾ ವೈರಸ್ ಜಗತ್ತಿನ 84 ರಾಷ್ಟ್ರಗಳಿಗೆ ಹರಡಿದೆ. ಡೆಲ್ಟಾ ರೂಪಾಂತರ ವೈರಸ್ ಬೆನ್ನಲ್ಲೇ ಡೆಲ್ಟಾ ಪ್ಲಸ್ ರೂಪಾಂತರವನ್ನು ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಭಾರತ ಸೇರಿದಂತೆ ವಿಶ್ವದ 11 ರಾಷ್ಟ್ರಗಳಲ್ಲಿ ಇದೇ ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಕಾಣಿಸಿಕೊಂಡಿದೆ. ದೇಶದ ಮಟ್ಟಿಗೆ ಮಹಾರಾಷ್ಟ್ರ, ಕೇರಳ ಮತ್ತು ಮಧ್ಯ ಪ್ರದೇಶದಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಪ್ರಕರಣಗಳು ವರದಿಯಾಗಿವೆ.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಗೆ ತತ್ತರಿಸಿದ ಭಾರತದಲ್ಲಿ ಎರಡನೇ ಅಲೆ ಅಂತ್ಯದ ಬಗ್ಗೆ ಸ್ಪಷ್ಟತೆ ದೊರೆಯುವ ಮೊದಲೇ ಮೂರನೇ ಅಲೆ ಆತಂಕ ಸೃಷ್ಟಿಯಾಗಿದೆ. ಪ್ರತಿನಿತ್ಯ ಸೋಂಕಿತ ಪ್ರಕರಣಗಳ ಸಂಖ್ಯೆ 40,000 ಆಸುಪಾಸಿನಲ್ಲಿ ವರದಿಯಾಗುತ್ತಿವೆ. ಕಳೆದ ಒಂದೇ ದಿನ 38,667 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. 24 ಗಂಟೆಗಳಲ್ಲಿ 35,743 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಇದೇ ಅವಧಿಯಲ್ಲಿ 478 ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ 4,30,732ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications