ಮಹಾರಾಷ್ಟ್ರ: ಬಿಜೆಪಿಗೆ ತಲೆನೋವು ತಂದ ಶಿವಸೇನೆಯ 'ಮಹಾ'ಎಚ್ಚರಿಕೆ
ಮುಂಬೈ, ಏಪ್ರಿಲ್ 19: ಎನ್‌ಸಿಪಿ ನಾಯಕರ ಗುಂಪಿನೊಂದಿಗೆ ಅಜಿತ್ ಪವಾರ್ ಬಿಜೆಪಿಗೆ ಸೇರ್ಪಡೆಗೊಂಡರೆ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಮಹಾರಾಷ್ಟ್ರದಲ್ಲಿ ಸರ್ಕಾರದ ಭಾಗವಾಗುವುದಿಲ್ಲ ಎಂದು ಪಕ್ಷದ ವಕ್ತಾರ ಸಂಜಯ್ ಶಿರ್ಸಾತ್ ಹೇಳಿದ್ದಾರೆ.
ಮಂಗಳವಾರ ಮುಂಬೈನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿರ್ಸಾತ್, ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷದೊಂದಿಗೆ ನಾವು ಅಧಿಕಾರವನ್ನು ಹಂಚಿಕೊಂಡಿದ್ದೇವೆ. ನಮ್ಮ ವಿರೋಧಿಯಾಗಿರುವ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ನೇರವಾಗಿ ಬಿಜೆಪಿಯೊಂದಿಗೆ ಹೋಗುವುದಿಲ್ಲ ಎಂದು ಭಾವಿಸುವುದಾಗಿ ತಿಳಿಸಿದ್ದಾರೆ.

'ನಮ್ಮ ನೀತಿಯು ಅದರ ಬಗ್ಗೆ ಸ್ಪಷ್ಟವಾಗಿದೆ. ಎನ್‌ಸಿಪಿ ದ್ರೋಹ ಮಾಡುವ ಪಕ್ಷವಾಗಿದೆ. ನಾವು ಅಧಿಕಾರದಲ್ಲಿದ್ದರೂ ಎನ್‌ಸಿಪಿಯೊಂದಿಗೆ ಇರುವುದಿಲ್ಲ. ಬಿಜೆಪಿ ಎನ್‌ಸಿಪಿಯನ್ನು ಅಪ್ಪಿಕೊಳ್ಳುವುದು ಮಹಾರಾಷ್ಟ್ರಕ್ಕೆ ಇಷ್ಟವಿಲ್ಲ. ಒಂದು ವೇಳೆ, ಇದು ಸಂಭವಿಸಿದರೆ, ನಾವು ಹಿಂದೆ ಸರಿಯಲು ನಿರ್ಧರಿಸಿದ್ದೇವೆ' ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
'ನಾವು ಕಾಂಗ್ರೆಸ್-ಎನ್‌ಸಿಪಿ (ಹಿಂದಿನ ಮಹಾ ವಿಕಾಸ್ ಅಘಾಡಿ ಸರ್ಕಾರದ ಭಾಗವಾಗಿದ್ದವು) ಅವರೊಂದಿಗೆ ಇರಲು ಬಯಸದ ಕಾರಣ ಆ ಸರ್ಕಾರವನನ್ನು ನಾವು ತೊರೆದಿದ್ದೇವೆ. ಅಜಿತ್ ಪವಾರ್ ಅವರಿಗೆ ಅಲ್ಲಿ ಮುಕ್ತ ಹಸ್ತವಿಲ್ಲ. ಆದ್ದರಿಂದ, ಅವರು ಎನ್‌ಸಿಪಿ ತೊರೆದರೆ, ನಾವು ಅವರನ್ನು ಸ್ವಾಗತಿಸುತ್ತೇವೆ. ಒಂದು ವೇಳೆ, ಅವರು ಎನ್‌ಸಿಪಿ (ನಾಯಕರು) ಗುಂಪಿನೊಂದಿಗೆ ಬಂದರೆ ನಾವು ಸರ್ಕಾರದಲ್ಲಿ ಇರುವುದಿಲ್ಲ' ಎಂದು ಶಿವಸೇನಾ ನಾಯಕ ಹೇಳಿದ್ದಾರೆ.
ಅಜಿತ್ ಪವಾರ್ ಅವರ ಅಸಮಾಧಾನಕ್ಕೆ ಕಾರಣ ಅವರ ಪುತ್ರ ಪಾರ್ಥ್ ಪವಾರ್ ಈ ಹಿಂದೆ ಚುನಾವಣೆಯಲ್ಲಿ ಸೋತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಶಿವಸೇನೆಯ 16 ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ಪ್ರಕರಣಕ್ಕೂ ಅವರ ಅಸಮಾಧಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ವಕ್ತಾರರಾಗಿ ಶಿರ್ಸಾತ್ ಅವರನ್ನು ಇತ್ತೀಚೆಗೆ ನೇಮಿಸಲಾಯಿತು.
2019 ರ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದ ಮಾವಲ್ ಕ್ಷೇತ್ರದಿಂದ ಪಾರ್ಥ್ ಪವಾರ್ ಸೋಲನುಭವಿಸಿದ್ದರು.
'ಅಜಿತ್ ಪವಾರ್ ನಾಟ್ ರಿಚಬಲ್ ಆಗಿರುವುದು ಹೊಸ ವಿಷಯವಲ್ಲ. ಆದರೆ ಮಾಧ್ಯಮಗಳು ತೋರಿಸುತ್ತಿರುವ ಅವರ ಅಸಮಾಧಾನಕ್ಕೂ (ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ) ನಮ್ಮ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಅವರ ಪುತ್ರ ಪಾರ್ಥ್ ಪವಾರ್ ಸೋತಿದ್ದರಿಂದ ಅಜಿತ್ ಪವಾರ್ ಅಸಮಾಧಾನಗೊಂಡಿದ್ದಾರೆ' ಎಂದು ಶಿರ್ಸಾತ್ ಹೇಳಿದ್ದಾರೆ.
ನವೆಂಬರ್ 2019 ರಲ್ಲಿ ಗೌಪ್ಯ ಸಮಾರಂಭದಲ್ಲಿ ರಚನೆಯಾದ ದೇವೇಂದ್ರ ಫಡ್ನವಿಸ್-ಅಜಿತ್ ಪವಾರ್ ಸರ್ಕಾರವು ಮೂರು ದಿನಗಳ ಕಾಲ ನಡೆಯಿತು.
ಅಜಿತ್ ಪವಾರ್ ದೊಡ್ಡ ನಾಯಕ ಮತ್ತು ಅವರು ತಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಸುಲಭವಾಗಿ ಹೇಳುವುದಿಲ್ಲ ಎಂದು ಶಿರ್ಸತ್ ಹೇಳಿದರು.
'ಮಹಾ ವಿಕಾಸ್ ಅಘಾಡಿ ನಡೆಸುತ್ತಿರುವ ರ್ಯಾಲಿಗಳಲ್ಲಿ ನಾವು ಅಜಿತ್ ಪವಾರ್ ಅವರ ನಿಲುವನ್ನು ಹುಡುಕಬೇಕಾಗಿದೆ. ಅವರು ನಾಗ್ಪುರದ ರ್ಯಾಲಿಯಲ್ಲಿ ಮಾತನಾಡಲು ಸಾಧ್ಯವಾಗಲಿಲ್ಲ.. ಇದು ಅಜಿತ್ ಪವಾರ್ ಅವರಿಗೆ ತೋರಿಸಿದ ಅಗೌರವ' ಎಂದು ಅವರು ಹೇಳಿದ್ದಾರೆ.












Click it and Unblock the Notifications