ಅಪನದೀಕರಣದಂತಹ ಪ್ರಮಾದ ಮತ್ತೆ ನಡೆಯಬಾರದು : ಸಿಂಗ್
ರಾಜ್ ಕೋಟ್, ಡಿಸೆಂಬರ್ 07 : ಭವಿಷ್ಯದಲ್ಲಿ ಅಪನಗದೀಕರಣದಂತಹ ದೊಡ್ಡ ಪ್ರಮಾದ ನಮ್ಮ ದೇಶದಲ್ಲಿ ನಡೆಯಬಾರದು' ಎಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಹೇಳಿದರು.
ಗುರುವಾರ ಗುಜರಾತ್ ರಾಜ್ಯದ ರಾಜ್ ಕೋಟ್‌ನಲ್ಲಿ ಅವರು ಶಿಕ್ಷಕರು, ಪ್ರಾಧ್ಯಪಕರು, ಉದ್ಯಮಿಗಳ ಜೊತೆ ಸಂವಾದ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆರ್ಥಿಕ ಕ್ರಮಗಳನ್ನು ಟೀಕಿಸಿದರು.

'ಅಪನಗದೀಕರಣದ ಬಳಿಕ ದೇಶದಲ್ಲಿ ಸಾವಿರಾರು ಉದ್ಯೋಗಗಳು ಕಡಿತಗೊಂಡವು. ಹೊಸ ಉದ್ಯೋಗ ಸೃಷ್ಟಿಯಾಗಿಲ್ಲ. ಇಂತಹ ಪ್ರಮಾದ ಭವಿಷ್ಯದಲ್ಲಿ ನಡೆಯಬಾರದು' ಎಂದು ಹೇಳಿದರು.
ನರೇಂದ್ರ ಮೋದಿ ಸರ್ಕಾರದ ಯೋಜನೆಗಳನ್ನು ಟೀಕಿಸಿದ ಮನಮೋಹನ್ ಸಿಂಗ್, 'ನವೆಂಬರ್ 8ರಂದು ಅಪನಗದೀಕರಣದ ಘೋಷಣೆಯಾದ ಮೇಲೆ ಬ್ಯಾಂಕುಗಳ ಮುಂದೆ ಕ್ಯೂ ನಿಂತು 100ಕ್ಕೂ ಅಧಿಕ ಜನರು ಮೃತಪಟ್ಟರು. ಈ ಸಾವಿನ ಹೊಣೆಯನ್ನು ಸರ್ಕಾರವೇ ಹೊರಬೇಕು' ಎಂದರು.
'ಕುಸಿತವಾಗಿದ್ದ ಆರ್ಥಿಕತೆ ಜುಲೈನಿಂದ ಸೆಪ್ಟೆಂಬರ್ ತಿಂಗಳಿನಲ್ಲಿ 6.3 ಶೇ ಚೇತರಿಕೆ ಕಂಡಿದೆ ಎಂದು ಹೇಳಲು ಸಾಧ್ಯವಿಲ್ಲ. ಅಪನಗದೀಕರಣ ಮತ್ತು ಜಿಎಸ್‌ಟಿ ಜಾರಿ ಬಳಿಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಭಾರೀ ನಷ್ಟ ಅನುಭವಿಸಿವೆ' ಎಂದು ದೂರಿದರು.
ಗುಜರಾತ್‌ನಲ್ಲಿ ಡಿಸೆಂಬರ್ 9 ಮತ್ತು 14ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿ.18ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications