ನದಿ ನೀರಿನಲ್ಲಿ ಕೊಚ್ಚಿ ಹೋದ 4 ದಿನಗಳ ಮರಿ ಆನೆಯನ್ನು ರಕ್ಷಿಸಿ ತಾಯಿ ಮಡಿಲು ಸೇರಿಸಿದ ಮೀನುಗಾರರು, ಭಾವುಕ ಕ್ಷಣದ ವಿಡಿಯೋ
Viral Video: ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ಹೃದಯಸ್ಪರ್ಶಿ ರಕ್ಷಣಾ ಕಾರ್ಯಾಚರಣೆಯೊಂದನ್ನು ನಡೆಸಲಾಗಿದೆ. ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ 4 ದಿನಗಳ ಆನೆ ಮರಿಯೊಂದು ರಕ್ಷಿಸಲಾಗಿದೆ. ಆನೆ ಮರಿ ನದಿ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯ ಮೀನುಗಾರರು ತಕ್ಷಣ ರಕ್ಷಣೆಗೆ ಧಾವಿಸಿದ್ದಾರೆ. ಈ ಪುಟ್ಟ ಮರಿಯನ್ನು ರಕ್ಷಿಸಿ ಅದರ ತಾಯಿ ಮಡಿಲಿಗೆ ಸೇರಿಸುತ್ತಾರೆ.
ರಕ್ಷಿಸಿ ತಂದ ಆನೆ ಮರಿಯನ್ನು ವೈದ್ಯರು ತಕ್ಷಣ ಪರೀಕ್ಷೆಗೆ ಒಳಪಡಿಸಿದ್ದಾರೆ. ಮರಿ ಆರೋಗ್ಯವಾಗಿದೆ ಅಂತ ತಿಳಿತಾ ಇದ್ದ ಹಾಗೆ ಅರಣ್ಯ ಇಲಾಖೆ ತಂಡವು ಮರಿಯನ್ನು ಅದರ ತಾಯಿಯ ಬಳಿ ಬಿಟ್ಟಿದೆ. ತನ್ನ ಮರಿ ನೀರಿನಲ್ಲಿ ಕೊಚ್ಚಿ ಹೋಯಿತು ಎಂದು ಕಣ್ಣೀರಾಗಿದ್ದ ತಾಯಿ ತನ್ನ ಮರಿ ತನ್ನತ್ತ ಓಡಿ ಬರುತ್ತಿರುವುದನ್ನು ನೋಡಿ ನೀಡಿದ ಪ್ರತಿಕ್ರಿಯೆ ಗಮನಾರ್ಹವಾಗಿತ್ತು. ತಾಯಿ ತಕ್ಷಣವೇ ತನ್ನ ಮಗುವನ್ನು ಮುದ್ದಿಸುತ್ತಾ ಹಾಲುಣಿಸಲು ಪ್ರಾರಂಭಿಸಿದಳು. ವರದಿಯ ಪ್ರಕಾರ ಈ ಘಟನೆ ಉತ್ತರ ಬಂಗಾಳದ ಮಲ್ಬಜಾರ್ ಬ್ಲಾಕ್‌ನಲ್ಲಿರುವ ಬೈಕುಂತ್‌ಪುರ ಅರಣ್ಯ ವಿಭಾಗದಲ್ಲಿ ಸಂಭವಿಸಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗುತ್ತಿದೆ.

ನದಿ ದಾಟುವಾಗ ತಾಯಿಯಿಂದ ಬೇರ್ಪಟ್ಟ ಮರಿ
ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಶುಕ್ರವಾರ ಬೆಳಿಗ್ಗೆ 8.30 ರ ಸುಮಾರಿಗೆ ಆನೆಗಳ ಹಿಂಡು ತೀಸ್ತಾ ನದಿಯನ್ನು ದಾಟಲು ಪ್ರಯತ್ನಿಸುತ್ತಿತ್ತು. ಈ ಸಂದರ್ಭದಲ್ಲಿ ಆನೆ ಮರಿ ತಾಯಿಯಿಂದ ಬೇರ್ಪಟ್ಟು ಬಲವಾದ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿದೆ. ಗಜಲ್ದೋಬಾ ಬ್ಯಾರೇಜ್ ಬಳಿ ಮರಿ ತನ್ನ ತಾಯಿಯಿಂದ ಬೇರ್ಪಟ್ಟು ಸುಮಾರು 4 ಕಿಲೋಮೀಟರ್ ಕೆಳಗೆ ಕೊಚ್ಚಿ ಹೋಗಿದೆ. ಆ ಸಮಯದಲ್ಲಿ ತಾಯಿ ಆನೆ ಗಜಲ್ದೋಬಾ ಬಳಿ ನದಿಯ ಮೇಲ್ಭಾಗದಲ್ಲಿದ್ದು ತನ್ನ ಮರಿಗಾಗಿ ಅಳುತ್ತಿದ್ದಳು. ನೀರಿನ ರಭಸಕ್ಕೆ ಮರಿ ಮತ್ತಷ್ಟು ಕೆಳಗೆ ಹರಿಯುತ್ತದೆ.
ದೋಣಿ ಮೂಲಕ ರಕ್ಷಣಾ ಕಾರ್ಯ ನಡೆಸಿದ ಮೀನುಗಾರರು
ಈ ಸಂದರ್ಭದಲ್ಲಿ ಸ್ಥಳೀಯ ಮೀನುಗಾರರು ನದಿಯಲ್ಲಿ ತೇಲುತ್ತಿರುವ ಮರಿ ಆನೆಯನ್ನು ಗಮನಿಸಿದ್ದಾರೆ. ಸ್ವಲ್ಪವೂ ಸಮಯ ವ್ಯರ್ಥ ಮಾಡದೆ, ಅವರು ಅದನ್ನು ಸಣ್ಣ ದೋಣಿಯಲ್ಲಿ ಬೆನ್ನಟ್ಟಿದ್ದಾರೆ. ಅವರು ಮರಿಯ ಬಳಿ ತಲುಪಿದಾಗ, ಅದು ಮುಳುಗುವ ಸ್ಥಿತಿಯಲ್ಲಿತ್ತು. ಮೀನುಗಾರರು ಅದನ್ನು ಸಣ್ಣ ದೋಣಿಗೆ ಎಳೆದು ಸುರಕ್ಷಿತವಾಗಿ ಅದನ್ನು ನದಿಯಿಂದ ಹೊರ ತಂದಿದ್ಧಾರೆ. ನಂತರ ಅವರು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ತಂಡವು ತಕ್ಷಣ ಸ್ಥಳಕ್ಕೆ ಬಂದು ಮರಿಯ ವೈದ್ಯಕೀಯ ಪರೀಕ್ಷೆ ನಡೆಸಿದೆ.
ಮತ್ತೆ ಒಂದಾದ ತಾಯಿ- ಮರಿ
ಆನೆ ಮರಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಸಂದರ್ಭದಲ್ಲಿ ಮರಿಯ ದೇಹದಲ್ಲಿ ಯಾವುದೇ ಗಂಭೀರ ಗಾಯಗಳು ಕಂಡುಬಂದಿಲ್ಲ. ಇಲ್ಲಿ ಅಧಿಕಾರಿಗಳು ಎದುರಿಸುತ್ತಿರುವ ದೊಡ್ಡ ಸವಾಲೆಂದರೆ ಮರಿಯನ್ನು ಮಾನವ ಸಂಪರ್ಕದಿಂದ ದೂರವಿಡುವುದು. ಯಾಕೆಂದರೆ ಆ ಮರಿ ದೀರ್ಘಕಾಲದವರೆಗೆ ಮಾನವ ಸಂಪರ್ಕದಲ್ಲಿ ಇದ್ದರೆ ಮತ್ತೆ ತಾಯಿ ಆನೆ ಅದನ್ನು ಸ್ವೀಕರಿಸಲು ನಿರಾಕರಿಸಬಹುದು ಎನ್ನುವ ಭಯ ಅಧಿಕಾರಿಗಳನ್ನು ಕಾಡುತ್ತಿತ್ತು. ಆದ್ದರಿಂದ, ಅದನ್ನು ರಕ್ಷಿಸಿದ ತಕ್ಷಣ ಅದನ್ನು ತ್ವರಿತವಾಗಿ ತನ್ನ ತಾಯಿ ಮತ್ತು ಹಿಂಡಿನೊಂದಿಗೆ ಮತ್ತೆ ಸೇರಿಸಲಾಯಿತು.
A newborn elephant calf was swept nearly 5 km downstream by Teesta’s strong currents. Our Forest team, with help of local fishermen, rescued the drowning calf and reunited it with its mother.A beautiful story of rescue and reunion. 🐘#elephant #wildlife #IFS #forest #teesta https://t.co/rvq7fpyMd2
— Mudit Kumar Verma IFS (@MuditKVerma) September 21, 2026
ಬೈಕುಂತ್‌ಪುರ ಪ್ರದೇಶ ಆನೆಗಳು ಮತ್ತು ವನ್ಯಜೀವಿಗಳಿಗೆ ಪ್ರಮುಖ ಪ್ರದೇಶವಾಗಿದೆ. ಬೈಕುಂಥ್‌ಪುರ ಅರಣ್ಯ ವಿಭಾಗವು ಸಿಲಿಗುರಿ ಮತ್ತು ಗಜಲ್‌ಡೋಬಾ ಬಳಿ ಇದೆ. ಮಹಾನಂದಾ ಮತ್ತು ತೀಸ್ತಾ ನದಿಗಳು ಹತ್ತಿರದಲ್ಲಿ ಹರಿಯುತ್ತವೆ. ಈ ಪ್ರದೇಶವು ಏಷ್ಯನ್ ಆನೆಗಳು, ಚಿರತೆಗಳು ಮತ್ತು ವಿವಿಧ ಪಕ್ಷಿ ಪ್ರಭೇದಗಳಿಗೆ ಹೆಸರುವಾಸಿಯಾಗಿದೆ. ಈ ಭಾವನಾತ್ಮಕ ರಕ್ಷಣಾ ಕಾರ್ಯಾಚರಣೆಯ ವೀಡಿಯೊ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.


Click it and Unblock the Notifications
