Vijay: ತಮಿಳುನಾಡಿನಲ್ಲಿ ಮತ್ತೆ ಚುನಾವಣೆ; ಮಹತ್ವದ ಟ್ವೀಟ್ ಮಾಡಿದ ವಿಜಯ್, "ನಿಮ್ಮ ಚಿನ್ನದ ಮತ ನಮಗೇ ಕೊಡಿ'!
Vijay: ತಮಿಳುನಾಡಿನ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಅಗ್ನಿ ಪರೀಕ್ಷೆ ಎದುರಾಗಿದೆ. ತಮಿಳುನಾಡಿನಲ್ಲಿ ವಿವಿಧ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ರಂಗೇರಿದೆ. ಅಕ್ಟೋಬರ್ 6ರಂದು ತಮಿಳುನಾಡಿನ ಮಧುರಾಂತಕಂ ಮತ್ತು ಧಾರಾಪುರಂ ಎನ್ನುವ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದೆ. ತಮಿಳುನಾಡಿನ ವಿಧಾನಸಭೆಯ ಮ್ಯಾಜಿಕ್ ನಂಬರ್ 118 ಆಗಿದೆ. ಆದರೆ, ಆಡಳಿತರೂಢ ಟಿವಿಕೆಯ ಸಂಖ್ಯಾಬಲವು 108 ಆಗಿದೆ.
ಕಾಂಗ್ರೆಸ್ ಪಕ್ಷವು ಸೇರಿದಂತೆ ವಿವಿಧ ಪಕ್ಷಗಳು ತಮಿಳಗವೆಟ್ರಿ ಕಳಗಂ ಪಕ್ಷಕ್ಕೆ ಬೆಂಬಲ ನೀಡಿವೆ. ಆದರೆ ಇದು ಹಗ್ಗದ ಮೇಲಿನ ನಡಿಗೆಯಾಗಿಯೇ ಉಳಿದಿದೆ. ಅಲ್ಲದೆ ತಮಿಳುನಾಡಿನಲ್ಲಿ ಟಿವಿಕೆಯ ಆಡಳಿತ ಹೇಗಿದೆ ಎನ್ನುವುದು ಅಥವಾ ಜನ ಹೊಸ ಸರ್ಕಾರವನ್ನು ಹೇಗೆ ಸ್ವೀಕರಿಸಿದ್ದಾರೆ, ಸಿಎಂ ವಿಜಯ್ ಅವರ ಆಡಳಿತ ಹೇಗಿದೆ ಎನ್ನುವುದಕ್ಕೂ ಈ ಉಪ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಇನ್ನು ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಿರುವ ಎಡಪಕ್ಷಗಳು ಈ ಉಪ ಚುನಾವಣೆಯಲ್ಲಿ ಸ್ವಾತಂತ್ರ್ಯವಾಗಿ ಸ್ಪರ್ಧೆಗೆ ಇಳಿದಿವೆ! ಒಟ್ಟು 7 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಈ ಕ್ಷೇತ್ರಗಳಲ್ಲಿ ಆಡಳಿತರೂಢ ತಮಿಳಗ ವೆಟ್ರಿ ಕಳಗಂ ಪಕ್ಷವು ಗೆದ್ದರೆ, ಮಿತ್ರ ಪಕ್ಷಗಳ ಮೇಲಿನ ಅವಲಂಬನೆ ಕಡಿಮೆ ಆಗಲಿದೆ. ಹೀಗಾಗಿ, ಈ ಚುನಾವಣೆಯನ್ನು ವಿಜಯ್ ಅವರು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ.

ನನ್ನ ಹೃದಯದಲ್ಲಿ ನೆಲೆಸಿರುವ ಎಲ್ಲರಿಗೂ ನಮಸ್ಕಾರಗಳು: ವಿಜಯ್
ನನ್ನ ಹೃದಯದಲ್ಲಿ ನೆಲೆಸಿರುವ ಎಲ್ಲರಿಗೂ ನಮಸ್ಕಾರಗಳು ಎನ್ನುವ ಸಾಲುಗಳೊಂದಿಗೆ ನಟ, ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಹತ್ವದ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ, ಬೇರೆ ಯಾರಿಗೂ ನೀಡದ ಅಪಾರ ಪ್ರೀತಿಯನ್ನು ನಮ್ಮ ಮೇಲೆ ಸುರಿಸುವುದರ ಮೂಲಕ, ಮತ್ತು ಅಪಾರ ಸಂಖ್ಯೆಯ ಮತಗಳೊಂದಿಗೆ ಗೆಲ್ಲಿಸಿದ್ದೀರಿ.
ವೈಭವದ ಇತಿಹಾಸವನ್ನು ಪುನಃಸ್ಥಾಪಿಸುವ ಮೂಲಕ ಮತ್ತು ನನ್ನನ್ನು ನಿಮ್ಮ ಮೊದಲ ಸೇವಕನನ್ನಾಗಿ ಸಿಂಹಾಸನಾರೋಹಣ ಮಾಡುವ ಮೂಲಕ, ನಾನು ನಿಮಗೆ ಕೃತಜ್ಞತೆಯ ಋಣವನ್ನು ತೀರಿಸುವ ಸಮಯ ಇದು. ನಿಜವಾದ, ಆತ್ಮಸಾಕ್ಷಿಯ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ ತಮಿಳುನಾಡಿನ ಜನರಿಗೆ ಎಷ್ಟೇ ಕೃತಜ್ಞತೆಗಳು ಹೇಳಿದರೂ ಸಾಲದು. ಪ್ರಸ್ತುತ ಜಾರಿಯಲ್ಲಿರುವುದು ತಮಿಳುನಾಡಿನ ಜನರಾಗಿ ಅವರದ್ದೇ ನೇತೃತ್ವದ ಸರ್ಕಾರ! ಈ ಸರ್ಕಾರ ಮುಂದುವರಿಯಲು, ಇನ್ನೂ ಹೆಚ್ಚಿನ ಬಲವನ್ನು ಪಡೆಯಲು, ನಿಮ್ಮ ಬೆಂಬಲ ಯಾವಾಗಲೂ ಅಗತ್ಯವಿದೆ ಅಂತ ವಿಜಯ್ ಅವರು ಹೇಳಿದ್ದಾರೆ.
ಮುಂದುವರಿದು ಕಳೆದ ತಿಂಗಳ 25 ನೇ ತಾರೀಖಿನಂದು (25.09.2026), ನಾವು ಮಧುರಾಂತಕಂ ಕ್ಷೇತ್ರದಲ್ಲಿ ಮತ್ತು 30 ನೇ ತಾರೀಖಿನಂದು (30.09.2026) ಧಾರಾಪುರಂ ಕ್ಷೇತ್ರದಲ್ಲಿ ಉಪಚುನಾವಣೆಗಾಗಿ ಪ್ರಚಾರ ಚಟುವಟಿಕೆಗಳನ್ನು ನಡೆಸಿದ್ದೇವೆ. ಅದರ ನಂತರ, 2 ನೇ ತಾರೀಖಿನಂದು (02.10.2026), ನಾವು ಮಧುರಾಂತಕಂ ಕ್ಷೇತ್ರದಲ್ಲಿ ಮತ್ತು ಇಂದು (04.10.2026) ಧಾರಾಪುರಂ ಕ್ಷೇತ್ರದಲ್ಲಿ ವಾಹನ ಪ್ರಚಾರಗಳನ್ನು ನಡೆಸಿದ್ದೇವೆ.
ಈ ಉಪಚುನಾವಣಾ ಪ್ರಚಾರಕ್ಕಾಗಿ ನಾವು ಬಂದಾಗ, ಚೆಂಗಲ್ಪಟ್ಟು ಜಿಲ್ಲೆಯ ಜನರು ನಮಗೆ ನೀಡಿದ ಸ್ವಾಗತ ಮತ್ತು ಕೊಯಮತ್ತೂರು ಮತ್ತು ತಿರುಪ್ಪೂರು ಜಿಲ್ಲೆಗಳ ಜನರು ನಮಗೆ ತೋರಿಸಿದ ಪ್ರೀತಿ ಮತ್ತು ವಾತ್ಸಲ್ಯವು ಅಪೂರ್ವವಾಗಿತ್ತು. ಅವರು ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ಇದಕ್ಕಾಗಿ ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಅದು ಕಡಿಮೆಯೇ. ಇದಕ್ಕಾಗಿ, ನಾವು ನಿಮಗೆ ಜೀವಮಾನವಿಡೀ ಋಣಿಯಾಗಿದ್ದೇವೆ.
ಮಧುರಾಂತಕಂ ಮತ್ತು ಧಾರಾಪುರಂ ವಿಧಾನಸಭಾ ಕ್ಷೇತ್ರಗಳಲ್ಲಿ ಮುಂಬರುವ ಉಪಚುನಾವಣೆಗಳಲ್ಲಿ, ನೀವು ದೀರ್ಘಕಾಲದಿಂದ ನಮ್ಮನ್ನು ವಂಚಿಸಿದ ದುಷ್ಟ ಶಕ್ತಿ ಮತ್ತು ನಿಷ್ಕ್ರಿಯ ಶಕ್ತಿಯನ್ನು ತಿರಸ್ಕರಿಸುತ್ತೀರಿ ಎಂದು ಈ ರಾಷ್ಟ್ರಕ್ಕೆ ತಿಳಿದಿದೆ; ಜಾತ್ಯತೀತ ಸಾಮಾಜಿಕ ನ್ಯಾಯ ವಿಜಯ ಒಕ್ಕೂಟದ ಪರವಾಗಿ ಸ್ಪರ್ಧಿಸುವ ತಮಿಳಗ ವೆಟ್ರಿ ಕಳಗಂನ ಅಭ್ಯರ್ಥಿಗಳನ್ನು ನೀವು ಬೆಂಬಲಿಸುತ್ತೀರಿ; ಮತ್ತು ನೀವು ಮಧುರಾಂತಕಂ ಕ್ಷೇತ್ರದಲ್ಲಿ ಮರಗತಂ ಕುಮಾರವೇಲ್ ಮತ್ತು ಧಾರಾಪುರಂ ಕ್ಷೇತ್ರದಲ್ಲಿ ಸತ್ಯಬಾಮಾ ಅವರಿಗೆ ನಮ್ಮ ವಿಜಯ ಚಿಹ್ನೆಯಾದ ಶಿಳ್ಳೆಯ ಮೇಲೆ ನಿಮ್ಮ ಚಿನ್ನದ ಮತಗಳನ್ನು ಹಾಕುತ್ತೀರಿ. ಅದಕ್ಕಾಗಿ, ನಾನು ನಿಮಗೆ ಮುಂಚಿತವಾಗಿ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ಜನರ ಹಿತಾಸಕ್ತಿಯೇ ನಮ್ಮ ಮೊದಲ ಆದ್ಯತೆ. ಜನರ ಕಲ್ಯಾಣವನ್ನು ಕಾಪಾಡುವ ವಿಚಾರದಲ್ಲಿ ನಾವು ಯಾವುದೇ ಸಂದರ್ಭದಲ್ಲೂ ರಾಜಿಯಾಗುವುದಿಲ್ಲ. ಲಂಚ ಮತ್ತು ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದೆ, ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯಿಂದ ಕೂಡಿದ ಆಡಳಿತದ ಮೂಲಕ, ನಾವು ಈಗ ಹೇಗೆ ಕಾರ್ಯ ನಿರ್ವಹಿಸುತ್ತಿದ್ದೇವೋ ಹಾಗೆಯೇ ಮುಂದೆಯೂ ಆತ್ಮಸಾಕ್ಷಿಯೊಂದಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುತ್ತೇವೆ ಅಂತಲೂ ನಟ, ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರು ಅಲ್ಲಿನ ಜನರಿಗೆ ಭರವಸೆ ನೀಡಿದ್ದಾರೆ.


Click it and Unblock the Notifications
