Vande Metro: ಶೀಘ್ರದಲ್ಲೇ ಬರಲಿವೆ ವಂದೇ ಮೆಟ್ರೋ- ಯಾವಾಗ? ವಿಶೇಷತೆಗಳೇನು? ಅಂಕಿಅಂಶ, ಮಾಹಿತಿ, ವಿವರ
ನವದೆಹಲಿ, ಅಕ್ಟೋಬರ್ 20: ಕಡಿಮೆ ದೂರದ ಪ್ರೀಮಿಯಂ ಪ್ರಯಾಣಕ್ಕಾಗಿ ಭಾರತೀಯ ರೈಲ್ವೇಯು ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಇದರ ಭಾಗವಾಗಿ 2024 ರ ಆರಂಭದಲ್ಲಿ 'ವಂದೇ ಮೆಟ್ರೋ' ಯೋಜನೆಗೆ ಚಾಲನೆ ದೊರೆಯಲಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು 2023 ರ ಬಜೆಟ್ ನಂತರ ವಂದೇ ಮೆಟ್ರೋ ಯೋಜನೆಯನ್ನು ಘೋಷಿಸಿದರು. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಂದ ಪ್ರೇರಿತವಾದ ವಂದೇ ಮೆಟ್ರೋವು 130 ಕಿಮೀ ವೇಗದಲ್ಲಿ ಕಡಿಮೆ ದೂರವನ್ನು ಕ್ರಮಿಸಲಿದೆ. ಇದು ವೇಗವಾದ ಹವಾನಿಯಂತ್ರಿತ ಪ್ರಯಾಣವನ್ನು ಒದಗಿಸುತ್ತದೆ.

ಯೋಜನೆಯ ಬಗ್ಗೆ 'ಎಕಾನಾಮಿಕ್ಸ್ ಟೈಮ್ಸ್'ಗೆ ವಿವರಗಳನ್ನು ಹಂಚಿಕೊಂಡ ಐಸಿಎಫ್ ಜನರಲ್ ಮ್ಯಾನೆಜರ್ ಬಿಜಿ ಮಲ್ಯ, 'ವಂದೇ ಮೆಟ್ರೋ ರೈಲುಗಳನ್ನು 300 ಕಿಲೋಮೀಟರ್ ದೂರದ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗುವುದು' ಎಂದು ತಿಳಿಸಿದ್ದಾರೆ.
'ವಂದೇ ಮೆಟ್ರೋವನ್ನು ಮೇನ್‌ಲೈನ್ ರೈಲ್ವೆ ಟ್ರ್ಯಾಕ್‌ನಲ್ಲಿ ಓಡಿಸಲಾಗುತ್ತದೆ. ಇದು 250 ರಿಂದ 300 ಕಿಲೋಮೀಟರ್‌ಗಳ ಕಡಿಮೆ ದೂರವನ್ನು ಕ್ರಮಿಸಲಿದೆ ಎಂದು ಮಲ್ಯ ಹೇಳಿದ್ದಾರೆ.
ಈಗಾಗಲೇ ಮೊದಲ ವಂದೇ ಮೆಟ್ರೋ ರೈಲಿನ ತಯಾರಿಕೆಯು ಪ್ರಾರಂಭವಾಗಿದೆ. ಕೋಚ್ ಫ್ಯಾಕ್ಟರಿಯು ಜನವರಿ 2024 ರಲ್ಲಿ ಅದನ್ನು ಹೊರತರುವ ಗುರಿಯನ್ನು ಹೊಂದಿದೆ ಎಂದು ಐಸಿಎಫ್ ಜಿಎಂ ಮಾಹಿತಿ ನೀಡಿದ್ದಾರೆ.

ವಂದೇ ಮೆಟ್ರೋ ರೈಲಿನ ವೈಶಿಷ್ಟ್ಯಗಳು
ಬಿಜಿ ಮಲ್ಯ ಅವರ ಪ್ರಕಾರ, 'ವಂದೇ ಮೆಟ್ರೋವು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಎಲ್ಲಾ ಪ್ರಮುಖ ಲಕ್ಷಣಗಳನ್ನು ಹೊಂದಿರುತ್ತದೆ.
'ವಂದೇ ಭಾರತ್ ಎಕ್ಸ್‌ಪ್ರೆಸ್ ಹಾಗೂ ವಂದೇ ಮೆಟ್ರೋದಲ್ಲಿ ಒಂದೇ ವ್ಯತ್ಯಾಸವಿದೆ. ವಂದೇ ಮೆಟ್ರೋದಲ್ಲಿ ಸ್ಟ್ಯಾಂಡಿಗಳಿಗೆ ಜಾಗವಿಲ್ಲ. ಈ ರೈಲಿನಲ್ಲಿ ನಿಲ್ಲುವವರಿಗೆ ಸ್ಥಳಾವಕಾಶವಿರುತ್ತದೆ. ಪ್ರತಿ ಕೋಚ್‌ನಲ್ಲಿ 100 ಪ್ರಯಾಣಿಕರಿಗಾಗಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. 200 ಜನರು ಸ್ಟಾಂಡಿಗಳಲ್ಲಿ ನಿಲ್ಲುವ ಅವಕಾಶವಿದೆ' ಎಂದು ಅವರು ತಿಳಿಸಿದ್ದಾರೆ.
ವಂದೇ ಮೆಟ್ರೋ ರೈಲುಗಳ ಪ್ರಮುಖ ಲಕ್ಷಣಗಳು ಹೀಗಿವೆ
ಕಾರ್ಯಾಚರಣೆಯ ವೇಗ ಗಂಟೆಗೆ 130 ಕಿಮೀ
ಸಂಪೂರ್ಣ ಹವಾನಿಯಂತ್ರಿತ
ಸಂಪೂರ್ಣವಾಗಿ ಮುಚ್ಚಿದ ಗ್ಯಾಂಗ್‌ವೇಗಳು
ಕಡಿಮೆ ತೂಕದ ಕಾರ್ ಬಾಡಿ ಮತ್ತು ಸಮಕಾಲೀನ ವಿನ್ಯಾಸದ ಕಡಿಮೆ ತೂಕದ ಮೆತ್ತನೆಯ ಸೀಟುಗಳು
ವಿಶಾಲವಾದ ಸ್ವಯಂಚಾಲಿತ ಪ್ಲಗ್-ಇನ್ ಬಾಗಿಲುಗಳ 4 ಸೆಟ್‌ಗಳು
ವಾಯುಬಲದಿಂದ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಿದ ಡ್ರೈವಿಂಗ್ ಎಂಡ್
ಸಿಸಿಟಿವಿ, ಕ್ಯಾಮೆರಾಗಳು, ಎಲ್‌ಸಿಡಿ ಡಿಸ್‌ಪ್ಲೆಗಳೊಂದಿಗೆ ಪಿಐಎಸ್ ವ್ಯವಸ್ಥೆ
ಡಿಫ್ಯೂಸ್ಡ್ ಲೈಟಿಂಗ್, ಮಾರ್ಗ ಸೂಚಕ ಫಲಕಗಳು
ಸ್ವಯಂಚಾಲಿತ ಬೆಂಕಿ ಪತ್ತೆ ಮತ್ತು ಎಚ್ಚರಿಕೆ ವ್ಯವಸ್ಥೆ
ರೋಲರ್ ಬ್ಲೈಂಡ್‌ಗಳೊಂದಿಗೆ ವಿಶಾಲವಾದ ಕಿಟಕಿಗಳು
ತುರ್ತು ಟಾಕ್ ಬ್ಯಾಕ್ ಘಟಕ
ಮೊಬೈಲ್ ಚಾರ್ಜಿಂಗ್ ಸಾಕೆಟ್‌ಗಳು
ಮಾಡ್ಯುಲರ್ ಶೌಚಾಲಯ
ಲಘು ಅಲ್ಯೂಮಿನಿಯಂ ಲಗೇಜ್ ರ್ಯಾಕ್
ಕವಚ್ ವ್ಯವಸ್ಥೆ
ಡ್ರೈವಿಂಗ್ ಕಾರಿನಲ್ಲಿ ಪಿಆರ್‌ಎಂಗಾಗಿ ಶೌಚಾಲಯ

ಕಾಶ್ಮೀರದಲ್ಲಿ ವಂದೇ ಭಾರತ್ ರೈಲು
ಭಾರತೀಯ ರೈಲ್ವೇಯು ಕಾಶ್ಮೀರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪರಿಚಯಿಸಲು ನಿರ್ಧರಿಸಿದೆ. ಇದು ಮಾರ್ಚ್ 2024 ರೊಳಗೆ ಕಾರ್ಯರೂಪಕ್ಕೆ ಬರಲಿದೆ. ಇದೇ ಸಮಯದೊಳಗೆ 75 ರೈಲುಗಳನ್ನು ಪರಿಚಯಿಸಲು ಯೋಜಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ವಂದೇ ಮೆಟ್ರೋ ಮತ್ತು ವಂದೇ ಭಾರತ್ ಸ್ಲೀಪರ್ ಕಾರ್ ಅನ್ನು ಹೊರತರುವ ನಿರೀಕ್ಷೆಯಿದೆ ಎಂದು ರೈಲ್ವೇ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಂದೇ ಭಾರತ್ ರೈಲು ಪ್ರಯಾಣಿಕರಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿದೆ. ಇದು ದೇಶದ ಅತ್ಯಂತ ವೇಗದ ರೈಲಾಗಿದೆ. ಗಂಟೆಗೆ 180 ಕಿಮೀ ವೇಗವನ್ನು ಹೊಂದಿದೆ. ಆದರೆ ಕಾರ್ಯಾಚರಣೆಯ ವೇಗವು ಗಂಟೆಗೆ 130 ಕಿಮೀ ಆಗಿದೆ. ಈ ರೈಲಿನಲ್ಲಿ ಪ್ರಯಾಣಿಸುವುದರಿಂದ ಪ್ರಯಾಣದ ಸಮಯವನ್ನು ಶೇಕಡಾ 25 ರಿಂದ 45 ರಷ್ಟು ಕಡಿಮೆ ಮಾಡಬಹುದಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ, ಜಮ್ಮು-ಶ್ರೀನಗರ ಮಾರ್ಗವು ಕಾರ್ಯರೂಪಕ್ಕೆ ಬಂದ ನಂತರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪ್ರಾರಂಭಿಸಲಾಗುವುದು ಎಂದು ರೈಲ್ವೇ ಸಚಿವ ಅಶ್ವೀನಿ ವೈಷ್ಣವ್ ಅವರು ತಿಳಿಸಿದ್ದಾರೆ.
ಜಮ್ಮು-ಶ್ರೀನಗರ ರೈಲು ಮಾರ್ಗವು ಈ ಆರ್ಥಿಕ ವರ್ಷದೊಳಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಕೇಂದ್ರಾಡಳಿತ ಪ್ರದೇಶಕ್ಕಾಗಿ ರೈಲನ್ನು ವಿಶಿಷ್ಟ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಚೆನ್ನೈ ಮೂಲದ ಕಾರ್ಖಾನೆಯು ಜಮ್ಮು ಮತ್ತು ಕಾಶ್ಮೀರ ಪ್ರದೇಶಕ್ಕಾಗಿ ವಂದೇ ಭಾರತ್ ಅನ್ನು ಅಭಿವೃದ್ಧಿಪಡಿಸುತ್ತಿದೆ.












Click it and Unblock the Notifications