ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ

ಪಾಟ್ನಾ: ಭಾರತೀಯ ರೈಲ್ವೆಯ ಹೆಮ್ಮೆಯ 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲುಗಳು ಅತ್ಯಾಧುನಿಕ ಸೌಲಭ್ಯ ಹಾಗೂ ವೇಗದ ಪ್ರಯಾಣಕ್ಕೆ ಹೆಸರಾಗಿವೆ. ಆದರೆ, ಇತ್ತೀಚೆಗೆ ಈ ಪ್ರೀಮಿಯಂ ರೈಲಿನಲ್ಲಿ ಪ್ರಯಾಣಿಕರಿಗೆ ನೀಡಲಾದ ಊಟದಲ್ಲಿ ತೀವ್ರ ಕಳಪೆ ಗುಣಮಟ್ಟ ಕಂಡುಬಂದಿದ್ದು, ಮೊಸರಿನಲ್ಲಿ ಜೀವಂತ ಹುಳುಗಳು ಪತ್ತೆಯಾಗಿರುವ ಘಟನೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಗಂಭೀರ ಲೋಪವನ್ನು ಎತ್ತಿಹಿಡಿದ ವೈರಲ್ ವಿಡಿಯೋ ಬೆನ್ನಲ್ಲೇ ಎಚ್ಚೆತ್ತ ರೈಲ್ವೆ ಸಚಿವಾಲಯವು, ಐಆರ್‌ಸಿಟಿಸಿ (IRCTC) ಹಾಗೂ ಆಹಾರ ಪೂರೈಕೆದಾರರ (Vendor) ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಒಟ್ಟಾರೆ 60 ಲಕ್ಷ ರೂಪಾಯಿಗಳ ದಂಡ ವಿಧಿಸುವುದರ ಜೊತೆಗೆ, ವೆಂಡರ್ ಗುತ್ತಿಗೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಘಟನೆಯ ಹಿನ್ನೆಲೆ ಏನು?

ಮಾರ್ಚ್ 15, 2026 ರಂದು ಪಾಟ್ನಾ-ಟಾಟಾನಗರ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 21896) ರೈಲಿನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ರಿತೇಶ್ ಕುಮಾರ್ ಸಿಂಗ್ ಎಂಬ ಪ್ರಯಾಣಿಕರಿಗೆ ರಾತ್ರಿ ಊಟವನ್ನು ನೀಡಲಾಗಿತ್ತು. ಊಟದ ಜೊತೆ ನೀಡಲಾಗಿದ್ದ ಅಮುಲ್ ಮೊಸರಿನ (Curd) ಕಪ್ ಅನ್ನು ತೆರೆದು ನೋಡಿದಾಗ, ಅದರಲ್ಲಿ ಜೀವಂತ ಹುಳುಗಳು ಹರಿದಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸಿದೆ. ತಕ್ಷಣವೇ ರಿತೇಶ್ ಕುಮಾರ್ ಅವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಇದರ ವಿಡಿಯೋ ಚಿತ್ರೀಕರಿಸಿದ್ದಾರೆ. ವಿಡಿಯೋದಲ್ಲಿ ಮೊಸರಿನ ಮೇಲೆ ಹುಳುಗಳು ಚಲಿಸುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಅವರು ತಕ್ಷಣ ರೈಲಿನ ಮ್ಯಾನೇಜರ್ ಅನ್ನು ಕರೆದು ದೂರು ದಾಖಲಿಸಲು ಮುಂದಾಗಿದ್ದಾರೆ.

Vande Bharat Express

'ಹುಳುವಲ್ಲ, ಅದು ಕೇಸರಿ' ಎಂದ ಸಿಬ್ಬಂದಿ

ರಿತೇಶ್ ಕುಮಾರ್ ಅವರು ರೈಲಿನ ಸಿಬ್ಬಂದಿಯನ್ನು ಕರೆದು ಮೊಸರಿನಲ್ಲಿದ್ದ ಹುಳುಗಳನ್ನು ತೋರಿಸಿದಾಗ, ಸಿಬ್ಬಂದಿಯು ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. "ಅದು ಹುಳುವಲ್ಲ, ಅದು ಕೇವಲ ಕೇಸರಿ (Kesar)" ಎಂದು ಸಿಬ್ಬಂದಿ ಸಮರ್ಥಿಸಿಕೊಳ್ಳಲು ಯತ್ನಿಸಿದ್ದಾರೆ. ಸಿಬ್ಬಂದಿಯ ಈ ಅಸಂಬದ್ಧ ಉತ್ತರದಿಂದ ಪ್ರಯಾಣಿಕರು ಮತ್ತಷ್ಟು ಕೆರಳಿದ್ದಾರೆ. ಟಾರ್ಚ್ ಬಿಟ್ಟು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಊಟದ ಟ್ರೇ ಮೇಲೆಯೂ ಹುಳುಗಳು ಹರಿದಾಡುತ್ತಿರುವುದು ಪತ್ತೆಯಾಗಿದೆ. ಈ ವೇಳೆ ಸುತ್ತಮುತ್ತಲಿನ ಇತರ ಪ್ರಯಾಣಿಕರು ಸಹ ಜಮಾಯಿಸಿ, ರೈಲ್ವೆ ಇಲಾಖೆಯ ಕಳಪೆ ಸೇವೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ಅಧಿಕಾರಿಗಳಿಂದ ದೂರು ಪುಸ್ತಕ (Complaint Book) ನೀಡುವಂತೆ ಪಟ್ಟು ಹಿಡಿದಿದ್ದಾರೆ. ಪಾಟ್ನಾ ಮೂಲದ ಕಂಟೆಂಟ್ ಕ್ರಿಯೇಟರ್ ಆಗಿರುವ ರಿತೇಶ್ ಕುಮಾರ್ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಇದು ವೈರಲ್ ಆಗಿದೆ.

ರೈಲ್ವೆ ಇಲಾಖೆಯಿಂದ ಕಠಿಣ ಕ್ರಮ

ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರೈಲ್ವೆ ಇಲಾಖೆ ಹಾಗೂ ಐಆರ್‌ಸಿಟಿಸಿ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದರು. ದುಬಾರಿ ಹಣ ಕೊಟ್ಟು ಟಿಕೆಟ್ ಖರೀದಿಸಿದರೂ ಇಂತಹ ಕಳಪೆ ಊಟ ನೀಡುತ್ತಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ರೈಲ್ವೆ ಸಚಿವಾಲಯ ತಕ್ಷಣವೇ ಕಾರ್ಯಪ್ರವೃತ್ತವಾಗಿದೆ.

ಎಕ್ಸ್ ಖಾತೆಯಲ್ಲಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಸಚಿವಾಲಯ, "ಮಾರ್ಚ್ 15, 2026 ರಂದು ಪಾಟ್ನಾ-ಟಾಟಾನಗರ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಕರು ನೀಡಿದ ಆಹಾರದ ಗುಣಮಟ್ಟದ ದೂರನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಕರ್ತವ್ಯ ಲೋಪಕ್ಕಾಗಿ ಐಆರ್‌ಸಿಟಿಸಿಗೆ 10 ಲಕ್ಷ ರೂಪಾಯಿ ಹಾಗೂ ಆಹಾರ ಪೂರೈಕೆದಾರ ಏಜೆನ್ಸಿಗೆ 50 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಅಲ್ಲದೆ, ಪೂರೈಕೆದಾರರ ಗುತ್ತಿಗೆಯನ್ನು (Contract) ತಕ್ಷಣವೇ ರದ್ದುಗೊಳಿಸಲು ಆದೇಶಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಆಹಾರದ ಗುಣಮಟ್ಟ ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ" ಎಂದು ಸ್ಪಷ್ಟಪಡಿಸಿದೆ.

ಈ ಕಠಿಣ ಕ್ರಮದ ಮೂಲಕ ರೈಲ್ವೆ ಇಲಾಖೆಯು, ಪ್ರಯಾಣಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುವ ಯಾವುದೇ ಏಜೆನ್ಸಿಯನ್ನು ಸಹಿಸುವುದಿಲ್ಲ ಎಂಬ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+