Vaibhav Sooryavanshi: ಭಾರತ ತಂಡದಿಂದ ಕೈಬಿಡುವಂತೆ ಬಂದ ಕರೆಗಳ ಬೆನ್ನಲ್ಲೇ ವೈಭವ್ ಸೂರ್ಯವಂಶಿ ಹೀಗ್ ಮಾಡೋದಾ?
Vaibhav Sooryavanshi: ದಂಬುಲ್ಲಾದಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯಲ್ಲಿ ಭಾರತದ 'ಎ' ತಂಡದ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ವೈಭವ್ ಸೂರ್ಯವಂಶಿ ಅವರು ಶ್ರೀಲಂಕಾ ಆಟಗಾರನ ಜೊತೆ ಗಲಾಟೆ ಮಾಡಿಕೊಂಡಿದ್ದರು. ಜೊತೆಗೆ ಈ ಸರಣಿಯಲ್ಲಿ ಅವರಿಂದ ನಿರೀಕ್ಷಿತ ಪ್ರದರ್ಶನ ಬಾರದ ಹಿನ್ನೆಲೆ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಈ ನಡುವೆಯೇ ಟೀಮ್ ಇಂಡಿಯಾ ಮಾಜಿ ಆಟಗಾರ ವೈಭವ್ ಅವರನ್ನು ಹೊರಗಿಡುವ ಬಗ್ಗೆ ಅಚ್ಚರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದು ಸದ್ಯ ಸಖತ್ ಸದ್ದು ಮಾಡುತ್ತಿದೆ.
ದಂಬುಲ್ಲಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ ಭಾರತ 'ಎ' ತಂಡದ ಆರಂಭಿಕರಾದ 15 ವರ್ಷದ ವೈಭವ್ ಸೂರ್ಯವಂಶಿ ಅವರ ಇತ್ತೀಚಿನ ನಡವಳಿಕೆ ಮತ್ತು ಬ್ಯಾಟಿಂಗ್ ಪ್ರದರ್ಶನ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅಫ್ಘಾನಿಸ್ತಾನ 'ಎ' ತಂಡದ ವಿರುದ್ಧದ ಪಂದ್ಯಕ್ಕೂ ಮುನ್ನ ಅವರನ್ನು ತಂಡದಿಂದ ಹೊರಗಿಡಬೇಕೆಂದು ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಅಭಿಪ್ರಾಯಪಟ್ಟಿದ್ದರು. ಆದರೆ ಪಂದ್ಯದಲ್ಲಿ ಕಣಕ್ಕಿಳಿದ ವೈಭವ್ 38 ರನ್ ಗಳಿಸಿ ಮತ್ತೊಮ್ಮೆ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾಗಿದ್ದಾರೆ.

ಶ್ರೀಲಂಕಾ ಆಟಗಾರ-ವೈಭವ್ ಜಗಳ
ಕೆಲವು ದಿನಗಳ ಹಿಂದೆ ಶ್ರೀಲಂಕಾ 'ಎ' ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಸೂಪರ್ ಓವರ್ ಮುಕ್ತಾಯದ ನಂತರ ಮೈದಾನದಲ್ಲಿ ಅಹಿತಕರ ಘಟನೆಯೊಂದು ನಡೆದಿತ್ತು. ಶ್ರೀಲಂಕಾದ ಆಟಗಾರ ವಿಶೇನ್ ಹಲಂಬಾಗೆ ಯುವ ಆಟಗಾರ ವೈಭವ್ ಅವರನ್ನು ಉದ್ದೇಶಿಸಿ, 'ಮನೆಗೆ ಹೋಗು, ಇದು ಐಪಿಎಲ್ ಅಲ್ಲ' ಎಂದು ಸತತವಾಗಿ ಹೀಯಾಳಿಸಿದ್ದರು ಎನ್ನಲಾಗಿದೆ. ಇದರಿಂದ ಕೋಪಗೊಂಡ ವಂಡರ್ ಕಿಡ್ ಮೈದಾನದಲ್ಲೇ ಎದುರಾಳಿ ಆಟಗಾರರತ್ತ ಧಾವಿಸಿ ದೈಹಿಕವಾಗಿ ತಳ್ಳಾಡಿದ್ದರು. ಶ್ರೀಲಂಕಾದ ವಿಕೆಟ್ ಕೀಪರ್ ನಿರೋಶನ್ ಡಿಕ್ವೆಲ್ಲಾ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
ಸಂಜಯ್ ಮಾಂಜ್ರೇಕರ್ ಹೇಳಿದ್ದೇನು?
ವೈಭವ್ ಅವರ ಈ ವರ್ತನೆಯನ್ನು ಸಂಜಯ್ ಮಾಂಜ್ರೇಕರ್ ಅವರು ಖಂಡಿಸಿದ್ದಾರೆ. ಎದುರಾಳಿ ಆಟಗಾರರು ಎಷ್ಟೇ ಪ್ರಚೋದನೆ ಮಾಡಿದರೂ ಮೈದಾನದಲ್ಲಿ ದೈಹಿಕ ಘರ್ಷಣೆಗೆ ಇಳಿಯುವುದು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ತಮ್ಮ ಟ್ವಿಟ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, 'ನಾನೇನಾದರೂ ಭಾರತ 'ಎ' ತಂಡದ ಕೋಚ್ ಅಥವಾ ಮ್ಯಾನೇಜರ್ ಆಗಿದ್ದರೆ, ಮೈದಾನದಲ್ಲಿ ದೈಹಿಕವಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂಬ ಪಾಠ ಕಲಿಸಲು ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಿಂದ ವೈಭವ್ ಸೂರ್ಯವಂಶಿಯನ್ನು ಖಂಡಿತವಾಗಿ ಹೊರಗಿಡುತ್ತಿದ್ದೆ ಎಂದು ಹೇಳಿದ್ದಾರೆ.
ವೈಭವ್ ಬ್ಯಾಟ್‌ನಿಂದ ಮೂಡಿಬರದ ನಿರೀಕ್ಷಿತ ಪ್ರದರ್ಶನ
ಮಾಂಜ್ರೇಕರ್ ಅವರ ಟೀಕೆಗಳ ಹೊರತಾಗಿಯೂ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ಅಂತಿಮ ಪ್ಲೇಯಿಂಗ್ 11ನಲ್ಲಿ ವೈಭವ್ ಸ್ಥಾನ ಉಳಿಸಿಕೊಂಡರು. ಆದರೆ ಕ್ರೀಸ್‌ನಲ್ಲಿ ಸಿಕ್ಕ ಉತ್ತಮ ಆರಂಭವನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಅವರಿಗೆ ಸಾಧ್ಯವಾಗಲಿಲ್ಲ. ಎಡಗೈ ಬ್ಯಾಟರ್ ವೈಭವ್ 28 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್‌ಗಳ ನೆರವಿನಿಂದ ವೇಗದ 38 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಇನ್ನಿಂಗ್ಸ್‌ನಲ್ಲಿ ಅವರಿಗೆ ಅದೃಷ್ಟದ ಸಾಥ್ ಸಿಕ್ಕಿತ್ತು. ಆದರೂ ಅವರು ಇದರ ಲಾಭ ಪಡೆಯುವಲ್ಲಿ ವಿಫಲರಾದರು.
ಐಪಿಎಲ್ ಯಶಸ್ಸಿನ ನಂತರ ವೈಭವ್‌ಗೆ ಕಠಿಣ ಸವಾಲು
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ 2026 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ವೈಭವ್ ಸೂರ್ಯವಂಶಿ 16 ಪಂದ್ಯಗಳಲ್ಲಿ 776 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ 'ಆರೆಂಜ್ ಕ್ಯಾಪ್' ಮತ್ತು 'ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್' ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಆದರೆ ಐಪಿಎಲ್‌ನ ಬ್ಯಾಟಿಂಗ್ ಸ್ನೇಹಿ ಪಿಚ್‌ಗಳಿಗೆ ಹೋಲಿಸಿದರೆ ಶ್ರೀಲಂಕಾದ ಪಿಚ್‌ಗಳು ಭಿನ್ನವಾಗಿದ್ದು, 50 ಓವರ್‌ಗಳ ಸ್ವರೂಪಕ್ಕೆ ಹೊಂದಿಕೊಳ್ಳುವುದು ಅವರಿಗೆ ಸವಾಲಾಗಿದೆ. ಈ ಸರಣಿಯ ನಾಲ್ಕು ಪಂದ್ಯಗಳಲ್ಲಿ ಅವರು ಕ್ರಮವಾಗಿ 14, 44, 21 ಮತ್ತು 38 ರನ್ ಗಳಿಸಿದ್ದು, ಉತ್ತಮ ಲಯದಲ್ಲಿದ್ದರೂ ಒಂದೂ ಅರ್ಧಶತಕ ದಾಖಲಿಸಲು ಸಾಧ್ಯವಾಗಿಲ್ಲ. ಪ್ರಮುಖವಾಗಿ ಶಾರ್ಟ್ ಬಾಲ್‌ಗಳನ್ನು ಎದುರಿಸಲು ಅವರು ಪರದಾಡುತ್ತಿದ್ದಾರೆ.
ಈ ತಿಂಗಳ ಕೊನೆಯಲ್ಲಿ ಅವರು ಭಾರತ ಹಿರಿಯರ ತಂಡದೊಂದಿಗೆ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿದ್ದು, ತಮ್ಮ ಸ್ಫೋಟಕ ಬ್ಯಾಟಿಂಗ್ ಜೊತೆಗೆ ತಾಂತ್ರಿಕ ಹಾಗೂ ಮಾನಸಿಕ ಶಿಸ್ತನ್ನು ಬೆಳೆಸಿಕೊಳ್ಳುವುದು ಅವರಿಗೆ ಅನಿವಾರ್ಯವಾಗಿದೆ. ಒಟ್ಟಿನಲ್ಲಿ ಇದೀಗ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರದಿರುವುದು ಹಾಗೂ ಶ್ರೀಂಲಂಕಾ ಆಟಗಾರನ ಜೊತೆ ನಡೆದುಕೊಂಡ ರೀತಿ ಭಾರಿ ಚರ್ಚೆಗೆ ಕಾರಣವಾಗಿದೆ.












Click it and Unblock the Notifications