ಅನಂತ್ ಅಂಬಾನಿ ಹೆಸರಿನ ಹಿಂದೆ ಮಣಿಪಾಲ ಕನೆಕ್ಷನ್! ಧೀರೂಭಾಯಿ ಅಂಬಾನಿಯ ಕನಸಿಗೆ ರೆಕ್ಕೆ ನೀಡಿದ ಕನ್ನಡಿಗನ ಕಥೆ

ಮಣಿಪಾಲ ಮತ್ತು ಅಂಬಾನಿ ಕುಟುಂಬದ ನಡುವೆ ಇರುವ ಅಪರೂಪದ ಬಾಂಧವ್ಯ ನಿಮಗೆ ತಿಳಿದಿರಲಾರದು. ಇಂದು ಭಾರತದ ಅತ್ಯಂತ ಶ್ರೀಮಂತ ಮತ್ತು ಪ್ರಭಾವಿ ಉದ್ಯಮ ಕುಟುಂಬಗಳಲ್ಲಿ ಒಂದಾದ ಅಂಬಾನಿ ಕುಟುಂಬ ಎಲ್ಲರಿಗೂ ಪರಿಚಿತ. ಆದರೆ ಈ ಯಶಸ್ಸಿನ ಹಿಂದೆ ಕರ್ನಾಟಕದ ಮಣಿಪಾಲಕ್ಕೂ ಒಂದು ವಿಶೇಷ ಸಂಬಂಧವಿದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಅಂಬಾನಿ ಕುಟುಂಬದ ಹೊಸ ತಲೆಮಾರಿನ ಅನಂತ್ ಅಂಬಾನಿ ಅವರ ಹೆಸರಿನ ಹಿಂದೆಯೂ ಮಣಿಪಾಲದೊಂದಿಗೆ ನಂಟು ಹೊಂದಿರುವ ಒಂದು ಭಾವನಾತ್ಮಕ ಕಥೆಯಿದೆ. ಈ ಕಥೆಯ ಕೇಂದ್ರಬಿಂದುಗಳು ಭಾರತದ ಕೈಗಾರಿಕಾ ಕ್ಷೇತ್ರದ ದಿಗ್ಗಜರಾದ ಧೀರೂಭಾಯಿ ಅಂಬಾನಿ ಮತ್ತು ಮಣಿಪಾಲದ ಹೆಮ್ಮೆಯ ವ್ಯಕ್ತಿತ್ವ, ಸಿಂಡಿಕೇಟ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಟಿಎ ಪೈ (ತೋನ್ಸೆ ಅನಂತ್ ಪೈ).

ಕನಸುಗಳೊಂದಿಗೆ ಬಂದ ಧೀರೂಭಾಯಿ

1960ರ ದಶಕದಲ್ಲಿ ಧೀರೂಭಾಯಿ ಅಂಬಾನಿ ಪೂರ್ವ ಆಫ್ರಿಕಾದ ಏಡೆನ್‌ನಿಂದ ಭಾರತಕ್ಕೆ ಮರಳಿದರು. ಆಗ ಅವರ ಬಳಿ ದೊಡ್ಡ ಕನಸುಗಳಿದ್ದವು. ಭಾರತದಲ್ಲಿ ಸ್ವಂತ ಉದ್ಯಮ ಆರಂಭಿಸಿ ಯಶಸ್ವಿಯಾಗಬೇಕೆಂಬ ಮಹತ್ವಾಕಾಂಕ್ಷೆ ಅವರಲ್ಲಿತ್ತು. ಆದರೆ ಉದ್ಯಮ ಆರಂಭಿಸಲು ಹಣಕಾಸಿನ ನೆರವು ಅಗತ್ಯವಾಗಿತ್ತು. ಅದಕ್ಕಾಗಿ ಅವರು ವಿವಿಧ ಬ್ಯಾಂಕುಗಳ ಮೊರೆ ಹೋದರು. ಆದರೆ ಆ ಕಾಲದಲ್ಲಿ ಯುವ ಉದ್ಯಮಿಗೆ ಯಾವುದೇ ಸೆಕ್ಯುರಿಟಿ ಇಲ್ಲದೆ ಸಾಲ ನೀಡಲು ಬ್ಯಾಂಕುಗಳು ಹಿಂದೇಟು ಹಾಕುತ್ತಿದ್ದವು. ಹೀಗಾಗಿ ಧೀರೂಭಾಯಿ ಅವರಿಗೆ ಸಾಲ ದೊರೆಯಲಿಲ್ಲ.

Anant Ambani Manipal Connection

ಟಿಎ ಪೈ ಅವರ ದೂರದೃಷ್ಟಿಯ ನಿರ್ಧಾರ

ಈ ಸಂದರ್ಭದಲ್ಲಿ ಧೀರೂಭಾಯಿ ಅಂಬಾನಿ ನೇರವಾಗಿ ಮಣಿಪಾಲಕ್ಕೆ ಬಂದು ಟಿಎ ಪೈ ಅವರನ್ನು ಭೇಟಿ ಮಾಡಿದರು. ತಮ್ಮ ಕನಸುಗಳು, ಯೋಜನೆಗಳನ್ನು ಅವರಿಗೆ ವಿವರಿಸಿದರು. ಧೀರೂಭಾಯಿ ಅವರ ಮಾತುಗಳನ್ನು ಕೇಳಿದ ಟಿಎ ಪೈ, ಅವರಲ್ಲಿದ್ದ ಆತ್ಮವಿಶ್ವಾಸ ಮತ್ತು ಸಾಮರ್ಥ್ಯವನ್ನು ಗುರುತಿಸಿದರು. ಧೀರೂಭಾಯಿ ಕೇವಲ ₹8 ಲಕ್ಷ ಸಾಲ ಕೇಳಿದ್ದರೂ, ಟಿಎ ಪೈ ಅವರು ₹10 ಲಕ್ಷ ಸಾಲ ಮಂಜೂರು ಮಾಡಿದರು.

ಆಶ್ಚರ್ಯದ ಸಂಗತಿಯೆಂದರೆ, ಈ ಸಾಲಕ್ಕೆ ಅವರು ಯಾವುದೇ ಭದ್ರತೆಯನ್ನೂ ಕೇಳಲಿಲ್ಲ. ಬ್ಯಾಂಕ್‌ನ ಕೆಲವು ಅಧಿಕಾರಿಗಳು ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದರು. ಇಂತಹ ದೊಡ್ಡ ಕನಸುಗಳಿರುವ ವ್ಯಕ್ತಿಗಳಿಗೆ ಬ್ಯಾಕ್ ಬೆಂಬಲ ನೀಡಲೇಬೇಕು ಎಂದು ಟಿಎ ಪೈ ವಾದಿಸಿ ಸಾಲ ಮಂಜೂರು ಮಾಡಿಸಿದರು.

Reliance: ಜಾಗತಿಕ ಸವಾಲುಗಳ ನಡುವೆಯೂ ರಿಲಯನ್ಸ್ ಲಾಭದಲ್ಲಿ ದಾಖಲೆಯ ಏರಿಕೆ; ಇಲ್ಲಿದೆ ಅಂಬಾನಿ ಕೊಟ್ಟ ಬಿಗ್ ಅಪ್ಡೇಟ್
Reliance: ಜಾಗತಿಕ ಸವಾಲುಗಳ ನಡುವೆಯೂ ರಿಲಯನ್ಸ್ ಲಾಭದಲ್ಲಿ ದಾಖಲೆಯ ಏರಿಕೆ; ಇಲ್ಲಿದೆ ಅಂಬಾನಿ ಕೊಟ್ಟ ಬಿಗ್ ಅಪ್ಡೇಟ್

'ವಿಮಲ್' ಬ್ರ್ಯಾಂಡ್ ಯಶಸ್ಸು

ಟಿಎ ಪೈ ಅವರಿಂದ ದೊರೆತ ಹಣಕಾಸಿನ ನೆರವು ಧೀರೂಭಾಯಿ ಅಂಬಾನಿ ಅವರ ಜೀವನದಲ್ಲಿ ಮಹತ್ವದ ತಿರುವಾಗಿ ಪರಿಣಮಿಸಿತು. ಇದೇ ಬಂಡವಾಳವನ್ನು ಬಳಸಿಕೊಂಡು ಅವರು ವಿಮಲ್ ಬ್ರ್ಯಾಂಡ್ ಉದ್ಯಮವನ್ನು ಆರಂಭಿಸಿದರು. ಗುಣಮಟ್ಟದ ಬಟ್ಟೆಗಳು ಮತ್ತು ನವೀನ ಮಾರಾಟ ತಂತ್ರಗಳ ಮೂಲಕ ವಿಮಲ್ ಬ್ರ್ಯಾಂಡ್ ದೇಶಾದ್ಯಂತ ಜನಪ್ರಿಯವಾಯಿತು. ನಂತರ ಇದೇ ಉದ್ಯಮ ಬೆಳೆಯುತ್ತಾ ಭಾರತದ ಅತಿದೊಡ್ಡ ಕೈಗಾರಿಕಾ ಸಂಸ್ಥೆಗಳಲ್ಲಿ ಒಂದಾದ ರಿಲಯನ್ಸ್ ಸಾಮ್ರಾಜ್ಯದ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು.

ಕೃತಜ್ಞತೆಯ ಸಂಕೇತವಾಗಿ ಅನಂತ್ ಹೆಸರು

ಧೀರೂಭಾಯಿ ಅಂಬಾನಿ ತಮ್ಮ ಯಶಸ್ಸಿನ ಹಿಂದಿನ ಟಿಎ ಪೈ ಅವರ ಪಾತ್ರವನ್ನು ಎಂದಿಗೂ ಮರೆಯಲಿಲ್ಲ. ಅವರ ಸಹಾಯಕ್ಕೆ ಗೌರವ ಮತ್ತು ಕೃತಜ್ಞತೆಯ ಸಂಕೇತವಾಗಿ ತಮ್ಮ ಮೊಮ್ಮಗನಿಗೆ 'ಅನಂತ್' ಎಂದು ಹೆಸರಿಟ್ಟರು. ಈ ಹೆಸರು ಟಿಎ ಪೈ ಅವರ ಪೂರ್ಣ ಹೆಸರಾದ ತೋನ್ಸೆ ಅನಂತ್ ಪೈ ಅವರಿಂದ ಪ್ರೇರಿತವಾಗಿದೆ.

Gold Investment: ಚಿನ್ನ ಖರೀದಿಸಿ ನಷ್ಟಕ್ಕೆ ತುತ್ತಾಗದಿರಿ: ಭಾರತೀಯರಿಗೆ ಮುಕೇಶ್ ಅಂಬಾನಿ ಕಿವಿಮಾತು
Gold Investment: ಚಿನ್ನ ಖರೀದಿಸಿ ನಷ್ಟಕ್ಕೆ ತುತ್ತಾಗದಿರಿ: ಭಾರತೀಯರಿಗೆ ಮುಕೇಶ್ ಅಂಬಾನಿ ಕಿವಿಮಾತು

ರಿಲಯನ್ಸ್ ಮಂಡಳಿಯಲ್ಲೂ ಸ್ಥಾನ

ಧೀರೂಭಾಯಿ ಅಂಬಾನಿ ಕೇವಲ ಹೆಸರಿನ ಮೂಲಕ ತಮ್ಮ ಗೌರವ ವ್ಯಕ್ತಪಡಿಸಲಿಲ್ಲ. ಅವರು ಟಿಎ ಪೈ ಅವರನ್ನು ರಿಲಯನ್ಸ್ ಇಂಡಸ್ಟ್ರೀಸ್‌ನ ನಿರ್ದೇಶಕರ ಮಂಡಳಿಯ ಸದಸ್ಯರನ್ನಾಗಿಯೂ ನೇಮಿಸಿದರು. ಇದು ಅವರ ಮೇಲಿದ್ದ ವಿಶ್ವಾಸ ಮತ್ತು ಗೌರವವನ್ನು ತೋರಿಸುತ್ತದೆ. ಟಿಎ ಪೈ ಅವರ ಮಾರ್ಗದರ್ಶನ ಮತ್ತು ಅನುಭವ ರಿಲಯನ್ಸ್ ಸಂಸ್ಥೆಯ ಬೆಳವಣಿಗೆಗೂ ಸಹಕಾರಿಯಾಯಿತು. 1981ರಲ್ಲಿ ಟಿಎ ಪೈ ನಿಧನರಾದಾಗ ಧೀರೂಭಾಯಿ ಅಂಬಾನಿ ಸ್ವತಃ ಮಣಿಪಾಲಕ್ಕೆ ಬಂದು ಅಂತಿಮ ನಮನ ಸಲ್ಲಿಸಿದರು. ಆ ಸಂದರ್ಭದಲ್ಲಿ ಅವರು ತಮ್ಮ ಸಂಸ್ಥೆಯ ಆರಂಭಿಕ ದಿನಗಳಲ್ಲಿ ಟಿಎ ಪೈ ನೀಡಿದ್ದ ನೆರವನ್ನು ನೆನಪಿಸಿಕೊಂಡರು.

ದಶಕಗಳ ನಂತರವೂ ಉಳಿದ ಬಾಂಧವ್ಯ

ಧೀರೂಭಾಯಿ ಅಂಬಾನಿ ಅವರ ಕಾಲದಿಂದಲೂ ಈ ಎರಡು ಕುಟುಂಬಗಳ ನಡುವಿನ ಸಂಬಂಧ ಮುಂದುವರಿದಿದೆ. ಮಣಿಪಾಲ್ ನೆಟ್ವರ್ಕ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್ ಯು. ಪೈ ಅವರು ಕಳೆದ ವರ್ಷ ಮುಂಬೈನಲ್ಲಿ ಧೀರೂಭಾಯಿ ಅಂಬಾನಿ ಅವರ ಪತ್ನಿ ಕೋಕಿಲಾಬೆನ್ ಅಂಬಾನಿ ಅವರನ್ನು ಭೇಟಿ ಮಾಡಿ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದರು.

ಇಂದು ಸಾವಿರಾರು ಕೋಟಿ ರೂಪಾಯಿಗಳ ಮೌಲ್ಯದ ರಿಲಯ್ಸ್ ಸಾಮ್ರಾಜ್ಯವನ್ನು ನೋಡಿದಾಗ, ಅದರ ಆರಂಭದಲ್ಲಿ ಒಬ್ಬ ಬ್ಯಾಕರ್, ಯುವ ಉದ್ಯಮಿಯ ಕನಸಿನ ಮೇಲೆ ಇಟ್ಟಿದ್ದ ನಂಬಿಕೆ ನೆನಪಾಗುತ್ತದೆ. ಟಿಎ ಪೈ ಅವರು ಆ ದಿನ ತೆಗೆದುಕೊಂಡ ಧೈರ್ಯದ ನಿರ್ಧಾರ ಭಾರತದ ಉದ್ಯಮ ಇತಿಹಾಸದ ದಿಕ್ಕನ್ನೇ ಬದಲಿಸಿತ್ತು.

ಬರಹ: ಭವಾನಿ ಭಟ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+