ಮರಕ್ಕೆ ಕಟ್ಟಿ ಹಾಕಿ ವಡೋದರ ಬಿಜೆಪಿ ಕಾರ್ಪೊರೇಟರ್ ಮೇಲೆ ಹಲ್ಲೆ
ವಡೋದರ, ಅಕ್ಟೋಬರ್ 4: ವಡೋದರ ನಗರ ಪಾಲಿಕೆಯ ಬಿಜೆಪಿ ಕಾರ್ಪೊರೇಟರ್ ಹಶ್ಮುಖ್ ಪಟೇಲ್ ರನ್ನು ಮರಕ್ಕೆ ಕಟ್ಟಿ ಹಾಕಿ ಅವರದ್ದೇ ವಾರ್ಡ್ ನಿವಾಸಿಗಳು ಥಳಿಸಿದ್ದಾರೆ.
ನಗರ ಪಾಲಿಕೆ ಸ್ಲಂನಲ್ಲಿದ್ದ ಮನೆಗಳನ್ನು ಕೆಡವಿ ಬೇರೆ ಮನೆಗಳನ್ನು ಅಲ್ಲಿನ ನಿವಾಸಿಗಳಿಗೆ ವಿತರಿಸಿತ್ತು. ಆದರೆ ಇದರ ಬಗ್ಗೆ ಅಸಮಧಾನಗೊಂಡಿರುವ ನಾಗರಿಕರು ಕಾರ್ಪೊರೇಟರ್ ರನ್ನೇ ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ.

ವಡೋದರದ ಬಾಪೊಡ್ ಕೆರೆ ಸಮೀಪ ಇರುವ ನವಿ ನಗ್ರಿ ನಿವಾಸಿಗಳನ್ನು ಕಳೆದ ಮೇನಲ್ಲಿ ಸ್ಥಳಾಂತರ ಮಾಡಲಾಗಿತ್ತು. ಸುಪ್ರಿಂ ಕೋರ್ಟ್ ಆದೇಶದ ಮೇಲೆ ಈ ಕ್ರಮ ಕೈಗೊಳ್ಳಲಾಗಿತ್ತು. ಸ್ಥಳಾಂತರ ಮಾಡಿದ ನಿವಾಸಿಗಳಿಗೆ 2 ಕಿಲೋಮೀಟರ್ ದೂರದಲ್ಲಿ ಪುನರ್ವಸತಿ ಕಲ್ಪಿಸಲಾಗಿತ್ತು.
"ಎಂದಿನಂತರ ನಾನು ವಾರ್ಡ್ ನಂಬರ್ 5ರಲ್ಲಿ ಸುತ್ತಾಡಲು ಹೋಗಿದ್ದಾಗ ನಿವಾಸಿಗಳು ಕೆರೆ ಪಕ್ಕ ಮತ್ತೆ ಮನೆ ಕಟ್ಟಿಕೊಳ್ಳುತ್ತಿರುವುದು ಕಾಣಿಸಿತು," ಎಂದು ಪಟೇಲ್ ಹೇಳಿದ್ದಾರೆ. ಈ ವೇಳೆ ಜಗಳ ನಡೆದು ನಿವಾಸಿಗಳನ್ನು ಪಟೇಲ್ ರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ.

ಕಾರ್ಪೊರೇಟರ್ ಗೆ ಕಾಲು ಮತ್ತು ಕೈಗೆ ಗಾಯವಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ಪಟೇಲ್ ಮೇಲೆ ಹಲ್ಲೆ ನಡೆಸಿರುವ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿವೆ.
ಹಲ್ಲೆ ಮಾಡಿರುವುದನ್ನು ನಾಗರಿಕರು ತಳ್ಳಿ ಹಾಕಿದ್ದಾರೆ. ಆದರೆ, ಘಟನೆಗೆ ಸಂಬಂಧಿಸಿದಂತೆ ಪೊಲೀಸರು 34 ಮಹಿಳೆಯರು ಸೇರಿ 64 ನಿವಾಸಿಗಳನ್ನು ಬಂಧಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ವಡೋದರ ನಗರ ಪಾಲಿಕೆ ಕಮಿಷನರ್ ವಿನೋದ್ ರಾವ್, ಈ ಘಟನೆ ಹಿಂದೆ ಏನೋ ಪ್ರಚೋದನೆ ಇರುವಂತೆ ಕಾಣಿಸುತ್ತಿದೆ. ಪಾಲಿಕೆ ಕಡೆಯಿಂದ 118 ಕುಟುಂಬಗಳಿಕೆ ಪಕ್ಕಾ ಮನೆಗಳನ್ನು ಹಸ್ತಾಂತರಿಸಲಾಗಿದೆ ಎಂದು ಹೇಳಿದ್ದಾರೆ.
ಆದರೆ ಹೊಸ ಮನೆಗಳಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications