Uttarakhand: ಉತ್ತರಾಖಂಡದ ಚಮೋಲಿ ಹಿಮನದಿ ಸ್ಫೋಟ: 4 ಕಾರ್ಮಿಕರು ಸಾವು, 50 ಜನರ ರಕ್ಷಣೆ
ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾನಾ ಗ್ರಾಮದಲ್ಲಿ ಬಿಆರ್‌ಒ ಶಿಬಿರದ ಮೇಲೆ ಹಿಮನದಿ ಕುಸಿದು ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಸಿಬಿರದಲ್ಲಿ ಇದ್ದ 55 ಕಾರ್ಮಿಕರಲ್ಲಿ 50 ಜನರನ್ನು ರಕ್ಷಿಸಲಾಗಿದೆ. ಭಾರತೀಯ ಸೇನೆಯ ಪಿಆರ್‌ಒ ಲೆಫ್ಟಿನೆಂಟ್ ಕರ್ನಲ್ ಮನೀಶ್ ಶ್ರೀವಾಸ್ತವ ನಾಲ್ಕು ಜನರ ಸಾವನ್ನು ದೃಢಪಡಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ 5:30 ರಿಂದ 6 ಗಂಟೆಯ ನಡುವೆ ಮಾನಾ ಮತ್ತು ಬದರಿನಾಥ್ ನಡುವಿನ ಗಡಿ ರಸ್ತೆ ಸಂಸ್ಥೆ (ಬಿಆರ್‌ಒ) ಶಿಬಿರದಲ್ಲಿ ಹಿಮಪಾತ ಸಂಭವಿಸಿತ್ತು. 55 ಕಾರ್ಮಿಕರು ಹಿಮನದಿಯ ಅಡಿಯಲ್ಲಿ ಸಿಲುಕಿದ್ದರು. ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಮತ್ತು ಸೇನಾ ತಂಡಗಳು ಕಾರ್ಮಿಕರನ್ನು ರಕ್ಷಣೆ ಮಾಡಿವೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ನಾಲ್ಕು ಜನರು ಮೃತಪಟ್ಟಿರುವುದು ದೃಢಪಟ್ಟಿದೆ. ಸೇನೆ ಮತ್ತು ಎನ್‌ಡಿಆರ್‌ಎಫ್ ತಂಡಗಳು ಇನ್ನೂ ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ನಿರತವಾಗಿವೆ.

ಮತ್ತೊಂದೆಡೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪೀಡಿತ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಿ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಧಾಮಿ ಅವರೊಂದಿಗೆ ಮಾತನಾಡಿ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆಗಾಗಿ ನಾಲ್ಕು ತಂಡಗಳನ್ನು ಕಳುಹಿಸಿದ್ದು, ಇನ್ನೂ ನಾಲ್ಕು ತಂಡಗಳು ಸಜ್ಜಾಗಿವೆ. ಕೆಟ್ಟ ಹವಾಮಾನದ ಹೊರತಾಗಿಯೂ ಉಳಿದ ಜನರನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ. ಇಲ್ಲಿಯವರೆಗೆ, 55 ಕಾರ್ಮಿಕರಲ್ಲಿ 50 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಅಲ್ಲದೆ ಭಾರತೀಯ ಸೇನೆಯು ಸುತ್ತಲಿನ 14 ನಾಗರಿಕರನ್ನು ಸಹ ರಕ್ಷಿಸಿದೆ.
ಶುಕ್ರವಾರ ಹಿಮಪಾತ
ಶುಕ್ರವಾರ ಮಳೆ ಮತ್ತು ಭಾರೀ ಹಿಮಪಾತದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ರಾತ್ರಿಯಾದ ಕಾರಣ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಶನಿವಾರ ಹವಾಮಾನ ಸುಧಾರಿಸಿದಾಗ, ಹೆಲಿಕಾಪ್ಟರ್‌ಗಳು ಕಾರ್ಯಾಚರಣೆಯಲ್ಲಿ ಸೇರಿಕೊಂಡಿವು.
ಮತ್ತೊಂದೆಡೆ ಜಿಒಸಿ-ಇನ್-ಸಿ ಸೆಂಟ್ರಲ್ ಕಮಾಂಡ್ ಲೆಫ್ಟಿನೆಂಟ್ ಜನರಲ್ ಅನಿಂದ್ಯಾ ಸೇನ್‌ಗುಪ್ತಾ ಮತ್ತು ಜಿಒಸಿ ಉತ್ತರ ಭಾರತ ಪ್ರದೇಶದ ಲೆಫ್ಟಿನೆಂಟ್ ಜನರಲ್ ಡಿಜಿ ಮಿಶ್ರಾ ಅವರು ಮಾನಾದಲ್ಲಿ ಹಿಮಪಾತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ, ನಡೆಯುತ್ತಿರುವ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಿದರು. ಬದುಕುಳಿದವರನ್ನು ಪತ್ತೆಹಚ್ಚಲು ವಿಶೇಷ ರೆಕೊ ರಾಡಾರ್‌ಗಳು, ಯುಎವಿಗಳು, ಕ್ವಾಡ್‌ಕಾಪ್ಟರ್‌ಗಳು, ಹಿಮಪಾತ ರಕ್ಷಣಾ ನಾಯಿಗಳು ಇತ್ಯಾದಿಗಳನ್ನು ಸೇವೆಗೆ ನಿಯೋಜಿಸಲಾಗಿದೆ.
ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಸೇನಾ ಸಿಬ್ಬಂದಿ
ಮತ್ತೊಂದೆಡೆ ಅಗತ್ಯ ಉಪಕರಣಗಳು, ಸಂಪನ್ಮೂಲಗಳನ್ನು ಸಾಗಿಸಲು ಮತ್ತು ಗಾಯಾಳುಗಳನ್ನು ಸ್ಥಳಾಂತರಿಸಲು ಹೆಲಿಕಾಪ್ಟರ್‌ಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಭಾರತೀಯ ಸೇನೆಯು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ತ್ವರಿತ ರಕ್ಷಣಾ ಪ್ರಯತ್ನಗಳನ್ನು ಮಾಡುತ್ತಿದೆ.
ಸ್ಥಳದಲ್ಲಿದ್ದ ಭಾರತೀಯ ಸೇನೆಯ ವೈದ್ಯರು ಗಂಭೀರವಾಗಿ ಗಾಯಗೊಂಡವರಿಗೆ ಜೀವ ಉಳಿಸುವ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ. ಭಾರತೀಯ ಸೇನಾ ವಿಮಾನಯಾನ ಮತ್ತು ವಾಯುಪಡೆಯ ಎಂಟು ಹೆಲಿಕಾಪ್ಟರ್‌ಗಳನ್ನು ಬಳಸಿ ಕಾರ್ಯಚರಣೆಯನ್ನು ನಡೆಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 19 ಜನರನ್ನು ಮಾನಾದಿಂದ ಜೋಶಿಮಠಕ್ಕೆ ಸಾಗಿಸಲಾಗಿದೆ. ಭಾರತೀಯ ಸೇನೆಯ ಕೇಂದ್ರ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್, ಉತ್ತರ ಭಾರತ ಪ್ರದೇಶದ ಕಮಾಂಡಿಂಗ್ ಜನರಲ್ ಆಫೀಸರ್ ಮತ್ತು ಗಡಿ ರಸ್ತೆಗಳ ಮಹಾನಿರ್ದೇಶಕರು ಸೇರಿದಂತೆ ಉನ್ನತ ಶ್ರೇಣಿಯ ಅಧಿಕಾರಿಗಳು ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಂಘಟಿಸಲು ಹಾಜರಿದ್ದಾರೆ.
ಮಾನಾದಲ್ಲಿ ಬೀಡುಬಿಟ್ಟಿರುವ ಸೇನೆ ಮತ್ತು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಬೆಳಿಗ್ಗೆ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗತಿಯಲ್ಲಿ ನಡೆಸುತ್ತಿದ್ದಾರೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಎನ್.ಕೆ. ಜೋಶಿ ತಿಳಿಸಿದ್ದಾರೆ.












Click it and Unblock the Notifications