
ಉತ್ತರಖಂಡದ ಬಿಜೆಪಿ ಮುಖಂಡನ ಪತ್ನಿ ಯುಪಿ ಪೊಲೀಸರ ಗುಂಡಿಗೆ ಬಲಿ
ಡೆಹ್ರಾಡೂನ್, ಅಕ್ಟೋಬರ್ 13: ಅಕ್ರಮ ಗಣಿಗಾರಿಕೆ ಆರೋಪಿ ವಿರುದ್ಧ ಉತ್ತರಾಖಂಡದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಉತ್ತರ ಪ್ರದೇಶದ ಮೊರಾದಾಬಾದ್ ಠಾಣೆಯ ಐವರು ಪೊಲೀಸರು ಗಾಯಗೊಂಡಿದ್ದು, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಭರತ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗುರುವಾರ ಬೆಳಗ್ಗೆ ನಡೆದ ಶೂಟೌಟ್‌ನಲ್ಲಿ ಮೃತಪಟ್ಟಿರುವ ಮಹಿಳೆ ಸ್ಥಳೀಯ ಬಿಜೆಪಿ ಮುಖಂಡನ ಪತ್ನಿ ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶ ಪೊಲೀಸರ ಗುಂಡಿಗೆ ಮಹಿಳೆ ಬಲಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಉತ್ತರಾಖಂಡ ಹಿಮಕುಸಿತದಲ್ಲಿ ಇಬ್ಬರು ಕನ್ನಡಿಗರ ದುರ್ಮರಣ, ಮೃತದೇಹ ಪತ್ತೆ
ಪೊಲೀಸರು ಹಾಗೂ ಅಕ್ರಮ ಗಣಿಗಾರಿಕೆ ಆರೋಪಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಆ ವೇಳೆ, ಉತ್ತರ ಪ್ರದೇಶ ಪೊಲೀಸರು ಹಾರಿಸಿದ ಗುಂಡು ಮಹಿಳೆಗೆ ತಗುಲಿದೆ. ಬಿಜೆಪಿ ಮುಖಂಡ ಗುರ್ತಾಜ್ ಭುಲ್ಲರ್ ಪತ್ನಿ ಗುರುಪ್ರೀತ್ ಕೌರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಜಾಫರ್ ಎಂಬುವವನು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರು. ಆತನನ್ನು ಬಂಧಿಸಲು ಮೊರಾದಾಬಾದ್ ಪೊಲೀಸರ ತಂಡವು ಉತ್ತರಾಖಂಡದ ಭರತ್‌ಪುರಕ್ಕೆ ತಲುಪಿದಾಗ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ಐವರು ಪೊಲೀಸರು ಗಾಯಗೊಂಡರು ಮತ್ತು ಮಹಿಳೆಯೊಬ್ಬರು ಮೃತಪಟ್ಟರು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಆರೋಪಿ ಜಾಫರ್ ತಲೆ ಮೇಲೆ 50,000 ರೂ. ಬಹುಮಾನವನ್ನು ಘೋಷಿಸಲಾಗಿತ್ತು. ಬಿಜೆಪಿ ಮುಖಂಡ ಭುಲ್ಲರ್ ಮನೆಯಲ್ಲಿ ಆರೋಪಿ ತಲೆಮರೆಸಿಕೊಂಡಿದ್ದನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಿಜೆಪಿ ಮುಖಂಡನ ಪತ್ನಿಯ ಸಾವಿಗೆ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ನಾಲ್ವರು ಉತ್ತರ ಪ್ರದೇಶ ಪೊಲೀಸರನ್ನು ಒತ್ತೆಯಾಳಾಗಿಸಿಕೊಂಡಿದ್ದಾರೆ. ಯುಪಿ ಪೊಲೀಸರ ವಿರುದ್ಧ ಉತ್ತರಾಖಂಡದಲ್ಲಿ ಕೊಲೆ ಪ್ರಕರಣವೂ ದಾಖಲಾಗಿದೆ.
ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ನಮ್ಮ ಪೊಲೀಸರನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ ಎಂದು ಮೊರಾದಾಬಾದ್ ಪೊಲೀಸ್ ಅಧಿಕಾರಿ ಸುಲಭ್ ಮಾಥುರ್ ಹೇಳಿದ್ದಾರೆ.
ಗಾಯಗೊಂಡಿರುವ ಐವರು ಪೊಲೀಸರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಮಾಥುರ್ ತಿಳಿಸಿದ್ದಾರೆ.
ಘಟನೆ ಕುರಿತು ಸುದ್ದಿಸಂಸ್ಥೆ ಎಎನ್‌ಐಗೆ ಪ್ರತಿಕ್ರಿಯಿಸಿರುವ ಉತ್ತರಖಂಡ ಪೊಲೀಸ್ ಆಯುಕ್ತ ನಿಲೇಶ್ ಆನಂದ್, "ಪ್ರಕರಣವನ್ನು ತನಿಖೆ ಮಾಡುತ್ತಿದ್ದೇವೆ. ಕಾರ್ಯಾಚರಣೆ ಬಗ್ಗೆ ಉತ್ತರ ಪ್ರದೇಶ ಪೊಲೀಸರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು. ಈ ಪ್ರದೇಶದ ಬಗ್ಗೆ ನಮಗೆ ಹೆಚ್ಚು ತಿಳಿದಿರುವುದರಿಂದ ಯುಪಿ ಪೊಲೀಸರಿಗೆ ಸಹಾಯ ಮಾಡುತ್ತಿದ್ದೆವು. ಗಾಯಗೊಂಡ ಯುಪಿ ಪೊಲೀಸ್ ಅಧಿಕಾರಿಗಳು ನಮಗೆ ಮಾಹಿತಿ ನೀಡದೆ ಮೊರಾದಾಬಾದ್ ಆಸ್ಪತ್ರೆಗೆ ತೆರಳಿದ್ದಾರೆ" ಎಂದು ಹೇಳಿದ್ದಾರೆ.
"ಅಕ್ರಮ ಗಣಿಗಾರಿಕೆ ಆರೋಪಿ ಜಾಫರ್‌ನನ್ನು ಬಂಧಿಸಲು ಮೊರಾದಾಬಾದ್ ಪೊಲೀಸರು ಇಲ್ಲಿಗೆ ಬಂದಿದ್ದರು. ಆ ವೇಳೆ, ಬಿಜೆಪಿಯ ಜಸ್ಪುರ್ ಬ್ಲಾಕ್ ಮುಖ್ಯಸ್ಥ ಗುರ್ತಾಜ್ ಭುಲ್ಲರ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸರು ಹಾಗೂ ಆರೋಪಿಗಳ ನಡುವೆ ಗುಂಡಿನ ಚಕಮಕಿ ನಡೆದ ಕಾರಣ ಭುಲ್ಲರ್ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಐವರು ಯುಪಿ ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ" ಎಂದು ನಿಲೇಶ್ ಆನಂದ್ ಹೇಳಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಉತ್ತರಖಂಡದ ತನಿಖಾಧಿಕಾರಿಗಳು ವಿಧಿವಿಜ್ಞಾನ ಪರೀಕ್ಷೆ ನಡೆಸುತ್ತಿದ್ದಾರೆ.