Gold Price: 300 ರೂಪಾಯಿ ಆಭರಣ ಬರೋಬ್ಬರಿ 6 ಕೋಟಿಗೆ ಮಾರಾಟ
ಜೈಪುರ, ಜೂನ್ 12: ಚಿನ್ನದ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಚಿನ್ನ ಖರೀದಿಸಬೇಕು ಎಂದು ಕೊಂಡವರು ಒಂದು ಕ್ಷಣ ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಹಿಂದಿನ ಎಲ್ಲಾ ವರ್ಷಗಳಿಗೂ ಹೋಲಿಸಿದರೆ ಈ ಬಾರಿ ಚಿನ್ನದ ದರ ಭರ್ಜರಿ ಏರಿಕೆಯಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ನಕಲಿ ಚಿನ್ನಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ. ಇಂತಹದ್ದೇ ಒಂದು ಘಟನೆ ಬೆಳಕಿಗೆ ಬಂದಿದ್ದು, 300 ರೂಪಾಯಿ ಬೆಲೆಯ ಆಭರಣ 6 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ.

ರಾಜಸ್ಥಾನದ ಜೈಪುರಕ್ಕೆ ಪ್ರವಾಸಕ್ಕೆ ಬಂದಿದ್ದ ವಿದೇಶಿ ಮಹಿಳೆಯೊಬ್ಬರಿಗೆ ಸ್ಥಳೀಯ ವ್ಯಾಪಾರಿ 300 ರೂಪಾಯಿ ಬೆಲೆಬಾಳುವ ನಕಲಿ ಆಭರಣವನ್ನು 6 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾನೆ.
ಅಮೆರಿಕದ ಪ್ರಜೆ ಚೆರಿಷ್ ಎನ್ನುವವರು ಕೆಲವು ತಿಂಗಳ ಹಿಂದೆ ಜೈಪುರದ ಜೋಹಿ ಬಜಾರ್‌ಗೆ ಭೇಟಿ ನೀಡಿದ್ದರು. ಅಲ್ಲಿ ಭಾರತದ ಆಭರಣಗಳನ್ನು ಅವುಗಳ ಶೈಲಿಗಳನ್ನು ನೋಡಿ ಮತಸೋತ ಚೆರಿಷ್, ಜೋಹಿ ಬಜಾರ್‌ನ ಅಂಗಡಿಯೊಂದರಲ್ಲಿ ಚಿನ್ನದ ಆಭರಣ ಖರೀದಿಸಲು ಮುಂದಾಗಿದ್ದರು. ಅಂಗಡಿ ಮಾಲೀಕ ರಾಜೇಂದ್ರ ಸೋನಿ, ಆತನ ಮಗ ಗೌರವ್ ಸೇರಿ ಗೋಲ್ಡ್ ಪಾಲಿಷ್ ಮಾಡಿದ ಬೆಳ್ಳಿ ಆಭರಣವನ್ನೇ ಚಿನ್ನದ್ದೆಂದು ಮಹಿಳೆಗೆ ನಂಬಿಸಿದ್ದರು.
ವ್ಯಾಪಾರಿಗಳ ಮಾತು ನಂಬಿದ ಚೆರಿಷ್ ಆಭರಣಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ರಾಜೇಂದ್ರ ಸೋನಿ ಹಾಗೂ ಮಗ ಗೌರವ್ ಚಿನ್ನ ಒಡವೆ ಎಂದು ನಂದ ಕಿಶೋರ್ ಎಂಬಾತನಿಂದ ಸರ್ಟಿಫಿಕೇಟ್ ಮಾಡಿಸಿ ಚೆರಿಷ್‌ಗೆ ತೋರಿಸಿದ್ದಾರೆ. ಬಳಿಕ ನಂಬಿಕೆಗಿಟ್ಟಿಸಿಕೊಂಡು 300 ರೂಪಾಯಿ ಬೆಲೆಯ ಆಭರಣ 6 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ.
ಭಾರತದ ಜೈಪುರ ತಂದ ಆಭರಣವನ್ನು ಏಪ್ರಿಲ್‌ನಲ್ಲಿ ಅಲ್ಲಿನ ಪ್ರದರ್ಶನವೊಂದರಲ್ಲಿ ಚೆರಿಷ್ ಪ್ರದರ್ಶಿಸಿದ್ದರು. ಆಗ ಅದು ನಕಲಿ ಆಭರಣ ಎನ್ನುವುದು ತಿಳಿದುಬಂದಿದೆ. ಇದರಿಂದ ಆತಂಕ್ಕೊಳಗಾದ ಮಹಿಳೆ ಪುನಃ ಜೈಪುರಕ್ಕೆ ಬಂದು ಅಂಗಡಿಯವರನ್ನು ಸಂಪರ್ಕಿಸಿ ವಿಚಾರ ತಿಳಿಸಿದರು, ತಾವು ಕೊಟ್ಟಿದ್ದು ಅಸಲಿ ಚಿನ್ನದ ಆಭರಣ ಎಂದು ಅಂಗಡಿ ಮಾಲೀಕರು ವಾದಿಸಿದ್ದಾರೆ.
ಕೊನೆಗೆ ತಾವು ಮೋಸ ಹೋಗಿದ್ದೇನೆ ಎಂದು ಅರಿತ ವಿದೇಶಿ ಮಹಿಳೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದರು. ಆದರೆ ಅಂಗಡಿ ಮಾಲೀಕರು ಆಕೆ ವಿರುದ್ಧವೇ ಪ್ರತಿದೂರು ದಾಖಲಿಸಿದರು. ಸರಿಯಾದ ರೀತಿಯಲ್ಲಿ ವಿಚಾರಣೆ ನಡೆಯದಿದ್ದಾಗ, ಆ ಮಹಿಳೆ ಅಮೆರಿಕದ ರಾಯಭಾರ ಕಚೇರಿಯ ಮೊರೆ ಹೋದರು. ರಾಯಭಾರ ಕಚೇರಿಯ ಮಧ್ಯಪ್ರವೇಶದ ಬಳಿಕ ಪೊಲೀಸರು ವಿಚಾರಣೆ ಚುರುಕುಗೊಳಿಸಿದ್ದಾರೆ.
ತನಿಖೆಯಲ್ಲಿ ನಕಲಿ ಚಿನ್ನದ ಗುಟ್ಟು ಬಹಿರಂಗವಾಗಿದ್ದು, ಸದ್ಯ ಅಂಗಡಿ ಮಾಲೀಕ ರಾಜೇಂದ್ರ ಸೋನಿ, ಆತನ ಮಗ ಗೌರವ್ ನಾಪತ್ತೆಯಾಗಿದ್ದಾರೆ. ಆದರೆ ಸರ್ಟಿಫಿಕೇಟ್ ಮಾಡಿಸಿಕೊಟ್ಟ ನಂದ ಕಿಶೋರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದ್ದು, ನಾಪತ್ತೆಯಾದವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.












Click it and Unblock the Notifications