4 ಬಾರಿ UPSC ಪರೀಕ್ಷೆಯಲ್ಲಿ ಫೇಲ್‌: ಕೇವಲ 464 ರೂ.ಗೆ ಪುಸ್ತಕಗಳನ್ನ ಮಾರಿದ ಆಕಾಂಕ್ಷಿಯ ಕಣ್ಣೀರಿನ ಕಥೆ

ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಎಂದರೆ ಕೇವಲ ಒಂದು ದಿನ ಕುಳಿತು ಕಥೆ, ಕಾದಂಬರಿ ಓದಿದ ಹಾಗಲ್ಲ, ಬದಲಿಗೆ ಅದೊಂದು ಸುದೀರ್ಘ ತಪಸ್ಸು. ಎಷ್ಟೋ ಯುವಕ-ಯುವತಿಯರು ತಮ್ಮ ಯೌವನದ ಅಮೂಲ್ಯ ಕ್ಷಣಗಳನ್ನಾ ಈ ಪರೀಕ್ಷೆಗಾಗಿ ಮುಡಿಪಾಗಿಡುತ್ತಾರೆ.

ಆದರೆ ಎಲ್ಲರಿಗೂ ಯಶಸ್ಸು ಒಲಿಯುವುದಿಲ್ಲ. ಸತತ 4 ಬಾರಿ ಪರೀಕ್ಷೆ ಬರೆದು ವಿಫಲರಾದ ಯುಪಿಎಸ್‌ಸಿ ಆಕಾಂಕ್ಷಿಯೊಬ್ಬರು, ಹತಾಶೆಯಿಂದ ತಮ್ಮ ಪುಸ್ತಕಗಳು ಹಾಗೂ ನೋಟ್ಸ್‌ಗಳನ್ನ ಕೇವಲ 464 ರೂಪಾಯಿಗೆ ಗುಜರಿಗೆ ಹಾಕಿದ ಮನಕಲುಕುವ ಘಟನೆ ಇದೀಗ ರೆಡ್ಡಿಟ್‌ನಲ್ಲಿ ಭಾರಿ ವೈರಲ್ ಆಗಿದೆ.

UPSC Aspirant

4 ವರ್ಷದ ಕಠಿಣ ಯುಪಿಎಸ್‌ಸಿ ಪರೀಕ್ಷೆ ತಯಾರಿ

ರೆಡ್ಡಿಟ್‌ನಲ್ಲಿ "ನನ್ನ ಎಲ್ಲಾ ಯುಪಿಎಸ್‌ಸಿ ಪುಸ್ತಕಗಳು ಮತ್ತು ಮಾಕ್ ಟೆಸ್ಟ್‌ಗಳನ್ನ ಗುಜರಿಯವನಿಗೆ ಮಾರಿದೆ, ನನ್ನ ಅನುಭವ ಇಲ್ಲಿದೆ" ಎಂಬ ಶೀರ್ಷಿಕೆಯಡಿ ಈ ಆಕಾಂಕ್ಷಿ ತಮ್ಮ ನೋವು ತೋಡಿಕೊಂಡಿದ್ದಾರೆ. 2023, 2024 ಮತ್ತು 2025ರಲ್ಲಿ ಸತತ ಮೂರು ಬಾರಿ ಮುಖ್ಯ ಪರೀಕ್ಷೆ (Mains) ಬರೆದಿದ್ದ ಇವರು, 2026ರಲ್ಲಿ ಮೊದಲ ಬಾರಿಗೆ ಪ್ರಿಲಿಮ್ಸ್ (Prelims) ಪರೀಕ್ಷೆಯಲ್ಲೇ ಫೇಲ್ ಆಗಿದ್ದಾರೆ. "ಇಲ್ಲಿಗೆ ಎಲ್ಲವೂ ಮುಗಿಯಿತು" ಎಂದು ನಿರ್ಧರಿಸಿದ ಅವರು ತಮ್ಮ ಆರಂಭಿಕ ಎನ್‌ಸಿಇಆರ್‌ಟಿ , ಲಕ್ಷ್ಮಿಕಾಂತ್ ಪುಸ್ತಕಗಳು, ಬೆಳಗಿನ ಜಾವ 4 ಗಂಟೆಗೆ ಎದ್ದು ಬರೆದ ನೋಟ್ಸ್‌ಗಳು ಹಾಗೂ ಮಾಕ್ ಟೆಸ್ಟ್ ಪೇಪರ್‌ಗಳನ್ನು ಗುಜರಿಗೆ ಹಾಕಿದ್ದಾರೆ.

ಪುಸ್ತಕಗಳನ್ನ ತಕ್ಕಡಿಯಲ್ಲಿ ತೂಕ ಮಾಡುತ್ತಿದ್ದಾಗ ಆದ ಅನುಭವವನ್ನ ಅವರು ವಿವರಿಸಿದ್ದು ಹೀಗೆ ನೋಡಿ: "ಪ್ರತಿಯೊಂದು ಪುಸ್ತಕವೂ ಆ ರಾಶಿಯ ಮೇಲೆ ಬಿದ್ದಾಗ ನನ್ನೊಳಗೇನೋ ಸತ್ತಂತಾಯಿತು. ಅದು ಕೇವಲ ಕಾಗದಗಳಲ್ಲ, ನಾನು ಬರೆದ ಪ್ರತಿಯೊಂದು ಉತ್ತರ, ತಿದ್ದಿದ ಪುಟಗಳು ಹಾಗೂ ನನ್ನ ವರ್ಷಗಳ ಶ್ರಮ. ಆದರೆ ಅದೆಲ್ಲವೂ ಇಂದು ಕೆಜಿ ಲೆಕ್ಕದಲ್ಲಿ ಮಾರಾಟವಾಯಿತು."

ಐಎಎಸ್ ತಯಾರಿಗಾಗಿ ಕೈಬಿಟ್ಟ ದೊಡ್ಡ ಉದ್ಯೋಗ

ಐಎಎಸ್ ಅಧಿಕಾರಿಯಾಗಬೇಕು ಎಂಬ ದೊಡ್ಡ ಕನಸಿನೊಂದಿಗೆ ಐಎಎಸ್ ತಯಾರಿ ಆರಂಭಿಸಿದ್ದ ಈ ಆಕಾಂಕ್ಷಿ, 2022ರಲ್ಲಿ ಕೈಗೆ ಬಂದಿದ್ದ ಅತ್ಯುತ್ತಮ ಸಂಬಳದ ಉದ್ಯೋಗವನ್ನ ಸಹ ತಿರಸ್ಕರಿಸಿದ್ದರು. "ನಾನು ಆ ಕೆಲಸಕ್ಕೆ ಸೇರದಿರುವುದನ್ನ ನೋಡಿ ಇಂದು ಜನರು ನನ್ನನ್ನು ಅಣಕಿಸುತ್ತಾರೆ ಅಥವಾ ಅಯ್ಯೋ ಪಾಪ ಎನ್ನುತ್ತಾರೆ. ಆದರೆ ಅಂದು ಆ ಆಫರ್ ಲೆಟರ್ ಸಿಕ್ಕಾಗ ನನಗಾದ ಸಂತೋಷವನ್ನು ಈಗಲೂ ಮರೆಯಲಾರೆ" ಎಂದು ಅವರು ಬರೆದುಕೊಂಡಿದ್ದಾರೆ.

ಕೇವಲ ಉದ್ಯೋಗ ಮಾತ್ರವಲ್ಲ, ಈ ಪರೀಕ್ಷೆಯ ಸಿದ್ಧತೆಯ ನಡುವೆ ಅವರು ತಮ್ಮ 4 ವರ್ಷಗಳ ಸುಂದರ ಪ್ರೀತಿಯನ್ನೂ ಸಹ ಕಳೆದುಕೊಂಡಿದ್ದಾರೆ. ಪ್ರತೀ ಬಾರಿಯೂ ಮತ್ತೊಮ್ಮೆ ಪ್ರಯತ್ನಿಸೋಣ ಎಂಬ ಹಠವೇ ಅವರನ್ನು ಇಷ್ಟು ದಿನ ಮುನ್ನಡೆಸಿತ್ತು.

464 ರೂ.ಗೆ ಗುಜರಿಗೆ ಪುಸ್ತಕ ಮಾರಾಟ

ಅವರ ವರ್ಷಗಳ ಶ್ರಮವಿದ್ದ ಆ ಪುಸ್ತಕಗಳು ಗುಜರಿಯಲ್ಲಿ ಕೇವಲ 464 ರೂಪಾಯಿಗೆ ಮಾರಾಟವಾದವು. ಪಕ್ಕದಲ್ಲಿದ್ದವರೊಬ್ಬರು 'ನೀವು ಕನಿಷ್ಠ 600 ರೂಪಾಯಿಯಾದರೂ ಕೇಳಬೇಕಿತ್ತು' ಎಂದಾಗ, ಅವರು ಮುಗುಳ್ನಕ್ಕು "ಈ ಪುಸ್ತಕಗಳಿಂದ ನನಗೆ ಸಿಗಬೇಕಾದ್ದು ಸಿಗಲಿಲ್ಲ. ಇನ್ನು 100-200 ರೂಪಾಯಿ ಹೆಚ್ಚು ಸಿಕ್ಕರೆ ಏನು ವ್ಯತ್ಯಾಸವಾಗುತ್ತದೆ?" ಎಂದು ಉತ್ತರಿಸಿದ್ದಾರೆ.

ಬಳಿಕ ಆ 464 ರೂಪಾಯಿಯನ್ನ ಅವರು ದೇವಸ್ಥಾನದ ಹುಂಡಿಗೆ ಹಾಕಿದ್ದಾರೆ. ಮುಂದಿನ ಬಾರಿ ಪರೀಕ್ಷೆ ಪಾಸ್ ಮಾಡಿಸು ಎಂದು ಅವರು ದೇವರಲ್ಲಿ ಬೇಡಿಕೊಳ್ಳಲಿಲ್ಲ, ಏಕೆಂದರೆ ಅವರು ಪರೀಕ್ಷೆ ಬರೆಯುವುದನ್ನೇ ಸಂಪೂರ್ಣವಾಗಿ ಬಿಟ್ಟಿದ್ದರು. "ನಾನು ಆ ಹಣವನ್ನ ಹುಂಡಿಗೆ ಹಾಕಿದ್ದು ಒಂದೇ ಕಾರಣಕ್ಕೆ, 'ನೀನು ನನಗೆ ತೋರಿದ ಕರುಣೆಗಿಂತ, ನನ್ನ ಹೃದಯ ದೊಡ್ಡದು' ಎಂದು ದೇವರಿಗೆ ಹೇಳಲು" ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.

ರೆಡ್ಡಿಟ್‌ನಲ್ಲಿ ನೆಟ್ಟಿಗರ ಪ್ರತಿಕ್ರಿಯೆ

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದ್ದು, ನೂರಾರು ಯುಪಿಎಸ್‌ಸಿ ಆಕಾಂಕ್ಷಿಗಳು ತಮ್ಮ ಅನುಭವಗಳನ್ನ ಹಂಚಿಕೊಂಡಿದ್ದಾರೆ. "6 ಬಾರಿ ಮುಖ್ಯ ಪರೀಕ್ಷೆ, 1 ಬಾರಿ ಸಂದರ್ಶನಕ್ಕೆ ಹೋದರೂ ಆಯ್ಕೆಯಾಗಲಿಲ್ಲ. ಈ ನೋವು ಯುಪಿಎಸ್‌ಸಿ ಓದಿದವರಿಗೆ ಮಾತ್ರ ಅರ್ಥವಾಗುತ್ತದೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+