UPI ಶುಲ್ಕದ ನೆಪ, ಗ್ರಾಹಕರಿಗೆ ಬಿತ್ತು ಕನ್ನ: ಅಂಗಡಿಗಳ ಮುಂದೆ ರಾರಾಜಿಸುತ್ತಿವೆ 'ಕ್ಯಾಶ್ ಓನ್ಲಿ' ಬೋರ್ಡ್

ಕೇಂದ್ರ ಸರ್ಕಾರವು ಯುಪಿಐ ವಹಿವಾಟುಗಳ ಮೇಲೆ ಕೆಲವು ಶುಲ್ಕಗಳನ್ನ ಹಾಕಲು ಮುಂದಾಗಿರುವ ಬೆನ್ನಲ್ಲೇ, ಇದನ್ನೇ ಬಂಡವಾಳವಾಗಿಸಿಕೊಂಡು ಕೆಲವು ವ್ಯಾಪಾರಿಗಳು ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಲು ಶುರುಮಾಡಿದ್ದಾರೆ. ಯುಪಿಐ ಪಾವತಿಗಳ ಮೇಲಿನ ಎಂಡಿಆರ್ (Merchant Discount Rate) ಶುಲ್ಕ ಕಡಿತದ ನೆಪವೊಡ್ಡಿ, ಗ್ರಾಹಕರಿಗೆ ಹೊರೆ ಹೇರುತ್ತಿರುವ ಪ್ರಕರಣಗಳು ದೇಶದಾದ್ಯಂತ, ಅದರಲ್ಲೂ ವಿಶೇಷವಾಗಿ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ವರದಿಯಾಗುತ್ತಿವೆ.

ಅಂಗಡಿಗಳ ಮುಂದೆ ಯುಪಿಐ ಪಾವತಿ ಸ್ವೀಕರಿಸುವುದಿಲ್ಲ, ನಗದು ವಹಿವಾಟು ಮಾತ್ರ ಎಂಬ ಫಲಕಗಳು ರಾರಾಜಿಸುತ್ತಿರುವುದು ಡಿಜಿಟಲ್ ಪಾವತಿ ಬಳಕೆದಾರರಲ್ಲಿ ಆತಂಕ ಮೂಡಿಸಿದೆ.

UPI MDR Rule Sparks Outrage Merchants Exploit Customers Over Fake Fees Switch To Cash Only Boards

ಏನಿದು ಹೊಸ ಎಂಡಿಆರ್ ನಿಯಮ, ಇದು ಗ್ರಾಹಕರಿಗೆ ಹೊರೆಯೇ?

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಹೊರಡಿಸಿರುವ ಹೊಸ ನಿಯಮಾವಳಿಗಳ ಪ್ರಕಾರ, ಅಕ್ಟೋಬರ್ 15, 2026ರಿಂದ ಜಾರಿಗೆ ಬರುವಂತೆ 2,000 ರೂಪಾಯಿ ಮೇಲ್ಪಟ್ಟ ಪರ್ಸನ್-ಟು-ಮರ್ಚೆಂಟ್ ಯುಪಿಐ ವಾಣಿಜ್ಯ ವಹಿವಾಟುಗಳಿಗೆ ಶೇ. 0.4 ರಷ್ಟು ಎಂಡಿಆರ್ ಶುಲ್ಕವನ್ನು ವರ್ತಕರು ಪಾವತಿಸಬೇಕಾಗುತ್ತದೆ.

ಅಂದರೆ, ಗ್ರಾಹಕರು 2000 ರೂಪಾಯಿ ಮೇಲ್ಪಟ್ಟ ಬಿಲ್ ಪಾವತಿಸಿದರೆ, ವರ್ತಕರ ಖಾತೆಯಿಂದ ಮಾತ್ರ ಶುಲ್ಕ ಕಡಿತವಾಗುತ್ತದೆ. ಇದರಲ್ಲಿ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿರುವುದಿಲ್ಲ. ಅಲ್ಲದೆ, 2000 ರೂಪಾಯಿ ಒಳಗಿನ ವಹಿವಾಟುಗಳಿಗೆ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಮಾಡುವ ಹಣ ವರ್ಗಾವಣೆಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.

ಗಾಜಿಯಾಬಾದ್ ವ್ಯಾಪಾರಿ ಯಿಂದ ಸುಲಿಗೆ: ಪಾನಿಪುರಿಗೆ 1 ರೂ. ಹೆಚ್ಚು!

2000 ರೂಪಾಯಿಗಿಂತ ಕಡಿಮೆ ಮೊತ್ತದ ಯುಪಿಐ ಪಾವತಿಯಾಗಿದ್ದರೆ ವರ್ತಕರಿಗೆ ಯಾವುದೇ ಹೊರೆ ಅಥವಾ ಶುಲ್ಕ ಇರುವುದಿಲ್ಲ ಎಂಬುದು ಸ್ಪಷ್ಟ. ಆದರೂ, ಉತ್ತರ ಪ್ರದೇಶದ ಗಾಜಿಯಾಬಾದ್‌ನ ಪಾನಿಪುರಿ ವ್ಯಾಪಾರಿಯೊಬ್ಬ ಇದರ ಲಾಭ ಪಡೆಯಲು ಯತ್ನಿಸಿದ್ದಾನೆ.

ಈ ವ್ಯಾಪಾರಿ ತನ್ನ ಗಾಡಿಯ ಮುಂದೆ "ಒಂದು ಪ್ಲೇಟ್ ಪಾನಿಪುರಿಗೆ ನಗದು ನೀಡಿದರೆ 50 ರೂ., ಯುಪಿಐ ಪಾವತಿಯಾದರೆ 51 ರೂ." ಎಂಬ ಬೋರ್ಡ್ ನೇತುಹಾಕಿದ್ದಾನೆ. 50 ರೂಪಾಯಿಯ ಪಾವತಿಗೆ ಯಾವುದೇ ಯುಪಿಐ ಶುಲ್ಕ ಕಡಿತವಾಗುವುದಿಲ್ಲ. ಹೀಗಿರುವಾಗ, ಗ್ರಾಹಕರು ಯುಪಿಐ ಮೂಲಕ ಪಾವತಿ ಮಾಡಿದರೆ, ವ್ಯಾಪಾರಿಗೆ ಆ 1 ರೂಪಾಯಿ ಸಂಪೂರ್ಣ ಲಾಭವಾಗುತ್ತದೆ. ದಿನಕ್ಕೆ 40 ಜನ ಯುಪಿಐ ಮೂಲಕ ಹಣ ನೀಡಿದರೆ, ವ್ಯಾಪಾರಿಗೆ ಕುಳಿತಲ್ಲಿಯೇ 40 ರೂ. ಹೆಚ್ಚು ದುಡ್ಡು ಸಿಗುತ್ತದೆ.

ನಗದು ವಹಿವಾಟು ಮಾತ್ರ ಬೋರ್ಡ್‌ಗಳ ಹಾವಳಿ

ಯುಪಿಐ ಪಾವತಿ ಶುಲ್ಕದ ಬಗ್ಗೆ ಜನರಲ್ಲಿರುವ ಗೊಂದಲವನ್ನ ಬಳಸಿಕೊಂಡು ವರ್ತಕರು ಗ್ರಾಹಕರನ್ನ ದೋಚಲು ಮುಂದಾಗಿದ್ದಾರೆ. 2000 ರೂಪಾಯಿ ಮೇಲ್ಪಟ್ಟ ವಹಿವಾಟಿಗೆ ಶೇ. 0.4 ಅಂದರೆ ಉದಾಹರಣೆಗೆ 2000 ರೂಪಾಯಿಗೆ 8 ರೂಪಾಯಿಗೆ ಶುಲ್ಕ ಕಟ್ಟಲು ಹಿಂದೇಟು ಹಾಕುತ್ತಿರುವ ದೊಡ್ಡ ವರ್ತಕರು ಕೂಡ ತಮ್ಮ ಅಂಗಡಿಗಳ ಮುಂದೆ "ಕ್ಯಾಶ್ ಓನ್ಲಿ" ಫಲಕ ಹಾಕುತ್ತಿದ್ದಾರೆ. ಕೆಲವರು ತಾವು ಕಟ್ಟಬೇಕಾದ ಶುಲ್ಕದ ಹೊರೆಯನ್ನು ಪರೋಕ್ಷವಾಗಿ ಗ್ರಾಹಕರ ಮೇಲೆಯೇ ಹೇರುತ್ತಿದ್ದಾರೆ.

ಗ್ರಾಹಕರಿಗೆ ವಂಚನೆ: ಸಾರ್ವಜನಿಕರ ಆಕ್ರೋಶ

ಡಿಜಿಟಲ್ ಇಂಡಿಯಾ ಕಲ್ಪನೆಯಡಿ ಜನರು ಯುಪಿಐ ಪಾವತಿಗೆ ಅತಿ ಹೆಚ್ಚು ಒಗ್ಗಿಕೊಂಡಿದ್ದಾರೆ. ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಸ್ಪಷ್ಟಪಡಿಸಿರುವಂತೆ ಯುಪಿಐ ವ್ಯವಸ್ಥೆಯನ್ನು ಹೆಚ್ಚು ಸಮರ್ಥವಾಗಿ ನಿರ್ವಹಿಸಲು ಮತ್ತು ಸುಸ್ಥಿರಗೊಳಿಸಲು ಈ ಎಂಡಿಆರ್ ಶುಲ್ಕವನ್ನು ದೊಡ್ಡ ಮೊತ್ತದ ವಹಿವಾಟುಗಳ ಮೇಲೆ ಮಾತ್ರ ಅಳವಡಿಸಲಾಗಿದೆ.

ಶೇ.95ರಷ್ಟು ದೈನಂದಿನ ವಹಿವಾಟುಗಳು 2,000 ರೂ. ಒಳಗೇ ಇರುವುದರಿಂದ ಸಣ್ಣ ವ್ಯಾಪಾರಿಗಳಿಗೆ ಅಥವಾ ಸಾಮಾನ್ಯ ಜನರಿಗೆ ಈ ನಿಯಮದಿಂದ ಕಿಂಚಿತ್ತೂ ತೊಂದರೆಯಾಗುವುದಿಲ್ಲ. ಆದರೂ ಎಂಡಿಆರ್ ಶುಲ್ಕ ಕಡಿತದ ಸುಳ್ಳು ನೆಪ ಹೇಳಿ ಸಣ್ಣ ವ್ಯಾಪಾರಿಗಳು ಸಹ ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದು ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರಿ ನಿಯಮಗಳ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇಲ್ಲದಿರುವುದೇ ವರ್ತಕರ ಈ ಲೂಟಿಗೆ ಕಾರಣವಾಗಿದ್ದು, ಅಧಿಕಾರಿಗಳು ಇಂತಹ ವಂಚಕ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+