ಸರ್ಕಾರಿ ನೌಕರರ ನಿವೃತ್ತಿ ವಯಸ್ಸು ಏರಿಕೆ?
ನವದೆಹಲಿ, ಫೆ.26: ಮುಂಬರುವ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗುವುದಕ್ಕೂ ಮೊದಲೇ ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಸಿಹಿ ಸುದ್ದಿ ನೀಡಲು ಯುಪಿಎ ಸರ್ಕಾರ ನಿರ್ಧರಿಸಿದೆ. ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿನ ಮಿತಿಯನ್ನು 2 ವರ್ಷ ಹಿಗ್ಗಿಸಲು ಸರ್ಕಾರ ನಿರ್ಧರಿಸಿ ಆದೇಶ ಹೊರಡಿಸಲು ಮುಂದಾಗಿರುವ ಸುದ್ದಿ ಸಿಕ್ಕಿದೆ.
ಮೂಲಗಳ ಪ್ರಕಾರ ಕೇಂದ್ರ ಚುನಾವಣಾ ಆಯೋಗ ಮುಂಬರುವ ಲೋಕಸಭೆ ಚುನಾವಣೆ ದಿನಾಂಕವನ್ನು ಮಾರ್ಚ್ 5 ರಂದು ಘೋಷಿಸುವ ಸಾಧ್ಯತೆಯಿದೆ. ಇದಕ್ಕೂ ಮುನ್ನ ಮಾರ್ಚ್ 1 ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ಮಿತಿ ವಯಸ್ಸನ್ನು 60 ರಿಂದ 62ಕ್ಕೇರಿಸಿ ಆದೇಶ ಹೊರಡಿಸಲು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುನೈಟೆಡ್ ಪ್ರೊಗೇಸಿವ್ ಅಲೈಯನ್ಸ್(ಯುಪಿಎ) -2 ಸರ್ಕಾರ ಸಿದ್ಧವಾಗಿದೆ ಎಂದು ಬಿಸಿನೆಸ್ ಸ್ಟಾಂಡರ್ಡ್ ಗೆ ಸಿಕ್ಕಿರುವ ಮಾಹಿತಿ ಹೇಳುತ್ತಿದೆ.
ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೊಳ್ಳುವ ಮುನ್ನ ಈ ಮಹತ್ವದ ಆದೇಶ ಹೊರಡಿಸಲು ಯುಪಿಎ ಯೋಜಿಸಿದೆ. ಚುನಾವಣೆ ದಿನಾಂಕದ ಬಗ್ಗೆ ಸದ್ಯದಲ್ಲೇ ಸಚಿವ ಸಂಪುಟದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ.

ಕೇಂದ್ರ ಸರ್ಕಾರಿ ನೌಕರರ ವಯಸ್ಸಿನ ಮಿತಿಯನ್ನು ಇನ್ನೊಂದು ವಾರದಲ್ಲಿ ಏರಿಕೆ ಮಾಡಲಾಗುವುದು. ಇದನ್ನು 7ನೇ ವೇತನ ಆಯೋಗದ ನಿಯಮಾವಳಿಯ ಭಾಗವಾಗಿ ಪ್ರಕಟಿಸಲಾಗುವುದು ಎಂಬ ಮಾಹಿತಿ ಸಿಕ್ಕಿದೆ. 2017ರಲ್ಲಿ ಈ ಬಗ್ಗೆ ವರದಿ ಹೊರ ಬೀಳುವ ಸಾಧ್ಯತೆಯಿದೆ. ಇದಕ್ಕೂ ಮುನ್ನ ಮಧ್ಯಂತರವಾಗಿ ವಯಸ್ಸಿನ ಮಿತಿ ಏರಿಕೆ ಮಾಡಿ ಸರ್ಕಾರಿ ನೌಕರರನ್ನು ಸಂತುಷ್ಟಗೊಳಿಸುವ ಯೋಜನೆ ಯುಪಿಎಗಿದೆ.












Click it and Unblock the Notifications