5 ಕೆಜಿ ಆಲೂಗಡ್ಡೆ ಲಂಚ ಕೇಳಿದ ಪೊಲೀಸ್, ಮುಂದೆ ಆಗಿದ್ದೇನು?
ಲಕ್ನೋ, ಆಗಸ್ಟ್ 11: ಕೆಲವು ಪೊಲೀಸರು ಪ್ರಕರಣಗಳನ್ನು ಮುಚ್ಚಿ ಹಾಕಲು ಲಂಚ ಕೇಳುತ್ತಾರೆ. ಇಂತಹ ಹಲವು ಘಟನೆಗಳು ಬೆಳಕಿಗೆ ಬಂದಿವೆ. ಈಗ ಇಂತಹ ಪ್ರಕರಣವೊಂದು ದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರೈತನೊಬ್ಬನಿಂದ ಪೊಲೀಸ್ ಅಧಿಕಾರಿಯೊಬ್ಬರಿ 5 ಕೆಜಿ ಆಲೂಗಡ್ಡೆ ಲಂಚ ಕೇಳಿ ಸಿಕ್ಕಿಹಾಕಿಕೊಂಡಿದ್ದಾರೆ.
ಅಚ್ಚರಿಯಾದರೂ ಸಹ ಇದು ಸತ್ಯ. ಉತ್ತರ ಪ್ರದೇಶದಲ್ಲಿ ನಡೆದ ಘಟನೆ ಇದಾಗಿದೆ. ಈ ಕುರಿತು ಜಿಲ್ಲಾ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಸಹ ಹಾಕಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಪೊಲೀಸ್ ಅಧಿಕಾರಿ ರೈತನಿಂದ 5 ಕೆಜಿ ಆಲೂಗಡ್ಡೆ ಲಂಚ ಕೇಳಿದ್ದು ಸಾಬೀತಾಗಿದೆ ಎಂದು ಹೇಳಿದ್ದಾರೆ.

ಚಪ್ಪುನ್-ಬುಹಲ್ವಾಲ್‌ಪುರ್ ಪೊಲೀಸ್ ಔಟ್‌ಪೋಸ್ಟ್‌ನ ಸಬ್ ಇನ್ಸ್‌ಪೆಕ್ಟರ್ ರಾಮ್ ಕ್ರಿಪಾಲ್ 5 ಕೆಜಿ ಆಲೂಗಡ್ಡೆ ಲಂಚ ಕೇಳಿದ ಪೊಲೀಸ್ ಅಧಿಕಾರಿ. ಈ ಅಧಿಕಾರಿಯನ್ನು ಈಗ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಪ್ರಕರಣದ ಕುರಿತು ಪೊಲೀಸ್ ಇಲಾಖೆ ಆಂತರಿಕ ತನಿಖೆಗೆ ಆದೇಶ ನೀಡಿದೆ.
ಏನಿದು ಲಂಚ ಪ್ರಕರಣ?; ಪ್ರಕರಣದ ಮಾಹಿತಿಯಂತೆ ರೈತನ ವಿರುದ್ಧದ ಪ್ರಕರಣವನ್ನು ಇತ್ಯರ್ಥಗೊಳಿಸಲು ರಾಮ್ ಕ್ರಿಪಾಲ್ 5 ಕೆಜಿ ಆಲೂಗಡ್ಡೆಯನ್ನು ಲಂಚವಾಗಿ ಕೇಳಿದ್ದಾರೆ. ಆದರೆ ರೈತ ಅಷ್ಟು ನೀಡಲು ಸಾಧ್ಯವಿಲ್ಲ, 2 ಕೆಜಿ ಆಲೂಗಡ್ಡೆಗೆ ಒಪ್ಪಿಕೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಮೊದಲು 5 ಕೆಜಿ ಆಲೂಗಡ್ಡೆ ಲಂಚವಾಗಿ ಕೇಳಿದ್ದ ರಾಮ್ ಕ್ರಿಪಾಲ್ ಅಂತಿಮವಾಗಿ 3 ಕೆಜಿ ಆಲೂಗಡ್ಡೆಗೆ ಒಪ್ಪಿಕೊಂಡಿದ್ದಾರೆ. ಈ ಕುರಿತು ರೈತನ ಜೊತೆ ಪೊಲೀಸ್ ಅಧಿಕಾರಿ ಮಾತನಾಡಿದ್ದ ದೂರವಾಣಿ ಕರೆಯ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು, ಉತ್ತರ ಪ್ರದೇಶ ಪೊಲೀಸರು ಮುಜುಗರ ಅನುಭವಿಸಿದರು.
ಅಂತಿಮವಾಗಿ ಈ ಕುರಿತು ತನಿಖೆ ನಡೆಸಲು ಪೊಲೀಸರು ಮುಂದಾದರು. ಜಿಲ್ಲಾ ಪೊಲೀಸ್ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ. ಪ್ರಾಥಮಿಕ ಮಾಹಿತಿಯಂತೆ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಸಾಬೀತಾಗಿದೆ. '5 ಕೆಜಿ ಆಲೂಗಡ್ಡೆ' ಎಂಬ ಪದವನ್ನು ಹಣ ಅಥವ ಇತರ ವಸ್ತುವಿಗಾಗಿ ಇಟ್ಟ ಬೇಡಿಕೆ ಎಂಬುದು ತಿಳಿದಿದೆ.
ಪೊಲೀಸ್ ಇನ್ಸ್‌ಪೆಕ್ಟರ್ ರಾಮ್ ಕ್ರಿಪಾಲ್ ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಅಲ್ಲದೇ ಅವರ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸರು ಹೇಳಿದ್ದಾರೆ. ಈ 5 ಕೆಜಿ ಆಲೂಗಡ್ಡೆ ಲಂಚ ಪ್ರಕರಣದ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ರೈತನ ವಿರುದ್ಧ ಯಾವ ಪ್ರಕರಣ ದಾಖಲಾಗಿತ್ತು. ಪ್ರಕರಣದ ಕುರಿತು ರೈತನ ಜೊತೆ ಪೊಲೀಸ್ ಅಧಿಕಾರಿ ಮಾತುಕತೆ ನಡೆಸಿದ್ದು ಯಾವಾಗ? ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಈ ಬಗ್ಗೆ ಇಲಾಖಾ ವಿಚಾರಣೆ ನೆಯುತ್ತಿದೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಈ 5 ಕೆಜಿ ಆಲೂಗಡ್ಡೆ ಲಂಚ ಪ್ರಕರಣ ಉತ್ತರ ಪ್ರದೇಶದ ಪೊಲೀಸರ ಮುಜುಗರಕ್ಕೆ ಕಾರಣವಾಗಿದೆ. ಮತ್ತೊಂದು ಕಡೆ ಈ ಕುರಿತು ಸ್ಥಳೀಯ, ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಸಾರವಾಗಿವೆ. ಈ '5 ಕೆಜಿ ಆಲೂಗಡ್ಡೆ' ಎಂಬ ಕೋಡ್ ವರ್ಡ್‌ನಲ್ಲಿ ಅಡಗಿರುವುದೇನು? ಎಂದು ಪೊಲೀಸರು ತನಿಖೆ ಬಳಿಕ ತಿಳಿಸಬೇಕಿದೆ.












Click it and Unblock the Notifications