ಉನ್ನಾವೋ ಪ್ರಕರಣ: ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು, ಕುಲದೀಪ್ ಸಿಂಗ್ ಸೆಂಗರ್‌ಗೆ ನೋಟಿಸ್
ನವದೆಹಲಿ: ದೇಶದಾದ್ಯಂತ ಆಕ್ರೋಶ ಹಾಗೂ ಪ್ರತಿಭಟನೆಗೆ ಕಾರಣವಾಗಿದ್ದ ಉನ್ನಾವೋ ಅತ್ಯಾಚಾರ ಪ್ರಕರಣದ ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದೆ. ಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪಿ ಹಾಗೂ ಬಿಜೆಪಿಯ ಉಚ್ಚಾಟಿತ ನಾಯಕ ಕುಲದೀಪ್ ಸಿಂಗ್ ಸೆಂಗರ್‌ಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ಸಿಬಿಐ ಮೇಲ್ಮನವಿ ಸಲ್ಲಿಸಿತ್ತು. ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ (ಡಿಸೆಂಬರ್ 29)ರಂದು ವಿಚಾರಣೆ ನಡೆಯಿತು.
ಉನ್ನಾವೋ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿಯ ಉಚ್ಚಾಟಿತ ನಾಯಕ ಕುಲದೀಪ್ ಸಿಂಗ್ ಸೆಂಗರ್‌ಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ ದೆಹಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ತಡೆಹಿಡಿದಿದೆ. ಹೈಕೋರ್ಟ್ ಆದೇಶದ ವಿರುದ್ಧ ಸಿಬಿಐ ಸಲ್ಲಿಸಿದ ಮೇಲ್ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಸೆಂಗಾರ್ ಅವರಿಗೆ ನೋಟಿಸ್ ನೀಡಿದೆ.
ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಿದ್ದು, ಹೈಕೋರ್ಟ್ ಅಮಾನತು ಆದೇಶವನ್ನು ಅಮಾನ್ಯ (ಅಮಾನತು) ಮಾಡಿದೆ.

ಈಗ ವಿಚಾರಣೆ ಯಾಕೆ
ಉನ್ನಾವೋ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಲದೀಪ್ ಸಿಂಗ್ ಸೆಂಗರ್ ಈಗಾಗಲೇ ಜೈಲು ಶಿಕ್ಷೆ ಆಗಿದೆ. ಡಿಸೆಂಬರ್ 23 ರಂದು ದೆಹಲಿ ಹೈಕೋರ್ಟ್ ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕುಲದೀಪ್ ಸಿಂಗ್ ಸೆಂಗರ್‌ನ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿತ್ತು. ಈಗಾಗಲೇ ಏಳು ವರ್ಷ ಮತ್ತು ಐದು ತಿಂಗಳು ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ ಎಂದು ಹೇಳಿತ್ತು.
ಅತ್ಯಾಚಾರ ಪ್ರಕರಣದಲ್ಲಿ ಅವರ ಅಪರಾಧ ಮತ್ತು ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವವರೆಗೆ ಸೆಂಗರ್ ಶಿಕ್ಷೆಯನ್ನು ಹೈಕೋರ್ಟ್ ಅಮಾನತುಗೊಳಿಸಿತ್ತು. ಈ ಪ್ರಕರಣದಲ್ಲಿ ಡಿಸೆಂಬರ್ 2019 ರ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಅವರು ಪ್ರಶ್ನಿಸಿದ್ದಾರೆ. ಆದಾಗ್ಯೂ, ಅವರು ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವಿನ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ ಮತ್ತು ಆ ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಗದ ಕಾರಣ ಅವರು ಜೈಲಿನಲ್ಲೇ ಇರಲಿದ್ದಾರೆ ಎಂದು ಹೇಳಲಾಗಿತ್ತು.
ಹಲವಾರು ಷರತ್ತುಗಳನ್ನು ವಿಧಿಸಿದ ಹೈಕೋರ್ಟ್, ಅಪ್ರಾಪ್ತ ವಯಸ್ಕಳಾಗಿದ್ದಾಗ ಆಕೆಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸೆಂಗರ್‌ಗೆ 15 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಮತ್ತು ಅದೇ ಮೊತ್ತದ ಮೂರು ಜಾಮೀನುಗಳನ್ನು ನೀಡಬೇಕೆಂದು ನಿರ್ದೇಶಿಸಿತು. ದೆಹಲಿಯಲ್ಲಿರುವ ಸಂತ್ರಸ್ತೆಯ ನಿವಾಸದ 5 ಕಿ.ಮೀ ವ್ಯಾಪ್ತಿಯಲ್ಲಿ ಬರಬಾರದು. ಆಕೆಯ ತಾಯಿಗೆ ಬೆದರಿಕೆ ಹಾಕಬಾರದು ಎಂದು ನಿರ್ದೇಶಿಸಿತು. ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದರೆ ಜಾಮೀನು ರದ್ದಾಗುತ್ತದೆ ಎಂದು ಹೈಕೋರ್ಟ್ ಹೇಳಿತ್ತು. ಆದರೆ ಇದೀಗ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಏನಿದು ಉನ್ನಾವೋ ಪ್ರಕರಣ ?
2017ನೇ ಸಾಲಿನಲ್ಲಿ ಉತ್ತರ ಪ್ರದೇಶದಲ್ಲಿ ಉನ್ನಾವೋ ಅತ್ಯಾಚಾರ ಪ್ರಕರಣ ನಡೆದಿತ್ತು. ಅಂದಿನ ಪ್ರಭಾವಿ ಬಿಜೆಪಿ ಶಾಸಕ (ಈಗ ಉಚ್ಚಾಟಿತ) ಕುಲದೀಪ್ ಸಿಂಗ್ ಸೆಂಗಾರ್ ಅವರು ಅಪ್ರಾಪ್ತ ಬಾಲಕಿಯ ಅಪಹರಣ ಮತ್ತು ಅತ್ಯಾಚಾರದ ಪ್ರಮುಖ ಆರೋಪಿಯಾಗಿದ್ದಾನೆ. ಸಂತ್ರಸ್ತೆಯ ಕುಟುಂಬವು ನಿರಂತರವಾಗಿ ಬೆದರಿಕೆ ಎದುರಿಸಿತ್ತು.
ಆಕೆಯ ತಂದೆ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದರು ಮತ್ತು ಸಂಬಂಧಿಕರು ಅನುಮಾನಾಸ್ಪದ ರೀತಿಯಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದರು. ಸೆಂಗಾರ್ ಎನ್ನುವ ವ್ಯಕ್ತಿಯನ್ನು 2019 ರಲ್ಲಿ ದೋಷಿ ಎಂದು ಘೋಷಿಸಲಾಯಿತು. ಆದರೆ ಸೆಂಗಾರ್‌ಗೆ ಈಚೆಗೆ ಜಾಮೀನು ಸಿಕ್ಕಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಸಿಬಿಐ ಮೇಲ್ಮನವಿ ಸಲ್ಲಿಕೆ ಮಾಡಿತ್ತು.












Click it and Unblock the Notifications