Government Employee: ಹೊಸ ಪಿಂಚಣಿ ಯೋಜನೆ, ಸರ್ಕಾರಿ ನೌಕರರಿಗೆ ಅಪ್‌ಡೇಟ್ ಮಾಹಿತಿ
ಬೆಂಗಳೂರು, ಮಾರ್ಚ್ 23: ಕೇಂದ್ರ ಸರ್ಕಾರಿ ನೌಕರರಿಗೆ ಏಪ್ರಿಲ್ 1ರಿಂದ ಹೊಸ ಪಿಂಚಣಿ ಯೋಜನೆ ಜಾರಿಗೆ ಬರಲಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ 2024ರ ಆಗಸ್ಟ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಏಕೀಕೃತ ಪಿಂಚಣಿ ಯೋಜನೆಗೆ (ಯುಪಿಎಸ್) ಅನುಮೋದನೆ ನೀಡಲಾಗಿತ್ತು. ಕೇಂದ್ರ ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆ ಅಥವ ಯುಪಿಎಸ್ ಆಯ್ಕೆ ಮಾಡಿಕೊಳ್ಳಲು ಅವಕಾಶವನ್ನು ನೀಡಲಾಗಿದೆ.
ಮಾರ್ಚ್ ತಿಂಗಳು ಅಂತ್ಯವಾಗಲು ಕೆಲವು ದಿನಗಳು ಬಾಕಿ ಇದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಅಧಿಸೂಚನೆಯೊಂದನ್ನು ಹೊರಡಿಸಿದೆ. ಯುಪಿಎಸ್ ಯೋಜನೆಯು ಏಪ್ರಿಲ್ 1 ರಿಂದ ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಿದೆ.

ಕೇಂದ್ರ ಸರ್ಕಾರ ಮಾರ್ಚ್ 19ರಂದು ಹೊರಡಿಸಿದ ಗೆಜೆಟ್ ಅಧಿಸೂಚನೆಯಲ್ಲಿ ಏಕೀಕೃತ ಪಿಂಚಣಿ ಯೋಜನೆಯ ಕಾರ್ಯಾಚರಣೆ ನಿಯಮಗಳು, 2025ರ ಮಾಹಿತಿಯನ್ನು ನೀಡಿದೆ. ಕೇಂದ್ರ ಸರ್ಕಾರಿ ನೌಕರರು ಯುಪಿಎಸ್‌ಗೆ ಸೇರ್ಪಡೆ ಆಗುವ ಕುರಿತು ಆಯ್ಕೆಯನ್ನು ಮಾಡಿಕೊಳ್ಳಲು ಜೂನ್ 30ರ ತನಕ ಅವಕಾಶವನ್ನು ನೀಡಲಾಗಿದೆ.
ಸರ್ಕಾರಿ ನೌಕರರಿಗೆ ಮಾಹಿತಿ: ಕೇಂದ್ರ ಸರ್ಕಾರಿ ನೌಕರರು ಹಾಲಿ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ಅಡಿಯಲ್ಲಿದ್ದಾರೆ. ಗೆಜೆಟ್ ಅಧಿಸೂಚನೆ ಎನ್‌ಪಿಎಸ್ ವ್ಯಾಪ್ತಿಗೆ ಬರುವ ಕೇಂದ್ರ ಸರ್ಕಾರಿ ನೌಕರರು ಯುಪಿಎಸ್ ಅಡಿಯಲ್ಲಿ ಬರುತ್ತಾರೆ. ಈ ನಿಯಮಗಳು ಏಪ್ರಿಲ್ 1, 2025 ರಿಂದ ಜಾರಿಗೆ ಬರುತ್ತದೆ ಎಂದು ಹೇಳಿದೆ.
ಈ ನಿಯಮಗಳಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಯುಪಿಎಸ್ ದಾಖಲಾತಿಗೆ ಅವಕಾಶವನ್ನು ನೀಡಲಾಗಿದೆ. ಏಪ್ರಿಲ್ 1, 2025ರ ಬಳಿಕ ಜೂನ್ 30ರ ತನಕ ಉದ್ಯೋಗಿಗಳಿಗೆ ಯುಪಿಎಸ್‌ಗೆ ಸೇರ್ಪಡೆಗೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಒಮ್ಮೆ ಯುಪಿಎಸ್ ಆಯ್ಕೆ ಮಾಡಿದ ನಂತರ, ಉದ್ಯೋಗಿ ಅದನ್ನು ಬದಲಾಯಿಸಲು ಸಾಧ್ಯವಿಲ್ಲ.
ಯುಪಿಎಸ್ ಜಾರಿಗೆ ತರುವ ಸಂಪೂರ್ಣ ಪಕ್ರಿಯೆ ಮತ್ತು ವಿಧಾನಗಳನ್ನು ಈ ಹೊಸ ನಿಯಮಗಳ ಅಡಿಯಲ್ಲಿ ನಿಗದಿಪಡಿಸಲಾಗಿದೆ. ಈ ಯೋಜನೆ ಈಗಾಗಲೇ ಎನ್‌ಪಿಎಸ್‌ನ ಅಡಿಯಲ್ಲಿ ಇರುವ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಒಂದು ಆಯ್ಕೆಯಾಗಿರುತ್ತದೆ. ಇದರಲ್ಲಿ ಹಾಲಿ ಉದ್ಯೋಗಿಗಳು, ಹೊಸದಾಗಿ ನೇಮಕಗೊಂಡ ಉದ್ಯೋಗಿಗಳು ಮತ್ತು ಮೊದಲು ಎನ್‌ಪಿಎಸ್‌ನ ಅಡಿಯಲ್ಲಿ ಇದ್ದ ನಿವೃತ್ತ ಉದ್ಯೋಗಿಗಳು ಸೇರಿದ್ದಾರೆ ಎಂದು ವಿವರಣೆ ನೀಡಿದೆ.
ಜೊತೆಗೆ, ಎನ್‌ಪಿಎಸ್ ಆಯ್ಕೆ ಮಾಡಿಕೊಂಡಿದ್ದ ನಿವೃತ್ತ ಉದ್ಯೋಗಿ ಸಾವನ್ನಪ್ಪಿದರೆ, ಆತನ ಪತ್ನಿಗೆ ಯುಪಿಎಸ್‌ನ ಲಾಭಗಳನ್ನು ಪಡೆಯುವ ಹಕ್ಕು ದೊರೆಯುತ್ತದೆ ಎಂದು ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ. ಯುಪಿಎಸ್ ಆಯ್ಕೆ ಮಾಡಲು ಬಯಸುವ ಕೇಂದ್ರ ಸರ್ಕಾರಿ ನೌಕರ 2025ರ ಏಪ್ರಿಲ್ 1ರಿಂದ ಮೂರು ತಿಂಗಳ ಒಳಗೆ ಅರ್ಜಿ ಸಲ್ಲಿಸಬೇಕು. ಏಪ್ರಿಲ್ 1ರಿಂದ ಮತ್ತು ನಂತರ ಸೇವೆಗೆ ಹೊಸದಾಗಿ ನೇಮಕಗೊಂಡ ನೌಕರರು ತಮ್ಮ ಸೇರ್ಪಡೆಯ 30 ದಿನಗಳ ಒಳಗೆ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕು.
ಯುಪಿಎಸ್‌ಗೆ ಸೇರಲು ಉದ್ಯೋಗಿಗಳು ವಿವಿಧ ನಮೂನೆಯ ಅರ್ಜಿಯಲ್ಲಿ ವಿವರಗಳನ್ನು ಸಲ್ಲಿಸಬೇಕಿದೆ. ಹಾಲಿ ಉದ್ಯೋಗಿಗಳಿಗೆ ನಮೂನೆ A2, ಹೊಸದಾಗಿ ನೇಮಕಗೊಂಡ ಉದ್ಯೋಗಿಗಳಿಗೆ ನಮೂನೆ A1, ನಿವೃತ್ತ ಉದ್ಯೋಗಿಗಳಿಗೆ ನಮೂನೆ B2 ಮತ್ತು ನಿಧನರಾದ ಪಿಂಚಣಿದಾರರ ಪತ್ನಿಗೆ ನಮೂನೆ B6 ನಿಗದಿ ಮಾಡಲಾಗಿದೆ.












Click it and Unblock the Notifications