ಗಂಗಾ ಶುದ್ದೀಕರಣದ ಜವಾಬ್ದಾರಿ ಪೇಜಾವರ ಶ್ರೀಗಳಿಗೆ?
ನವದೆಹಲಿ, ಜು 23: ಪ್ರಧಾನಿ ನರೇಂದ್ರ ಮೋದಿ ಕೋರಿಕೆಯ ಮೇರೆಗೆ ವಯೋವೃದ್ದ ಸಂತ ಉಡುಪಿಯ ಹಿರಿಯ ಪೇಜಾವರ ಶ್ರೀಗಳು ಗಂಗಾ ನದಿ ಶುದ್ದೀಕರಣದ ಜವಾಬ್ದಾರಿ ವಹಿಸಿಕೊಳ್ಳಲು ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಜಧಾನಿಯಲ್ಲಿ ಮಂಗಳವಾರ (ಜು 22) ಪ್ರಧಾನಮಂತ್ರಿ ಕಾರ್ಯಾಲಯದ ಆಹ್ವಾನದ ಮೇರೆಗೆ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಪೇಜಾವರ ಶ್ರೀಗಳು, ಮೋದಿ ಕೋರಿಕೆಯ ಮೇರೆಗೆ ಈ ಗುರುತರ ಹೊಣೆಯನ್ನು ಸಂತೋಷದಿಂದ ಸ್ವೀಕರಿಸಲು ತಯಾರಿದ್ದೇನೆಂದು ಮಾಧ್ಯಮದ ಮುಂದೆ ಹೇಳಿಕೆಯನ್ನು ನೀಡಿದ್ದಾರೆ.
ಭಾರತದ ಇತಿಹಾಸದಲ್ಲಿ ಅತ್ಯಂತ ಕ್ಲಿಷ್ಟಕರ ಯೋಜನೆಯಲ್ಲಿ ಒಂದು ಎನ್ನಬಹುದಾದ ಗಂಗಾ ನದಿ ಶುದ್ದೀಕರಣವನ್ನು ಪ್ರಧಾನಿ ಮೋದಿ ಚುನಾವಣೆಯ ಸಮಯದಲ್ಲಿ ನೀಡಿದ ಭರವಸೆಯಂತೆ ಕೈಗೆತ್ತಿಕೊಂಡಿದ್ದಾರೆ. (ಗಂಗಾ ನದಿ ಶುದ್ಧೀಕರಣ: ಗತವೈಭವ ಮರಳುವುದೆ)
ಜೀವನದಿ ಗಂಗೆಗೆ ಅಡ್ಡಲಾಗಿ ಯಾವುದೇ ಅಣೆಕಟ್ಟು ನಿರ್ಮಿಸಬಾರದೆಂದು ಮೋದಿಯವರಿಗೆ ಪೇಜಾವರ ಶ್ರೀಗಳು ಮನವಿ ಮಾಡಿದ್ದಾರೆ ಮತ್ತು ಗಂಗಾನದಿ ಶುದ್ದೀಕರಣ ಯೋಜನೆ ಪವಿತ್ರವಾದದ್ದು ಎಂದು ಹೇಳಿದ್ದಾರೆಂದು ತಿಳಿದು ಬಂದಿದೆ.

ಉಮಾಭಾರತಿ ಒಲವು
ಉಡುಪಿ ಪೇಜಾವರ ಶ್ರೀಗಳಿಂದ ಸನ್ಯಾಸ ದೀಕ್ಷೆ ಪಡೆದಿರುವ ಸಚಿವೆ ಉಮಾಭಾರತಿ ಗಂಗಾ ಶುದ್ದೀಕರಣ ಯೋಜನೆಯ ಮುಂದಾಳತ್ವವನ್ನು ಶ್ರೀಗಳು ವಹಿಸುವುದೇ ಸೂಕ್ತ ಎಂದು ಮೋದಿಯವರಲ್ಲಿ ಮನವಿ ಮಾಡಿದ್ದರು ಎಂದು ದೆಹಲಿ ಮೂಲಗಳಿಂದ ತಿಳಿದುಬಂದಿದೆ.

ಗಂಗಾನದಿ ಶುದ್ದೀಕರಣ ಪ್ರಾಧಿಕಾರಕ್ಕೆ ಶ್ರೀಗಳು
ಭೂಸಾರಿಗೆ, ಪ್ರವಾಸೋದ್ಯಮ, ಹಡಗು ಮತ್ತು ಜನಸಂಪನ್ಮೂಲ ಸಚಿವಾಲಯದ ಅಧಿಕಾರಿಗಳು ಮತ್ತು ಸಚಿವರು ಭಾಗಿಯಾಗಿರುವ ಈ ಗಂಗಾ ಶುದ್ದೀಕರಣ ಪ್ರಾಧಿಕಾರದ ಅಧ್ಯಕ್ಷತೆಯನ್ನು ಪೇಜಾವರ ವಿಶ್ವೇಶ್ವರತೀರ್ಥ ಶ್ರೀಗಳು ವಹಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಹೊಸ ಖಾತೆಯನ್ನು ತೆರೆದಿದ್ದ ಮೋದಿ ಸರಕಾರ
ಚುನಾವಣಾ ಪ್ರಣಾಳಿಕೆಯಂತೆ ಗಂಗಾ ಶುದ್ದೀಕರಣಕ್ಕೆ ಹೊಸ ಸಚಿವಾಲಯವನ್ನೇ ಮೋದಿ ಸರಕಾರ ಸ್ಥಾಪಿಸಿ, ಉಮಾಭಾರತಿ ಹೆಗಲಿಗೆ ಈ ಗುರುತರ ಹೊಣೆಯನ್ನು ನೀಡಲಾಗಿತ್ತು. ಕಳೆದ ಬಜೆಟಿನಲ್ಲಿ ಈ ಯೋಜನೆಗೆ 2370 ಕೋಟಿ ರೂಪಾಯಿ ಒದಗಿಸಲಾಗಿದೆ.

ಅಧಿಕೃತ ಮಾಹಿತಿ ಇನ್ನೂ ಇಲ್ಲ
ಗಂಗಾನದಿ ಶುದ್ದೀಕರಣ ಯೋಜನೆಯ ಬಗ್ಗೆ ಪ್ರಧಾನಿಗಳು ಪೇಜಾವರ ಶ್ರೀಗಳ ಬಳಿ ಮಾತನಾಡಿ, ಅವರ ಸಲಹೆಯನ್ನು ಕೇಳಿದ್ದಾರೆ. ಕೆಲವು ದಿನಗಳ ಹಿಂದೆ ಗಂಗಾನದಿ ಶುದ್ದೀಕರಣ ಸಂಬಂಧ ನಡೆದ ಸಭೆಯ ಅಧ್ಯಕ್ಷತೆಯನ್ನು ಶ್ರೀಗಳು ವಹಿಸಿದ್ದರು. ಗಂಗಾ ಪ್ರಾಧಿಕಾರದ ಅಧ್ಯಕ್ಷತೆ ವಹಿಸಿಕೊಳ್ಳುವ ಸಂಬಂಧ ಪ್ರಧಾನಿ ಕಾರ್ಯಾಲಯದಿಂದ ಅಧಿಕೃತ ಮಾಹಿತಿ ಬರಬೇಕಷ್ಟೇ ಎಂದು ಸ್ವಾಮೀಜಿಗಳ ಶಿಷ್ಯರಿಂದ ತಿಳಿದು ಬಂದಿದೆ.

ಅತ್ಯಂತ ಉತ್ತಮ ಯೋಜನೆ
ಗಂಗಾ ಶುದ್ದೀಕರಣ ಒಂದು ಉತ್ತಮ ಯೋಜನೆ, ನೀವು ಗಟ್ಟಿಯಾದ ನಿರ್ಧಾರ ತೆಗೆದುಕೊಂಡಿದ್ದೀರಿ. ಆದರೆ, ಯಾವುದೇ ಕಾರಣಕ್ಕೂ ಗಂಗಾ ನದಿಯ ನಿರಂತರ ಹರಿವಿಗೆ ಅಡ್ಡಿಯಾಗದಂತೆ ಎಚ್ಚರ ವಹಿಸಿಕೊಳ್ಳಬೇಕೆಂದು ಶ್ರೀಗಳು ಮೋದಿ ಭೇಟಿ ಸಂದರ್ಭದಲ್ಲಿ ಹೇಳಿದ್ದಾರೆ. ವೈಜ್ಞಾನಿಕ ಮತ್ತು ಸೈದ್ಧಾಂತಿಕ ವಿಚಾರಗಳ ಬಗ್ಗೆಯೂ ಮೋದಿ ಶ್ರೀಗಳ ಸಲಹೆ ಪಡೆದಿದ್ದಾರೆ.












Click it and Unblock the Notifications