Tirumala: ಬಾಲಕಿ ಸಾವಿನ ಬಳಿಕ ಮಕ್ಕಳೊಂದಿಗೆ ಬೆಟ್ಟ ಹತ್ತುವ ಸಮಯದಲ್ಲಿ ಬದಲಾವಣೆ: TTD
ತಿರುಪತಿ, ಆಗಸ್ಟ್ 14: ತಿರುಮಲ ಬೆಟ್ಟ ಹತ್ತುವ ದಾರಿಯಲ್ಲಿ ಆರು ವರ್ಷದ ಬಾಲಕಿಯನ್ನು ಚಿರತೆ ಎಳೆದೊಯ್ದು ಕೊಂದಿತ್ತು. ಈ ಪ್ರಕರಣ ಬೆನ್ನಲ್ಲೆ ಎಚ್ಚೆತ್ತ ತಿರುಮಲ ತಿರುಪತಿ ದೇವಸ್ಥಾನ (TTD) ಭಕ್ತರ ಸುರಕ್ಷತೆ ದೃಷ್ಟಿಯಿಂದ ಸಮಯ ಬದಲಾವಣೆ ಮಾಡಿ ಹೊಸ ನಿಯಮ ಪ್ರಕಟಿಸಿದೆ. ಇತ್ತ ಬಾಲಕಿ ಎಳೆದೊಯ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಸ್ವಾಮಿ ವೆಂಕಟೇಶ್ವರನ ದರ್ಶನಕ್ಕೆ ಮಕ್ಕಳೊಂದಿಗೆ ಅಲಿಪಿರಿ ಮಾರ್ಗವಾಗಿ ಬೆಟ್ಟ ಹತ್ತುವ ಭಕ್ತರಿಗೆ ಸಮಯಾವಕಾಶ ಬದಲಿಸಲಾಗಿದೆ. ಮಕ್ಕಳೊಂದಿಗೆ ಬೆಟ್ಟ ಹತ್ತುವವರು ಅಲಿಪಿರಿ ಮತ್ತು ತಿರುಮಲ ಮಧ್ಯದ 7ನೇ ಮೈಲಿಯಲ್ಲಿ ಪೊಲೀಸ್ ಚೌಕಿ ಸ್ಥಾಪಿಸಲಾಗಿದೆ. ಇಲ್ಲಿ ಮಕ್ಕಳು ಮತ್ತು ಶಿಶುಗಳ ಕೈಗೆ ಭದ್ರತಾ ಟ್ಯಾಗ್ ಅನ್ನು ಕಟ್ಟಿ ಕಳುಹಿಸಲಾಗುತ್ತಿದೆ.

ಅದೇ ರೀತಿ 15 ವರ್ಷದ ಮಕ್ಕಳೊಂದಿಗೆ ಬೆಟ್ಟ ಹತ್ತುವವರು ಮಧ್ಯಾಹ್ನವರೆಗೆ (ಬೆಳಗ್ಗೆ 5am-2pm) ವರೆಗೆ ಮಾತ್ರವೇ ತೆರಳುವಂತೆ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಇದರೊಂದಿಗೆ ಸಂಜೆ 6 ಗಂಟೆ ನಂತರ ಬೈಕ್‌ಗಳನ್ನು ಘಾಟ್‌ನೊಳಕ್ಕೆ ಬಿಡುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮೂಲಕ ಸಾರ್ವಜನಿಕರು/ಭಕ್ತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ.
ತಿರುಮಲ ಬೆಟ್ಟವೇ ದಟ್ಟಾರಣ್ಯ ಪ್ರದೇಶ ವ್ಯಾಪ್ತಿಯಲ್ಲಿದೆ. ಈಗಾಗಲೇ ಬೆಟ್ಟದ ಐದಾರು ಕಡೆ ಚಿರತೆಗಳು ಓಡಾಡಿರುವುದು ಗೊತ್ತಾಗಿದೆ. ಮೂರು ಚಿರತೆಗಳು ಅಲಿಪಿರಿ ಘಾಟ್‌ನಲ್ಲಿ ಕಾಣಿಸಿಕೊಂಡಿವೆ. ಶ್ರೀಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನ ಬಳಿ ಚಿರತೆಗಳ ಚಲನವಲನ ಕಂಡು ಬಂದಿದೆ. ಸಾಮಾನ್ಯವಾಗಿ ಬೆಳಗ್ಗೆ 5 ಗಂಟೆಯಿಂದ 8 ಗಂಟೆಯವರೆಗೆ ಚಿರತೆಗಳು ಓಡಾಡಿವೆ, ಜನರು ಎಚ್ಚರದಿಂದ ಇರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ದಿನಗಳಿಂದ ಚಿರತೆಗಳು ಕಂಡು ಬಂದಿವೆ. ಈ ಭಾಗದಲ್ಲಿ ಬೆಟ್ಟ ಹತ್ತಿ ದೇವರ ದರ್ಶನ ಮಾಡುವ ಭಕ್ತರ ಸಂಖ್ಯೆ ಅಪಾರ. ಜನರು ಮೆಟ್ಟಿಲುಗಳು ಹಾಗೂ ರಸ್ತೆಗಳು ಮೂಲಕ ಬೆಟ್ಟ ಹತ್ತುತ್ತಾರೆ. ಈ ಹಿಂದೆ ಮೆಟ್ಟಿಲುಗಳ ಮೇಲೆ ಚಿರತೆ ಇದ್ದದ್ದು ಅರಣ್ಯ ಇಲಾಖೆ ಸಿಬ್ಬಂದಿ ಕಾಣಿಸಿತ್ತು. ಆದ್ದರಿಂದ ಇವುಗಳನ್ನು ಓಡಿಸಲು ಇಲ್ಲಿ ಪಟಾಕಿಗಳನ್ನು ಸಿಬ್ಬಂದಿ ಸಿಡಿಸಿದ್ದಾರೆ.
ಟಿಟಿಡಿ ಇಒ ಧರ್ಮಾರೆಡ್ಡಿ ಹೇಳಿಕೆ
'ಚೌಕಘಾಟಿಯಲ್ಲಿ ಪ್ರವೇಶಿಸಿದ ಪೊಲೀಸರಿಗೆ ಕರೆದುಕೊಂಡು ಹೋಗುವ ಪಾಲಕರ ವಿವರಗಳನ್ನು ನೀಡಲಾಗಿದೆ. ಮಕ್ಕಳ ಕೈಗೆ ಟ್ಯಾಗ್ ಕಟ್ಟಲಾಗುತ್ತಿದೆ. ಪಾಲಕರು ಕೈಬಿಡದಂತೆ ಹಾಗೂ ಮಕ್ಕಳು ಪಾಲಕರನ್ನು ಬಿಟ್ಟಿರದಂತೆ ಸೂಚನೆ ನೀಡಲಾಗುತ್ತಿದೆ.ಇನ್ನೂ ಕೈಗೆ ಕಟ್ಟಿರುವ ಟ್ಯಾಗ್ ಮೂಲಕ ಪೋಷಕರು-ಮಕ್ಕಳ ಪತ್ತೆ ಕೆಲಸ ನಡೆಯುತ್ತಿದೆ. ಈ ಪ್ರಕ್ರಿಯೆ ಬ್ರಹ್ಮೋತ್ಸವ ಸಂದರ್ಭದಲ್ಲಿ ಪಾಲಿಸಲಾಗುತ್ತದೆ. ಕಾಡು ಪ್ರಾಣಿಗಳಿಂದ ರಕ್ಷಣೆಗೆ ಸಂಬಂಧಿಸಿದಂತೆ ಟಿಟಿಡಿ ತಿಳಿಸಿದ ಮಾರ್ಗಸೂಚಿ, ನಿಯಮ ಪಾಲಿಸಬೇಕು ಎಂದು TTD ಮುಖ್ಯಸ್ಥರು ಪ್ರತಿಕ್ರಿಯಿಸಿದರು.
ಬಾಲಕಿ ಕೊಂದ ಚಿರತೆ ಸೆರೆ
ಕೆಲವು ದಿನಗಳ ಹಿಂದಷ್ಟೇ ಬೆಟ್ಟ ಹತ್ತುತ್ತಿದ್ದ ಆರು ವರ್ಷದ ಬಾಲಕಿಯನ್ನು ಹಿಡಿದು ಎಳೆದೊಯ್ದಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಭಾನವಾರ ಮಧ್ಯರಾತ್ರಿಯೇ ಚಿರತೆ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಸದ್ಯ ಅದನ್ನು ಹಿಡಿದು ಎಸ್‌ವಿ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ ಎಂದು ಟಿಟಿಡಿ ಮೂಲಗಳು ತಿಳಿಸಿವೆ. ಇದರಿಂದಾಗಿ ಒಂದು ಹಂತದಲ್ಲಿ ಸಾರ್ವಜನಿಕರು ಭಕ್ತರು ನಿಟ್ಟುಸಿರು ಬಿಡುವಂತಾಗಿದೆ.












Click it and Unblock the Notifications