Dhanpur By Election Results: ಧನ್‌ಪುರದಲ್ಲಿ ಬಿಜೆಪಿ ಅಭ್ಯರ್ಥಿ ಬಿಂದು ದೇಬನಾಥ್‌ಗೆ ಭರ್ಜರಿ ಗೆಲುವು
ತ್ರಿಪುರಾ ಪಶ್ಚಿಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಧನ್‌ಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿಂದು ದೇಬನಾಥ್ ಅವರು ತಮ್ಮ ಎದುರಾಳಿ ಸಿಪಿಐ(ಎಂ)ನ ಕೌಶಿಕ್ ಚಂದಾ ವಿರುದ್ಧ 18 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಬಿಂದು ದೇಬನಾಥ್ ಮತ್ತು ಸಿಪಿಐ(ಎಂ)ನ ಕೌಶಿಕ್ ಚಂದಾ ನಡುವೆ ನೇರ ಹಣಾಹಣಿ ಏರ್ಪಡುತ್ತದೆ ಎಂದು ಭಾವಿಸಲಾಗಿತ್ತು, ಆದರೆ ಬಿಜೆಪಿ ಅಭ್ಯರ್ಥಿ ಬಿಂದು ದೇಬನಾಥ್ ಪ್ರಾಬಲ್ಯ ಮೆರೆದಿದ್ದಾರೆ. ಮತ ಎಣಿಕೆ ಆರಂಭದಿಂದಲೇ ಭಾರಿ ಮುನ್ನಡೆ ಪಡೆದುಕೊಂಡಿದ್ದ ಅವರು, ಭರ್ಜರಿ ಗೆಲುವು ದಾಖಲಿಸಿದರು.

ಕೇಂದ್ರ ಸಚಿವೆ ಪ್ರತಿಮಾ ಭೂಮಿಕ್ ಅವರು ಆಯ್ಕೆಯಾದ ಕೆಲವೇ ದಿನಗಳಲ್ಲಿ ವಿಧಾನಸಭೆಗೆ ರಾಜೀನಾಮೆ ನೀಡಿದ ನಂತರ ಧನಪುರದಲ್ಲಿ ಉಪಚುನಾವಣೆ ನಡೆಸಲಾಗಿತ್ತು. 2019 ರ ಲೋಕಸಭಾ ಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರತಿಮಾ ಭೂಮಿಕ್ ಅವರು ತ್ರಿಪುರಾ ಪಶ್ಚಿಮ ಲೋಕಸಭೆ (MP) ಸ್ಥಾನದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸುಬಲ್ ಭೌಮಿಕ್ ಅವರನ್ನು ಸೋಲಿಸುವ ಮೂಲಕ 305689 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಬಿಜೆಪಿ ಅಭ್ಯರ್ಥಿ ಬಿಂದು ದೇಬನಾಥ್ ಅವರು 30,017 ಮತಗಳನ್ನು ಪಡೆದರೆ, ಸಿಪಿಐ(ಎಂ)ಅಭ್ಯರ್ಥಿ ಕೌಶಿಕ್ ಚಂದಾ ಕೇವಲ 11,146 ಮತಗಳು ಪಡೆದುಕೊಂಡಿದ್ದಾರೆ. ಈ ಮೂಲಕ ಆಡಳಿತರೂಢ ಬಿಜೆಪಿ ಜನರ ನಂಬಿಕೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಮತ್ತೊಂದು ಕ್ಷೇತ್ರದಲ್ಲೂ ಗೆಲುವು
ಧನ್‌ಪುರ ಮಾತ್ರವಲ್ಲದೆ ರಾಜ್ಯದ ಬೊಕ್ಸಾನಗರ ವಿಧಾನಸಭಾ ಕ್ಷೇತ್ರದಲ್ಲೂ ಉಪಚುನಾವಣೆ ನಡೆದಿತ್ತು ಇಲ್ಲೂ ಕೂಡ ಆಡಳಿತಾರೂಢ ಬಿಜೆಪಿ ಗೆಲುವು ಸಾಧಿಸಿದೆ. ಸೆಪ್ಟೆಂಬರ್ 5 ರಂದು ಉಪಚುನಾವಣೆ ಮತದಾನ ನಡೆದಿದ್ದರೆ, ಸೆಪ್ಟೆಂಬರ್ 8ರಂದು ಮತ ಎಣಿಕೆ ಕಾರ್ಯ ನಡೆದಿತ್ತು.
ಬೋಕ್ಸಾನಗರದಲ್ಲಿ ಬಿಜೆಪಿ ಅಭ್ಯರ್ಥಿ ತಫಜ್ಜಲ್ ಹೊಸೈನ್ ಅವರು ಸಿಪಿಐ(ಎಂ) ಅಭ್ಯರ್ಥಿ ಮಿಜಾನ್ ಹೊಸೈನ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಹಾಲಿ ಸಿಪಿಐ(ಎಂ) ಶಾಸಕ ಸಂಸುಲ್ ಹಕ್ ಅವರ ನಿಧನದಿಂದಾಗಿ ಬೊಕ್ಸಾನಗರದಲ್ಲಿ ಉಪಚುನಾವಣೆ ನಡೆದಿತ್ತು. ಇಲ್ಲಿ ಬಿಜೆಪಿ ಗೆದ್ದಿರುವುದು ಸರ್ಕಾರಕ್ಕೆ ಹೆಚ್ಚಿನ ಆತ್ಮವಿಶ್ವಾಸ ನೀಡಿದೆ.
ಬೊಕ್ಸಾನಗರದಲ್ಲಿ ಬಿಜೆಪಿ ಅಭ್ಯರ್ಥಿ ತಫಜ್ಜಲ್ ಹೊಸೈನ್ 34,146 ಮತಗಳನ್ನು ಪಡೆದರೆ, ಸಿಪಿಐ(ಎಂ) ಅಭ್ಯರ್ಥಿ ಮಿಜಾನ್ ಹೊಸೈನ್ ಕೇವಲ 3909 ಮತಗಳನ್ನು ಮಾತ್ರ ಪಡೆದುಕೊಂಡಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ 30237 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಎರಡೂ ಸ್ಥಾನಗಳಲ್ಲಿ, ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ವಿರೋಧ ಪಕ್ಷವಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು, ಇತರ ಎರಡು ವಿರೋಧ ಪಕ್ಷಗಳಾದ ಟಿಪ್ರಾ ಮೋಥಾ ಮತ್ತು ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ.












Click it and Unblock the Notifications