Tripura CM: ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಮಾಣಿಕ್ ಸಹಾ
ಹೊಸ ಸರ್ಕಾರದ ಮುಖ್ಯಮಂತ್ರಿ ಮತ್ತು ಸಂಪುಟ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮಾರ್ಚ್ 8 ರಂದು ನಡೆಯಲಿದೆ.
ಅಗರ್ತಲಾ, ಮಾರ್ಚ್ 06: ತ್ರಿಪುರಾದಲ್ಲಿ ಬಿಜೆಪಿಯ ನೂತನ ಶಾಸಕಾಂಗ ಪಕ್ಷದ ನಾಯಕರಾಗಿ ಮಾಣಿಕ್ ಸಹಾ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಸತತ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯ ಚುನಾವಣೆಯಲ್ಲಿ 60 ಸದಸ್ಯ ಬಲದ ವಿಧಾನಸಭೆಯ 32 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಬಿಜೆಪಿಯ ಮಿತ್ರಪಕ್ಷವಾದ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್‌ಟಿ) ಒಂದು ಸ್ಥಾನದಲ್ಲಿ ಗೆಲುವು ದಾಖಲಿಸಿದೆ.
ಹೊಸ ಸರ್ಕಾರದ ಮುಖ್ಯಮಂತ್ರಿ ಮತ್ತು ಸಂಪುಟ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮಾರ್ಚ್ 8 ರಂದು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಣಿಕ್ ಸಹಾ ಈ ಹಿಂದೆ ಸುದ್ದಿಗಾರರಿಗೆ ತಿಳಿಸಿದ್ದರು. ಕಳೆದ ವರ್ಷ 2022 ರಲ್ಲಿ ಅಚ್ಚರಿಯ ನಡೆಯಲ್ಲಿ ಬಿಪ್ಲಬ್ ಕುಮಾರ್ ದೇಬ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಮಾಣಿಕ್ ಸಹಾ ಅವರನ್ನು ಸಿಎಂ ಸ್ಥಾನಕ್ಕೆ ಕೂರಿಸಲಾಗಿತ್ತು.

ಈ ಬಾರಿ ಬಿಜೆಪಿ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೆಸರಿಸದಿದ್ದರೂ ಮಾಣಿಕ್ ಸಹಾ ಅವರನ್ನು ಮುಖ್ಯಮಂತ್ರಿಯಾಗಿ ಉಳಿಸಿಕೊಳ್ಳಲಾಗುವುದು ಎಂದು ಪಕ್ಷದ ಚುನಾವಣಾ ಪ್ರಚಾರದ ಸಮಯದಲ್ಲಿ ಸೂಕ್ಷ್ಮವಾಗಿ ಸೂಚಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಚುನಾವಣಾ ಮೆರವಣಿಗೆಗಳಲ್ಲಿ "ಮೋದಿ - ಮಾಣಿಕ್ ಸಹಾ ಸರ್ಕಾರ್" ರಚನೆಗೆ ಅವಕಾಶ ನೀಡಬೇಕು ಎಂದೇ ಪ್ರಚಾರ ನಡೆಸಲಾಗಿತ್ತು.
70 ವರ್ಷದ ಮಾಜಿ ಕಾಂಗ್ರೆಸ್ ನಾಯಕ ಮಾಣಿಕ್ ಸಹಾ ಕೇವಲ ಆರು ವರ್ಷಗಳ ಹಿಂದೆ ಬಿಜೆಪಿಗೆ ಸೇರಿದ್ದರೂ ಇದ್ದಕ್ಕಿದ್ದಂತೆ ಉನ್ನತ ಸ್ಥಾನದಲ್ಲಿ ಆಸೀನರಾದರು. ಮಾಣಿಕ್ ಸಹಾ ಅವರು ಮುಖ್ಯಮಂತ್ರಿಯಾಗುವ ಮೊದಲು ತ್ರಿಪುರಾದಲ್ಲಿ ಏಕೈಕ ರಾಜ್ಯಸಭಾ ಸ್ಥಾನವನ್ನು ಹೊಂದಿದ್ದರು. ಅವರು ಟೌನ್ ಬೋರ್ಡೋವಾಲಿ ಕ್ಷೇತ್ರದಿಂದ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ದಾಖಲಿಸಿದ್ದಾರೆ.

ಮಾಣಿಕ್ ಸಹಾ 2016 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. 2020 ರಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದರು. 2022 ರಲ್ಲಿ ತ್ರಿಪುರಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಿಎಂ ಮಾಣಿಕ್ ಸಹಾ ಅವರು ತಮ್ಮ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿಯನ್ನು ಪಾಟ್ನಾದ ಸರ್ಕಾರಿ ಡೆಂಟಲ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. ತ್ರಿಪುರಾ ವೈದ್ಯಕೀಯ ಕಾಲೇಜು ಮತ್ತು ಅಗರ್ತಲಾದ ಬಿಆರ್ ಅಂಬೇಡ್ಕರ್ ಸ್ಮಾರಕ ಬೋಧನಾ ಆಸ್ಪತ್ರೆಯಲ್ಲಿ ದಂತ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿದ್ದರು. ಇದರ ಜೊತೆಗೆ ತ್ರಿಪುರಾ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷರು ಮತ್ತು ಮಾಜಿ ಬ್ಯಾಡ್ಮಿಂಟನ್ ಆಟಗಾರರಾಗಿದ್ದರು.












Click it and Unblock the Notifications