ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆಯಿರುವವರ ವಿರುದ್ಧವೂ ಇದೇ ಕ್ರಮ ಏಕಿಲ್ಲ?: ಸಿಖ್ ಸಂಘಟನೆಯ ಪ್ರಶ್ನೆ
ಅಮೃತಸರ, ಮಾರ್ಚ್. 28: ಪ್ರತ್ಯೇಕತಾವಾದಿ ಬೋಧಕ ಅಮೃತಪಾಲ್ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರ ದಬ್ಬಾಳಿಕೆಗೆ ಸಂಬಂಧಿಸಿದಂತೆ ಸಿಎಂ ಭಗವಂತ್ ಮಾನ್ ಸರ್ಕಾರ ಮತ್ತು ಕೇಂದ್ರದ ವಿರುದ್ಧ ಅಕಾಲ್ ತಖ್ತ್ ಸಂಘಟನೆ ತೀವ್ರ ಖಂಡನೆ ವ್ಯಕ್ತಪಡಿಸಿದೆ. 'ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆಯಿರುವವರ' ವಿರುದ್ಧ ಇದೇ ರೀತಿಯ ಕ್ರಮವನ್ನು ಏಕೆ ತೆಗೆದುಕೊಳ್ಳುವುದಿಲ್ಲ ಎಂದು ಕಟುವಾಗಿ ಪ್ರಶ್ನಿಸಿದೆ.
ಅಕಾಲ್ ತಖ್ತ್ ಜತೇದಾರ್ ಗಿಯಾನಿ ಹರ್‌ಪ್ರೀತ್ ಸಿಂಗ್ ಅವರು ಅಮೃತಪಾಲ್ ಸಿಂಗ್ ಅವರ ಬಂಧನ ಮತ್ತು ವಿಚಾರಣೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಎಲ್ಲಾ ಸಿಖ್ ಯುವಕರನ್ನು ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ 24 ಗಂಟೆಗಳ ಸಮಯ ಮತ್ತು ಬೇಡಿಕೆ ಇಟ್ಟಿದ್ದಾರೆ. ಪಂಜಾಬ್‌ನಲ್ಲಿನ ಪರಿಸ್ಥಿತಿಯನ್ನು ಚರ್ಚಿಸಲು ಬುದ್ಧಿಜೀವಿಗಳು, ವಕೀಲರು, ಪತ್ರಕರ್ತರು, ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರನ್ನು ಒಳಗೊಂಡ ಸಿಖ್ ಸಂಘಟನೆಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಅಕಾಲ್ ತಖ್ತ್ ಸಂಘಟನೆ ಸಿಖ್ಖರಿಗೆ ಅತ್ಯುನ್ನತ ಸ್ಥಾನವಾಗಿದ್ದು, ಅದರ ವಕ್ತಾರರಾಗಿರುವ ಜತೇದಾರ್ ಗಿಯಾನಿ ಹರ್‌ಪ್ರೀತ್ ಸಿಂಗ್ ಅವರ ಬಗ್ಗೆ ಸಿಖ್ಖರಲ್ಲಿ ಗೌರವ ಹೆಚ್ಚಿದೆ. ಅಮೃತಪಾಲ್ ಸಿಂಗ್ ಮತ್ತು ಅವರ ಖಲಿಸ್ತಾನದ ಬೇಡಿಕೆಯನ್ನು ಬೆಂಬಲಿಸಿದ ಆರೋಪದಲ್ಲಿ ಬಂಧಿಸಲ್ಪಟ್ಟವರ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಏಕೆ ಅನ್ವಯಿಸಲಾಗಿದೆ ಎಂದು ಪ್ರಶ್ನಿಸಿದ ಅವರು, "ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆಯಿಡುವ ಲಕ್ಷಾಂತರ ಜನರಿದ್ದಾರೆ. ಹಿಂದೂ ರಾಷ್ಟ್ರಕ್ಕಾಗಿ ಕರೆ ನೀಡುವವರನ್ನೂ ಸಹ ಬಂಧಿಸಬೇಕು. ಅವರ ವಿರುದ್ಧವೂ ಎನ್ಎಸ್ಎ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದಿದ್ದಾರೆ.
ಯಾವುದೇ ದೇಶವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಕಂಡುಬಂದಲ್ಲಿ ಕಸ್ಟಡಿಗೆ ತೆಗೆದುಕೊಂಡವರನ್ನು ಬಿಡುಗಡೆ ಮಾಡುವಂತೆ ರಾಜ್ಯ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಮಾನ್ ಹೇಳಿದ್ದಾರೆ. ಆದರೆ, ಶಾಂತಿ ಕದಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಇತ್ತ, ಮುನ್ನೆಚ್ಚರಿಕೆಯಾಗಿ ಬಂಧಿಸಿದ್ದ 353 ಮಂದಿಯಲ್ಲಿ 197 ಮಂದಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.

ಅಕಾಲ್ ತಖ್ತ್ ಜತೇದಾರ್ ಅವರು, ಯಾವುದೇ ಹಿಂಸಾತ್ಮಕ ಪ್ರತಿಭಟನೆ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ. ಬಂಧಿತ ಯುವಕರನ್ನು ಬಿಡುಗಡೆ ಮಾಡದಿದ್ದರೆ, "ನಾವು ಆಕ್ರಮಣಕಾರಿಯಾಗಬಾರದು ಆದರೆ ರಾಜತಾಂತ್ರಿಕವಾಗಿ ಅವರಿಗೆ ಉತ್ತರಿಸಬೇಕು. ಪೊಲೀಸ್ ಕಸ್ಟಡಿಯಲ್ಲಿರುವವರನ್ನು ಬಿಡುಗಡೆ ಮಾಡುವಂತೆ ಹೈಕೋರ್ಟ್‌ಗೆ ಮೊರೆ ಹೋಗಲಾಗುವುದು ಎಂದು ತಿಳಿಸಿದ್ದಾರೆ.
ಬೈಸಾಖಿಯ ನಂತರ ಅಕಾಲ್ ತಖ್ತ್ ದೇಶ ಮತ್ತು ಪ್ರಪಂಚದಾದ್ಯಂತ ಈ ವಿಷಯವನ್ನು ಮುನ್ನೆಲೆಗೆ ತರುತ್ತದೆ. ನಮಗೆ ಏನು ಮಾಡಲಾಗುತ್ತಿದೆ ಎಂದು ಎಲ್ಲರಿಗೂ ಅವರಿಗೆ ಹೇಳುತ್ತೇವೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಮಾಧ್ಯಮಗಳ ವಿರುದ್ಧ ಕಿಡಿಕಾರಿರುವ ಅವರು, ತನಿಖಾ ಸಂಸ್ಥೆಗಳು ಮತ್ತು ಸುದ್ದಿ ವಾಹಿನಿಗಳ ಮೂಲಕ ಸಿಖ್ಖರ ಬಗ್ಗೆ ಬೇರೆ ರೀತಿಯ ನಿರೂಪಣೆಯನ್ನು ಮಾಡಿಸಲಾಗುತ್ತಿದೆ. ಸುದ್ದಿ ಚಾನೆಲ್‌ಗಳು ದ್ವೇಷದ ಪ್ರಚಾರ ಮಾಡುತ್ತಿವೆ. ನಾವು ಭಯೋತ್ಪಾದಕರೇ? ಎಂದು ಪ್ರಶ್ನಿಸಿದ್ದಾರೆ.
ಅಕಾಲ್ ತಖ್ತ್ ಜತೇದಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಭಗವಂತ್ ಮಾನ್ ಅವರು, "ಕಾನೂನು ಅದರ ಹಾದಿಯಲ್ಲಿ ಸಾಗುತ್ತಿದೆ, ಪಂಜಾಬ್‌ನಲ್ಲಿ ಶಾಂತಿ ಮತ್ತು ಸಹೋದರತ್ವವಿದೆ. ಮುನ್ನೆಚ್ಚರಿಕೆಯಾಗಿ ಬಂಧಿಸಿರುವವರನ್ನು ತಕ್ಷಣ ಬಿಡುಗಡೆ ಮಾಡುವಂತೆ ನಾನು ಪೊಲೀಸ್ ಮುಖ್ಯಸ್ಥ ಮತ್ತು ಗುಪ್ತಚರರಿಗೆ ತಿಳಿಸಿದ್ದೇನೆ. ನಿನ್ನೆ ಕೂಡ ಹಲವಾರು ಯುವಕರನ್ನು ಬಿಡುಗಡೆ ಮಾಡಿದ್ದೇವೆ" ಎಂದಿದ್ದಾರೆ.
ಹಿಂದಿನ ಹೇಳಿಕೆಯಲ್ಲಿ, ಅಕಾಲ್ ತಖ್ತ್ ಸಂಘಟನೆ ಅಮೃತಪಾಲ್ ಸಿಂಗ್ ಅವರನ್ನು ಪೊಲೀಸರ ಮುಂದೆ ಶರಣಾಗುವಂತೆ ಮತ್ತು ತನಿಖೆಗೆ ಸಹಕರಿಸುವಂತೆ ಕೇಳಿಕೊಂಡಿದೆ. ಆತನನ್ನು ಇಲ್ಲಿಯವರೆಗೆ ಏಕೆ ಹಿಡಿಯಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ ಅವರು, ಪೊಲೀಸರ ಸಾಮರ್ಥ್ಯವನ್ನು ಪ್ರಶ್ನಿಸಿದ್ದರು.












Click it and Unblock the Notifications