ಅತಿ ಹೆಚ್ಚು ಮಳೆಯಾಗುತ್ತಿರುವ ದೇಶದ 10 ಪ್ರದೇಶಗಳಿವು
ಬೆಂಗಳೂರು, ಅಕ್ಟೋಬರ್ 28: 'ಕ್ಯಾರ್' ಚಂಡಮಾರುತ ಕೇವಲ ಕರ್ನಾಟಕ, ಕೇರಳ ಮಾತ್ರವಲ್ಲದೆ ಬೇರೆ ರಾಜ್ಯಗಳ ಮೇಲೂ ಪ್ರಭಾವ ಬೀರುತ್ತಿದೆ.
ಚೆನ್ನೈ, ತೆಲಂಗಾಣದಲ್ಲೂ ವಿಪರೀತ ಮಳೆಯಾಗುತ್ತಿದೆ. ಹಾಗಾದರೆ ಭಾರತದ ಯಾವ್ಯಾವ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿದೆ ಎನ್ನುವುದನ್ನು ಗಮನಿಸೋಣ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ದೇಶದ ಹಲವೆಡೆ ಭಾರಿ ಮಳೆಯಾಗುತ್ತಿದೆ. ಹಾಗೆಯೇ ವಾಯುಭಾರ ಕುಸಿತ ಚಂಡಮಾರುತವಾಗಿ ಮಾರ್ಪಟ್ಟಿತ್ತು, ಹಲವೆಡೆ ಭಾರಿ ಮಳೆಯಾಗಿದೆ.
ನಾಗಪಟ್ಟಣಂ-54 ಮಿ.ಮೀ, ಬೆಂಗಳೂರು 41 ಮಿ.ಮೀ, ಚೆನ್ನೈ 37 ಮಿ.ಮೀ, ಸಿಯೋನಿ 34 ಮಿ.ಮೀ, ಬೆಟುಲ್ 31 ಮಿ.ಮೀ, ವರ್ಧಾ-31 ಮಿ.ಮೀ, ಛಿಂದ್ಚಾರಾ-30 ಮಿ.ಮೀ, ಚಿತ್ರದುರ್ಗ 29 ಮಿ.ಮೀ, ಕೊಹಿಮಾ-28 ಮಿ.ಮೀ, ಜಲ್ಗಾನ್-26 ಮಿ.ಮೀನಷ್ಟು ಮಳೆಯಾಗಿದೆ ಎಂದು ಸ್ಕೈಮೆಟ್ ವೆದರ್ ವರದಿ ಮಾಡಿದೆ.

ಗೋವಾದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಮಹಾರಾಷ್ಟ್ರ, ಗೋವಾ, ಕರ್ನಾಟಕ, ದಕ್ಷಿಣ ಗುಜರಾತ್ ಹಾಗೂ ಕಡಲ ತೀರಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮಲ್ಪೆ ಸಮುದ್ರದಲ್ಲಿ ಅಲೆಗಳ ಅಬ್ಬರ ಕಡಿಮೆಯಾದಂತೆ ಕಾಣುತ್ತಿದೆ. ರಾತ್ರಿಯವರೆಗೂ ಮಲ್ಪೆ ಕಡಲತೀರ ಪ್ರಕ್ಷುಬ್ದವಾಗಿತ್ತು. ಕಡಲು ಶಾಂತವಾಗಿದ್ದರೂ ಪ್ರವಾಸಿಗರಿಗೆ ಪ್ರವೇಶ ಇಲ್ಲ. ಯಾವುದೇ ಕ್ಷಣದಲ್ಲಿ ಅಲೆಗಳಬ್ಬರ ಹೆಚ್ಚಾಗುವ ಸಾಧ್ಯತೆ ಇದೆ. ಗಂಟೆಗೆ 45 ಕಿಮೀ ವೇಗದಲ್ಲಿ ಗಾಳಿ ಬೀಸುವ ಎಚ್ಚರಿಕೆ ನೀಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರರಿಗೂ ಕಡಲಿಗೆ ತೆರಳದಂತೆ ಸೂಚನೆ ನೀಡಲಾಗಿದೆ.
ಕೊಡಗು ಜಿಲ್ಲೆಗೂ ಕ್ಯಾರ್ ಚಂಡಮಾರುತ ಬಿಸಿ ತಟ್ಟಿದೆ. ಕಳೆದ ಕೆಲವು ದಿನಗಳಿಂದ ಕೊಡಗು ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗುತ್ತಿದೆ. ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಜಿಲ್ಲೆಯಲ್ಲಿ ಸಂಪೂರ್ಣ ಮೋಡ ಕವಿದ ವಾತಾವರಣ ಇದೆ. ಭಾರೀ ಚಳಿ ವಾತಾವರಣಕ್ಕೆ ಜಿಲ್ಲೆಯ ಜನತೆ ತತ್ತರಿಸಿ ಹೋಗಿದ್ದಾರೆ. ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದ ಜನರು ಹೈರಾಣಾಗಿದ್ದಾರೆ. ಆಗಿಂದಾಗ್ಗೆ ಸುರಿಯುವ ಮಳೆಗೆ ವಾಹನ ಸವಾರರು ಪರದಾಟ ನಡೆಸಿದ್ದಾರೆ.












Click it and Unblock the Notifications