"ಮಕ್ಕಳೇ ಭಾರತಕ್ಕೆ ಬರಬೇಡಿ," ಆರ್‌ಜೆಡಿ ನಾಯಕ ಸಿದ್ದಿಕಿ ಹೇಳಿಕೆ ಸೀಕ್ರೆಟ್?
ಪಾಟ್ನಾ, ಡಿಸೆಂಬರ್ 23: ದೇಶದಲ್ಲಿ ಮುಸ್ಲಿಮರ ಕುರಿತು ಪಕ್ಷಪಾತ ಧೋರಣೆ ಪ್ರದರ್ಶಿಸಲಾಗುತ್ತಿದ್ದು, ತಮ್ಮ ಮಕ್ಕಳಿಗೆ ವಿದೇಶದಲ್ಲಿ ಕೆಲಸ ಮಾಡಿ ಅಲ್ಲಿಯೇ ನೆಲೆಸುವಂತೆ ಆರ್‌ಜೆಡಿಯ ಹಿರಿಯ ನಾಯಕರೊಬ್ಬರು ಸಲಹೆ ನೀಡಿದ್ದಾರೆ ಎಂಬುದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಆಗುತ್ತಿದೆ.
ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಅಬ್ದುಲ್ ಬಾರಿ ಸಿದ್ದಿಕಿ ಈ ದೇಶದಲ್ಲಿ ಮುಸ್ಲಿಮರ ವಿರುದ್ಧ ಪಕ್ಷಪಾತವನ್ನು ತೋರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
"ದೇಶದ ವಾತಾವರಣವನ್ನು ಹೈಲೈಟ್ ಮಾಡಲು ನಾನು ವೈಯಕ್ತಿಕ ಉದಾಹರಣೆಯನ್ನು ಉಲ್ಲೇಖಿಸಲು ಬಯಸುತ್ತೇನೆ. ನನಗೆ ಹಾರ್ವರ್ಡ್‌ನಲ್ಲಿ ಓದುತ್ತಿರುವ ಒಬ್ಬ ಮಗ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಪದವಿ ಪಡೆದ ಮಗಳು ಇದ್ದಾರೆ. ಅವರಿಗೆ ನಾನು ವಿದೇಶದಲ್ಲಿ ಉದ್ಯೋಗವನ್ನು ಹುಡುಕುವುದಕ್ಕೆ ಹೇಳಿದ್ದೇನೆ, ಸಾಧ್ಯವಾದರೆ ಅಲ್ಲಿನ ಪೌರತ್ವವನ್ನು ತೆಗೆದುಕೊಳ್ಳಲು ಸಲಹೆ ನೀಡಿದ್ದೇನೆ," ಎಂದು ಕಾರ್ಯಕ್ರಮವೊಂದರಲ್ಲಿ ಆರ್‌ಜೆಡಿಯ ಹಿರಿಯ ನಾಯಕ ಅಬ್ದುಲ್ ಬಾರಿ ಸಿದ್ದಿಕಿ ಹೇಳಿಕೆ ನೀಡಿದ್ದರು.

ಮಕ್ಕಳಿಗೆ ನೀಡಿದ ಉತ್ತರದ ಬಗ್ಗೆ ಉಲ್ಲೇಖ:
ನೀವು ವಿದೇಶದಲ್ಲಿಯೇ ಬದುಕು ಕಟ್ಟಿಕೊಳ್ಳಿರಿ ಎಂದು ಹೇಳಿದ ಸಂದರ್ಭದಲ್ಲಿ ಮಕ್ಕಳು ಅಪನಂಬಿಕೆಯಿಂದ ಪ್ರತಿಕ್ರಿಯೆ ನೀಡಿದರು. ನಾನು ಭಾರತದಲ್ಲಿ ವಾಸವಿರುವ ಬಗ್ಗೆ ಅವರು ಪ್ರಶ್ನಿಸಿದರು. ಆಗ ನಿಮಗೆ ಇಲ್ಲಿ ಜೀವನ ನಿಭಾಯಿಸುವುದಕ್ಕೆ ಸಾಧ್ಯವಾಗದು ಎಂದು ನಾನು ಹೇಳಿದೆ," ಅಂತಾ ಮಾಜಿ ರಾಜ್ಯ ಸಚಿವ ಸಿದ್ದಿಕಿ ಹೇಳಿದರು.
ಪಾಕಿಸ್ತಾನಕ್ಕೆ ಹೋಗುವಂತೆ ಬಿಜೆಪಿ ಸಲಹೆ:
ಆರ್‌ಜೆಡಿ ನಾಯಕ ಅಬ್ದುಲ್ ಬಾರಿ ಸಿದ್ದಿಕಿ ನೀಡಿರುವ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಮುಸ್ಲಿಮರು ಮತ್ತು ಸರ್ಕಾರದ ವಿರುದ್ಧ ನೇರವಾಗಿ ಉಲ್ಲೇಖಿಸದೇ ಮಾಜಿ ಸಚಿವರ ಹೇಳಿಕೆಯನ್ನು ಖಂಡಿಸಿದ ಬಿಜೆಪಿಯ ಬಿಹಾರ ಘಟಕವು ಅವರು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಸೂಚಿಸಿದೆ. "ಸಿದ್ದಿಕಿ ಹೇಳಿಕೆಗಳು ಭಾರತ ವಿರೋಧಿಯಾಗಿದೆ. ಅವರು ತುಂಬಾ ಉಸಿರುಗಟ್ಟುತ್ತಿದ್ದರೆ, ಅವರು ರಾಜಕೀಯ ನಾಯಕರಾಗಿ ಇಲ್ಲಿ ಅನುಭವಿಸುತ್ತಿರುವ ಸವಲತ್ತುಗಳನ್ನು ತ್ಯಜಿಸಿ ಪಾಕಿಸ್ತಾನಕ್ಕೆ ಹೋಗಬೇಕು. ಯಾರೂ ಅವರನ್ನು ತಡೆಯುವುದಿಲ್ಲ," ಎಂದು ರಾಜ್ಯ ಬಿಜೆಪಿ ವಕ್ತಾರ ನಿಖಿಲ್ ಆನಂದ್ ಕಿಡಿ ಕಾರಿದರು.
"ಸಿದ್ಧಿಕಿ ಅವರು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಆಪ್ತ ಸಹಾಯಕರಾಗಿದ್ದಾರೆ. ಅವರ ಮಾತುಗಳು ಅವರ ಪಕ್ಷದ ಮುಸ್ಲಿಂ ತುಷ್ಟೀಕರಣದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ" ಎಂದು ಬಿಜೆಪಿ ನಾಯಕರು ಹೇಳಿದರು. ಇದರ ಮಧ್ಯೆ ಆರ್‌ಜೆಡಿ ನಾಯಕನ ಹೇಳಿಕೆಯನ್ನು ಮಿತ್ರಪಕ್ಷ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್) ಸಹ ಅನುಮೋದಿಸಿದೆ.












Click it and Unblock the Notifications