ಸಮೀಕ್ಷೆ ಪರೀಕ್ಷೆ: ಟುಡೇಸ್ ಚಾಣಕ್ಯ ಫಸ್ಟ್
ನವದೆಹಲಿ, ಮೇ.17 : ಮೇ.12 ಚುನಾವಣೆ ಮುಗಿದ ಮೇಲೆ ಎಲ್ಲರ ದೃಷ್ಟಿ ಚುನಾವಣೋತ್ತರ ಸಮೀಕ್ಷೆ ಮೇಲೆ ಬಿದ್ದಿತ್ತು. ಒಂದೊಂದು ವಾಹಿನಿಗಳು ಒಂದೊಂದು ಸಮೀಕ್ಷೆಗಳನ್ನು ಹೊರ ಹಾಕಿದ್ದವು. ಈ ಎಲ್ಲಾ ಸಮೀಕ್ಷೆಗಳಲ್ಲಿ ನಿಖರವಾದ ಸಮೀಕ್ಷೆಯನ್ನು ಪ್ರಕಟಿಸಿದ್ದು ಟುಡೇಸ್ ಚಾಣಕ್ಯ ಮಾತ್ರ.
ಉಳಿದ ಒಂಭತ್ತು ವಾಹಿನಿಗಳು ಎನ್‌ಡಿಎ ಬಹುಮತ ಪಡೆದು ಅಧಿಕಾರ ಪಡೆಯಲಿದೆ, ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಾರದು ಎಂದು ಹೇಳಿತ್ತು. ಆದರೆ ಎನ್‌ಡಿಎ ಬಹುಮತ ಪಡೆಯುತ್ತದೆ, ಬಿಜೆಪಿ ಸ್ವಂತ ಬಲದಿಂದಲೇ ಅಧಿಕಾರ ನಡೆಸುತ್ತದೆ ಎಂದು ಹೇಳಿದ ಏಕೈಕ ಸಮೀಕ್ಷೆ ಸಂಸ್ಥೆ ಚಾಣಕ್ಯ .

ಚಾಣಕ್ಯ ಏನು ಹೇಳಿತ್ತು?
ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 340 ಸ್ಥಾನ ಗಳಿಸಲಿದೆ ಎಂದು ಹೇಳಿದ್ದ ಚಾಣಕ್ಯ ಈ ಲೆಕ್ಕಾಚಾರದಲ್ಲಿ 14 ಸ್ಥಾನ ಹೆಚ್ಚಾಗಬಹುದು ಇಲ್ಲವೇ 14 ಸ್ಥಾನ ಕಡಿಮೆಯಾಗಬಹುದು ಎಂದು ಹೇಳಿತ್ತು. ಆದರೆ ಎನ್‌ಡಿಎ 337 ಸ್ಥಾನ ಗೆಲ್ಲುವ ಮೂಲಕ ಚಾಣಕ್ಯ ಸಮೀಕ್ಷೆ ನಿಜವಾಗಿದೆ.
ಬಿಜೆಪಿ ಈ ಬಾರಿ 291 ಸ್ಥಾನ ಗೆಲ್ಲುವ ಮೂಲಕ ಸ್ವಂತ ಬಲದಿಂದಲೇ ಅಧಿಕಾರ ಹಿಡಿಯುತ್ತದೆ ಎಂದು ಚಾಣಕ್ಯ ಹೇಳಿತ್ತು. ಈ ಲೆಕ್ಕಾಚಾರದಲ್ಲಿ 14 ಸ್ಥಾನ ಹೆಚ್ಚು ಕಡಿಮೆಯಾಗಬಹುದು ಎಂದು ಚಾಣಕ್ಯ ಹೇಳಿತ್ತು. ಆದರೆ ಅಂತಿಮ ಫಲಿತಾಂಶದಲ್ಲಿ ಬಿಜೆಪಿ 285 ಸ್ಥಾನ ಗೆಲ್ಲುವ ಮೂಲಕ ಚಾಣಕ್ಯ ಏನೋ ಹೇಳಿತ್ತು ಅದೇ ರೀತಿ ಫಲಿತಾಂಶ ಹೊರ ಬಿದ್ದಿದೆ.
ಕರ್ನಾಟಕದಲ್ಲಿ ಬಿಜೆಪಿ 20 ಸ್ಥಾನಗಳಿಸಲಿದೆ. ಈ ಲೆಕ್ಕಾಚಾರದಲ್ಲಿ 3 ಸ್ಥಾನ ಹೆಚ್ಚು ಕಡಿಮೆಯಾಗಬಹುದು ಎಂದು ಹೇಳಿತ್ತು. ಫಲಿತಾಂಶ ಪ್ರಕಟಗೊಂಡ ಬಳಿಕ ಚಾಣಕ್ಯ ಹೇಳಿದಂತೆ ಕರ್ನಾಟಕದಲ್ಲಿ ಬಿಜೆಪಿ 17 ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ.
ಟುಡೇಸ್ ಚಾಣಕ್ಯ ಇದೇ ರೀತಿಯಾಗಿ ನಿಖರವಾದ ಸಮೀಕ್ಷಾ ಫಲಿತಾಂಶ ನೀಡುವುದು ಇದೇ ಮೊದಲಲ್ಲ. ಈ ಹಿಂದೆ 2013ರಲ್ಲಿ ನಡೆದ ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಉಳಿದ ಸಂಸ್ಥೆಗಳು ನೀಡಿದ ಸಮೀಕ್ಷೆಗಿಂತ ವಿಭಿನ್ನವಾದ ಸಮೀಕ್ಷೆಯನ್ನು ಪ್ರಕಟಿಸಿತ್ತು. ಈ ಚುನಾವಣೆಯಲ್ಲಿ ಟುಡೇಸ್ ಚಾಣಕ್ಯ ಸಮೀಕ್ಷೆ ಹೆಚ್ಚು ಕಡಿಮೆ ನಿಖರವಾಗಿತ್ತು.
ವಿ.ಕೆ.ಬಜಾಜ್ 1995ರಲ್ಲಿ ಸ್ಥಾಪಿಸಿದ 'ಟುಡೇಸ್ ಚಾಣಕ್ಯ' ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವ ಸಂಸ್ಥೆಯಾಗಿದ್ದು ರಾಜಕೀಯ, ಅರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸುತ್ತಿದೆ. 'ನಿಖರತೆಯಲ್ಲಿ ಸದಾ ನಾವೇ ಮೊದಲು' ಎನ್ನುವ ಟ್ಯಾಗ್ ಲೈನ್‌ನ್ನು ಚಾಣಕ್ಯ ತನ್ನೊಂದಿಗೆ ಸೇರಿಸಿಕೊಂಡಿದೆ.












Click it and Unblock the Notifications