Tirupati Darshan: ತಿರುಪತಿ ತಿಮ್ಮಪ್ಪನ ಗರ್ಭಗುಡಿ 6 ತಿಂಗಳು ಮುಚ್ಚಲ್ಲ- ಮುಖ್ಯ ಅರ್ಚಕ ಹೇಳಿದ್ದೇನು?
ತಿರುಪತಿ, ಡಿಸೆಂಬರ್ 31: ಜಗತ್ಪ್ರಸಿದ್ಧ ತಿರುಪತಿ ತಿಮ್ಮಪ್ಪನ ಗರ್ಭಗುಡಿ ಮುಂದಿನ ಆರು ತಿಂಗಳವರೆಗೆ ಮುಚ್ಚಲಿದೆ ಎಂದು ವರದಿಯಾಗಿತ್ತು. ಇದು ಭಕ್ತರ ಬೇಸರಕ್ಕೆ ಕಾರಣವಾಗಿತ್ತು. ಆದರೆ, ಈಗ ಖುಷಿಯ ಸುದ್ದಿಯೊಂದು ಭಕ್ತರಿಗೆ ಸಿಕ್ಕಿದೆ. ಮುಂದಿನ ಆರು ತಿಂಗಳು ತಿರುಪತಿ ತಿಮ್ಮಪ್ಪನ ಗರ್ಭಗುಡಿ ಮುಚ್ಚುವುದಿಲ್ಲವೆಂದು ಮುಖ್ಯ ಅರ್ಚಕರೇ ಸ್ಪಷ್ಟನೆ ನೀಡಿದ್ದಾರೆ.
ತಿರುಪತಿ ತಿಮ್ಮಪ್ಪನ ದೇವಸ್ಥಾನದ ಮುಖ್ಯ ಅರ್ಚಕರಲ್ಲಿ ಒಬ್ಬರಾದ ವೇಣುಗೋಪಾಲ ದೀಕ್ಷಿತುಲು ಅವರು ಈ ಕುರಿತು ಹೇಳಿಕೆ ನೀಡಿದ್ದಾರೆ.
'ತಿಮ್ಮಪ್ಪನ ಗುರ್ಭಗುಡಿಯ ಮೂರು ಅಂತಸ್ತಿನ ಗೋಪುರಕ್ಕೆ ಚಿನ್ನದ ಲೇಪನ ಕಾರ್ಯ ನಡೆಯಲಿದೆ. ಈ ಕಾರ್ಯ ನಡೆಯುತ್ತಿರುವಾಗಲೂ, ಭಕ್ತರ ತಿಮ್ಮಪ್ಪನ ಮೂಲ ವಿರಾಟ್ ಮೂರ್ತಿಯ ದರ್ಶನ ಪಡೆಯಬಹುದು ಅದಕ್ಕೆ ನಾವು ವ್ಯವಸ್ಥೆಯನ್ನು ಮಾಡುತ್ತಿದ್ದೇವೆ' ಎಂದು ದೀಕ್ಷಿತುಲು ತಿಳಿಸಿದ್ದಾರೆ.

'ಚಿನ್ನದ ಲೇಪನವಿರುವ ತಗಡುಗಳನ್ನು ಅಳವಡಿಸಿದಾಗ ಗರ್ಭಗುಡಿಗೆ ಪರ್ಯಾಯವಾಗಿ ಬಾಲಾಲಯವನ್ನು ನಿರ್ಮಿಸಲಾಗುವುದು. ವಿರಾಟ್ ಮೂರ್ತಿಯನ್ನು ಈ ಬಾಲಾಲಯದೊಳಗೆ ಇರಿಸಲಾಗುವುದು. ಮೂಲ ಗರ್ಭಗುಡಿಯಲ್ಲಿ ಅನುಸರಿಸುವ ನಿಯಮಗಳನ್ನೇ ಇಲ್ಲಿಯೂ ಅನುಸರಿಸಲಾಗುವುದು' ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ 1958 ಹಾಗೂ 1918ರಲ್ಲಿ ಆನಂದ ನಿಲಯಕ್ಕೆ ಚಿನ್ನದ ಲೇಪನ ಮಾಡಲಾಗಿತ್ತು. ಆ ಸಮಯದಲ್ಲಿಯೂ ಬಾಲಾಲಯವನ್ನು ನಿರ್ಮಿಸಲಾಗಿತ್ತು ಎಂದು ಅರ್ಚಕ ತಿಳಿಸಿದ್ದಾರೆ.
ಹೊಸದಾಗಿ ನಿರ್ಮಿಸಲಾದ ಬಾಲಾಲಯದಲ್ಲಿ ಹಳೆಯ ಶುಲ್ಕ ಸೇವೆಗಳೇ ಇರಲಿವೆ. ಈ ಸಮಯದಲ್ಲಿ ನಡೆಯುವ ಕಲ್ಯಾಣ ಉತ್ಸವ ಸೇರಿದಂತೆ ಹಲವು ಶುಲ್ಕ ಸೇವೆಗಳಲ್ಲಿ ಬದಲಾವಣೆ ಆಗುವುದಿಲ್ಲ ಎಂದು ದೇವಸ್ಥಾನದ ಮಂಡಳಿ ಮಾಹಿತಿ ನೀಡಿದೆ.
ತಿರುಮಲ ತಿಮ್ಮಪ್ಪನ ದೇವಸ್ಥಾನದ ಗೋಪುರವು ಮೂರು ಅಂತಸ್ತಿನ ರಚನೆಯಾಗಿದ್ದು, ಅದರ ಚೌಕದ ತಳವು 27.4 ಅಡಿ ಮತ್ತು ಪರಿಧಿಯು 37.8 ಅಡಿ ಎತ್ತರವಿದೆ. ಮೊದಲ ಎರಡು ಹಂತಗಳು ಆಯತಾಕಾರದಲ್ಲಿವೆ ಮತ್ತು ಮೂರನೆಯ ಹಂತವು ವೃತ್ತಾಕಾರದಲ್ಲಿದೆ ಎಂದು ತಿಳಿದುಬಂದಿದೆ.
ಈ ಮೂರು ಅಂತಸ್ತಿನ ಗೋಪುರದ ಚಿನ್ನದ ಲೇಪನಕ್ಕಾಗಿ ಸುಮಾರು 12,000 ತೊಲ ಶುದ್ಧ ಚಿನ್ನ ಮತ್ತು 12 ಟನ್ ತಾಮ್ರವನ್ನು ಈ ಮಾಡಿದ ಲೇಪನದಲ್ಲಿ ಬಳಸಲಾಗಿದೆ ಎಂದು ಟಿಟಿಡಿ ಮಾಹಿತಿ ನೀಡಿತ್ತು.
ಏಳು ಮಲೆಗಳಲ್ಲಿರುವ ತಿರುಪತಿ ತಿಮ್ಮಪ್ಪ ದೇವಾಲಯ ಸೇರಿದಂತೆ ಇತರೆ ದೇಗುಲಗಳ ನಿರ್ವಹಣೆಗಾಗಿ ಟಿಟಿಡಿಯನ್ನು 1932ರಲ್ಲಿ ಸ್ಥಾಪಿಸಲಾಗಿದೆ.
ಸರಿಸುಮಾರು ಆರು ದಶಕಗಳಿಂದ ಸಾವಿರಾರು ಚಿನ್ನ ಹಾಗೂ ತಾಮ್ರದ ಲೋಹವನ್ನು ಹೊತ್ತುಕೊಂಡಿರುವ ಮೂರು ಅಂತಸ್ತಿನ ಗೋಪುರದ ಒಳಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ.












Click it and Unblock the Notifications