Tirupati Prasada: ತಿರುಮಲ ಶ್ರೀವಾರಿ ಅನ್ನಪ್ರಸಾದದಲ್ಲಿ ಜರಿ ಹುಳ ಪತ್ತೆ: ಭಕ್ತರ ಆರೋಪ ಸುಳ್ಳು ಎಂದು ಟಿಟಿಡಿ!
ತಿರುಮಲ ಲಡ್ಡು ತಯಾರಿಕೆಯ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂಬ ಆರೋಪ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವುದು ಗೊತ್ತೇ ಇದೆ. ಕೋಟ್ಯಂತರ ಭಕ್ತರ ಭಾವನೆಗಳಿಗೆ ಸಂಬಂಧಿಸಿದ ಈ ವಿಷಯ ಸದ್ಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಸುಪ್ರೀಂ ಕೋರ್ಟ್ ಕೂಡ ಈ ವಿಚಾರದಲ್ಲಿ ಸ್ವತಂತ್ರ ಪೀಠ ರಚನೆಗೆ ಆದೇಶಿಸಿದೆ. ಆದರೆ ದೇಶಾದ್ಯಂತ ಈ ವಿವಾದ ಚರ್ಚೆಯಾಗುತ್ತಿರುವ ಹೊತ್ತಿನಲ್ಲಿ ತಿರುಮಲ ಅನ್ನಪ್ರಸಾದದಲ್ಲಿ ಜರಿ ಹುಳ ಕಾಣಿಸಿಕೊಂಡಿರುವ ಸುದ್ದಿ ಸಂಚಲನ ಮೂಡಿಸುತ್ತಿದೆ.
ತಿರುಮಲದ ಟಿಟಿಡಿ ಮಾಧವ ನಿಲಯಂ ಅನ್ನದಾನ ಕೇಂದ್ರದಲ್ಲಿ ಭಕ್ತರೊಬ್ಬರ ತಟ್ಟೆಯಲ್ಲಿ ಜರಿ ಹುಳ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ವಾರಂಗಲ್‌ನ ಕೆಲ ಭಕ್ತರು ಈ ರೀತಿ ಆರೋಪ ಮಾಡುತ್ತಿದ್ದಾರೆ. ಹೌದು.. ಶ್ರೀವಾರಿ ಭಕ್ತರಾದ ವಾರಂಗಲ್‌ನ ಚಂದು ಎಂಬುವವರು ಈ ಆರೋಪ ಮಾಡಿದ್ದಾರೆ.

ವಾರಂಗಲ್‌ನಿಂದ ಕೆಲವು ಭಕ್ತರು ಶ್ರೀವಾರಿಯ ದರ್ಶನಕ್ಕಾಗಿ ಶನಿವಾರ ತಿರುಮಲಕ್ಕೆ ಆಗಮಿಸಿದ್ದರು. ಭಗವಂತನಿಗೆ ಹರಕೆಯನ್ನು ತೀರಿಸಿದ ಬಳಿಕ ಪ್ರಸಾದ ಸೇವಿಸಲು ತೆರಳಿದ್ದರು. ಮಧ್ಯಾಹ್ನ 1:30ರ ಸುಮಾರಿಗೆ ಮಾಧವ ನಿಲಯ-2 ಅನ್ನದಾನ ಕೇಂದ್ರದಲ್ಲಿ ಊಟ ಮಾಡುತ್ತಿದ್ದಾಗ ಶ್ರೀವಾರಿ ಅನ್ನಪ್ರಸಾದದಲ್ಲಿ ಜರಿ ಹುಳ ಕಾಣಿಸಿಕೊಂಡಿದೆ ಎನ್ನಲಾಗಿದೆ. ಟಿಟಿಡಿ ಸಿಬ್ಬಂದಿ ಬಡಿಸಿದ ಮೊಸರಿನಲ್ಲಿ ಜರಿ ಹುಳ ಕಾಣಿಸಿಕೊಂಡಿದ್ದು.. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ರೆಕಾರ್ಡ್ ಮಾಡಿದ್ದಾರೆ ಭಕ್ತರು.
ಆದರೆ ಅನ್ನಪ್ರಸಾದದಲ್ಲಿ ಜರಿ ಹುಳ ಕಾಣಿಸಿಕೊಂಡಿರುವ ಬಗ್ಗೆ ಟಿಟಿಡಿ ಸಿಬ್ಬಂದಿಗೆ ದೂರು ನೀಡಿದರೆ ಗಮನ ಹರಿಸಿಲ್ಲ ಎಂದು ವಾರಂಗಲ್‌ನ ಚಂದು ಎಂಬ ಭಕ್ತ ಆರೋಪಿಸಿದ್ದಾರೆ. ಜರಿ ಹುಳ ಕಾಣಿಸಿಕೊಂಡ ವೀಡಿಯೊವನ್ನು ತೋರಿಸಿದ ನಂತರ ಅಧಿಕಾರಿಗಳು ಬಂದರು. ಆಗ ಅವರು ಅನ್ನ ಪ್ರಸಾದದಲ್ಲಿ ಜರಿ ಹುಳ ಬಂದಿಲ್ಲ, ಬಾಳೆ ಎಲೆಯಲ್ಲಿ ಬಂದಿದೆ ಎಂದು ಹೇಳಿದ್ದಾರೆ ಎಂದು ಚಂದು ಹೇಳಿದರು.
ಬಳಿಕ ಅವರು ತಿರುಪತಿಯ ಅನ್ನಪ್ರಸಾದದ ಗುಣಮಟ್ಟದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರ, ವ್ಯವಸ್ಥೆ ಬದಲಾದರೂ ತಿರುಮಲದ ಪರಿಸ್ಥಿತಿ ಬದಲಾಗಿದೆಯೇ ಎಂದು ಭಕ್ತರು ಪ್ರಶ್ನಿಸಿದ್ದಾರೆ. ಜರಿ ಹುಳ ಬಗ್ಗೆ ಕೇಳಿದಾಗ ಅಲ್ಲಿನ ಸಿಬ್ಬಂದಿಗಳು ಬಿಟ್ಟುಬಿಡಿ ಅಂದರೇ ಹೊರತು ಮತ್ತೆ ಗಮನ ಹರಿಸಲಿಲ್ಲ ಎಂದು ಆರೋಪಿಸಿದ್ದಾರೆ.

ಹೀಗಾಗಿ ಸರಕಾರ ಮತ್ತು ಟಿಟಿಡಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ. ಬಳಿಕ ಅವರು ಈ ವಿಡಿಯೋವನ್ನು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡಿದ್ದಾರೆ.
ತಿರುಮಲ ಅನ್ನಪ್ರಸಾದದಲ್ಲಿ ಜರಿ ಹುಳ- ಟಿಟಿಡಿ ಸ್ಪಷ್ಟನೆ
ಅನ್ನ ಪ್ರಸಾದದಲ್ಲಿ ಜರಿ ಹುಳ ಬಿದ್ದ ಕಥೆ ಸಂಪೂರ್ಣ ಸುಳ್ಳು ಎಂದು ಟಿಟಿಡಿ ಹೇಳಿದೆ. ಮಾಧವ ನಿಲಯದಲ್ಲಿ ಜರಿ ಹುಳ ಅನ್ನಪ್ರಸಾದದಲ್ಲಿ ಸಿಕ್ಕಿದೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಎಂದಿದೆ. ಶ್ರೀವಾರಿಯ ದರ್ಶನಕ್ಕೆ ಬರುವ ಸಾವಿರಾರು ಭಕ್ತರಿಗೆ ಅನ್ನಪ್ರಸಾದವನ್ನು ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಿ ಕೊಡುತ್ತೇವೆ. ಅನ್ನಕ್ಕೆ ಮೊಸರು ಹಾಕಬೇಕೆಂದರೆ.. ಮೊದಲು ಕಾಯಿಸಿದ ಅನ್ನವನ್ನು ಬಡಿಸಿ.. ನಂತರ ಅನ್ನದ ಮಧ್ಯೆ ಮೊಸರು ಬಡಿಸುತ್ತೇವೆ.
ಹೀಗಿರುವಾಗ ಜರಿ ಹಾಗೇ ಇರಲು ಹೇಗೆ ಸಾಧ್ಯ ಎಂದು ಟಿಟಿಡಿ ಪ್ರಶ್ನಿಸಿದೆ. ಇದೆಲ್ಲವೂ ಉದ್ದೇಶಪೂರ್ವಕವಾಗಿ ನಡೆದಿದೆ ಎಂಬ ಭಾವನೆ ಮೂಡುತ್ತಿದೆ ಎಂದು ಟಿಟಿಡಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಇಂತಹ ಸುದ್ದಿಗಳನ್ನು ನಂಬಬೇಡಿ ಎಂದು ಭಕ್ತರಿಗೆ ಮನವಿ ಮಾಡಿದೆ.












Click it and Unblock the Notifications