
ಈ ದಿನಾಂಕಗಳಲ್ಲಿ ತಿರುಪತಿ ತಿರುಮಲ ದೇಗುಲ ಬಂದ್!
ತಿರುಮಲ, ಆಕ್ಟೋಬರ್ 12: ಅತ್ಯಂತ ಶ್ರೀಮಂತ ದೇಗುಲ ಅಕ್ಟೋಬರ್ ಕೊನೆ ವಾರದಲ್ಲಿ ಒಂದು ದಿನ ಹಾಗೂ ನವೆಂಬರ್ ತಿಂಗಳಲ್ಲಿ ಅರ್ಧದಿನದ ಮಟ್ಟಿಗೆ ಬಂದ್ ಆಗಲಿದೆ. ಗ್ರಹಣದ ಕಾರಣದಿಂದ ಅಕ್ಟೋಬರ್ 25 ಹಾಗೂ ನವೆಂಬರ್ 8ರಂದು 12 ಗಂಟೆಗಳ ಕಾಲ ದೇಗುಲವು ಭಕ್ತರ ಪಾಲಿಗೆ ತೆರೆದಿರುವುದಿಲ್ಲ.
ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಭಕ್ತರು ಈ ಎರಡು ದಿನಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಅವಧಿ ಕಾಯಬೇಕಾಗುತ್ತದೆ. ಅಕ್ಟೋಬರ್ 25ರಂದು ಸೂರ್ಯಗ್ರಹಣ ಹಾಗೂ ನವೆಂಬರ್ 8ರಂದು ಚಂದ್ರಗ್ರಹಣ ಸಂಭವಿಸಲಿದೆ. ಗ್ರಹಣ ಮೋಕ್ಷಕಾಲ ಹಾಗೂ ಶುದ್ಧೀಕರಣ ಕಾರ್ಯ ಮುಕ್ತಾಯವಾಗುವ ತನಕ ಏಳುಬೆಟ್ಟದ ಒಡೆಯನನ್ನು ಭಕ್ತರು ಕಣ್ತುಂಬಿಕೊಳ್ಳಲು ಸಾಧ್ಯವಿಲ್ಲ ಎಂದು ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿ(ಟಿಟಿಡಿ) ಪ್ರಕಟಣೆಯಲ್ಲಿ ತಿಳಿಸಿದೆ.
ಯಾವ ಅವಧಿಯಲ್ಲಿ ದರ್ಶನ ಅಲಭ್ಯ?
ಸೂರ್ಯಗ್ರಹಣದ ಸಂದರ್ಭದಲ್ಲಿ ಬೆಳಗ್ಗೆ 8:11ರಿಂದ ರಾತ್ರಿ 7:30PM ತನಕ ದೇಗುಲದೊಳಗೆ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ನಂತರ ತಮ್ಮ ಪೂಜೆ, ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಟಿಟಿಡಿ ಹೇಳಿದೆ.

ಇದೇ ರೀತಿ ನವೆಂಬರ್ 8ರಂದು ಚಂದ್ರಗ್ರಹಣ ಸಂಭವಿಸಲಿದ್ದು, ಅಂದು ಬೆಳಗ್ಗೆ 8:40 ಬೆಳಗ್ಗೆಯಿಂದ 7:20 PM ಅವಧಿಯಲ್ಲಿ ದೇಗುಲಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಕಲ್ಯಾಣೋತ್ಸವ ಸೇರಿದಂತೆ ಎಲ್ಲಾ ವಿಶೇಷ ಸೇವೆ ಪೂಜೆಗಳು ಕೂಡಾ ನಡೆಸುವುದಿಲ್ಲ. ಗ್ರಹಣದ ದಿನಾಂಕದ ಎರಡು ದಿನಗಳ ಹಿಂದೆ ಮುಂದೆ ಯಾವುದೇ ವಿಶೇಷ ಸೇವೆ ಇರುವುದಿಲ್ಲ ಎಂದು ಟಿಟಿಡಿ ತಿಳಿಸಿದೆ.