Tirumala Hundi Collections : ಏಕಾದಶಿಗೆ ತಿಮ್ಮಪ್ಪನ ಹುಂಡಿಗೆ ಬಿದ್ದ ಹಣವೆಷ್ಟು?
ಅಮರಾವತಿ, ಜನವರಿ 4: ಪವಿತ್ರ ವೈಕುಂಠ ಏಕಾದಶಿಯಂದು ತಿರುಮಲ ಬೆಟ್ಟದ ಮೇಲೆ ಭಕ್ತರ ಸಾಗರವು ವೆಂಕಟೇಶ್ವರ ದೇವರಿಗೆ ತಮ್ಮ ಕಾಣಿಕೆಯಾಗಿ 7.68 ಕೋಟಿ ರೂಪಾಯಿಗಳನ್ನು ಹಾಕಿದೆ. ಒಂದೇ ದಿನದಲ್ಲಿ ಅತಿ ಹೆಚ್ಚು ಹುಂಡಿ ಸಂಗ್ರಹದ ತನ್ನದೇ ಹಿಂದಿನ ದಾಖಲೆಯನ್ನು ತಿರುಪತಿ ಮುರಿದಿದೆ.
ಹಿಂದಿನ ದಾಖಲೆಯು ರೂ 6.31 ಕೋಟಿಯಾಗಿದ್ದು, ಕಳೆದ ವರ್ಷ ಅಕ್ಟೋಬರ್ 23ರಂದು ಎಣಿಕೆ ಮಾಡಲಾಗಿದೆ ಎಂದು ಟಿಟಿಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಟ್ಟು 69,414 ಯಾತ್ರಾರ್ಥಿಗಳು ತಿರುಪತಿ ದರ್ಶನವನ್ನು ಪಡೆದಿದ್ದಾರೆ ಎಂದು ಡಿಎಚ್ ವರದಿ ಮಾಡಿದೆ.
ಉತ್ತರ-ದ್ವಾರಂ (ಉತ್ತರ ಪ್ರವೇಶ) ಮೂಲಕ ಪವಿತ್ರ ಗರ್ಭಗುಡಿಯನ್ನು ಭಕ್ತರು ಪ್ರವೇಶಿಸಿದ್ದಾರೆ. ಹೆಚ್ಚು ಬೇಡಿಕೆಯಿರುವ ವೈಕುಂಠ ಏಕಾದಶಿಯಂದು ವರ್ಷಕ್ಕೊಮ್ಮೆ ನಡೆಯುವ ಕಾರ್ಯಕ್ರಮದ ಸಮಯದಲ್ಲಿ ಭಕ್ತರು ಮಂತ್ರಿಗಳು, ರಾಜ್ಯಪಾಲರು, ನ್ಯಾಯಾಧೀಶರು, ಉದ್ಯಮಿಗಳು ಮತ್ತು ಹಲವಾರು ರಾಜ್ಯಗಳ ಗಣ್ಯರು ತಿರುಪತಿಗೆ ಭೇಟಿ ನೀಡಿದ್ದಾರೆ.

ಬಾಲಾಜಿ ದೇವಸ್ಥಾನದಲ್ಲಿ ಉತ್ತರ ದ್ವಾರ ದರ್ಶನವನ್ನು ಸಾಂಪ್ರದಾಯಿಕವಾಗಿ ವೈಕುಂಠ ಏಕಾದಶಿ ಮತ್ತು ಮುಂದಿನ ದ್ವಾದಶಿ ದಿನದಂದು ಮಾತ್ರ ನಡೆಯುತ್ತದೆ. ಆದಾಗ್ಯೂ, ತಿರುಮಲ ತಿರುಪತಿ ದೇವಸ್ಥಾನದ ಮಂಡಳಿಯು ಡಿಸೆಂಬರ್ 2020ರಿಂದ ಗರಿಷ್ಠ ಸಂಖ್ಯೆಯ ಭಕ್ತರಿಗೆ ವೈಕುಂಠ ದ್ವಾರ ದರ್ಶನಕ್ಕೆ ಅನುಕೂಲವಾಗುವಂತೆ ಈ ವರ್ಷ ಇದು ಜನವರಿ 2ರಿಂದ 11 ರವರೆಗೆ ತಾತ್ಕಾಲಿಕ ಪ್ರವೇಶವನ್ನು 10 ದಿನಗಳವರೆಗೆ ತೆರೆಯಲು ನಿರ್ಧರಿಸಿದೆ.
10 ದಿನಗಳ ಕಾಲ ವಿಶೇಷ ಪ್ರವೇಶಕ್ಕೆ ಬಾಗಿಲು ತೆರೆಯುವ ಟಿಟಿಡಿ ಮಂಡಳಿಯ ನಿರ್ಧಾರವು ದಿನಕ್ಕೆ 80,000 ಭಕ್ತರಿಗೆ ದರ್ಶನವನ್ನು ಸುಗಮಗೊಳಿಸುತ್ತದೆ. ಅಂದರೆ, ಜನವರಿ 11 ರೊಳಗೆ ಒಟ್ಟು ಎಂಟು ಲಕ್ಷ ಭಕ್ತರಿಗೆ ದರ್ಶನಕ್ಕೆ ಅನುಕೂಲ ಕಲ್ಪಿಸುತ್ತದೆ ಎಂದು ಟಿಟಿಡಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೆಚ್ಚಿನ ಸಂಖ್ಯೆಯ ಸಾಮಾನ್ಯ ಭಕ್ತರಿಗೆ ವೈಕುಂಠ ದ್ವಾರ ದರ್ಶನಕ್ಕೆ ಅನುಕೂಲವಾಗುವಂತೆ, 10 ದಿನಗಳ ಅವಧಿಗೆ ಭೇಟಿ ನೀಡುವ ಭಕ್ತರಿಗೆ ದರ್ಶನದ ಟೋಕನ್‌ಗಳನ್ನು ನೀಡಲು ಟಿಟಿಡಿ ಒಂಬತ್ತು ಸ್ಥಳಗಳಲ್ಲಿ 90ಕ್ಕೂ ಹೆಚ್ಚು ಕೌಂಟರ್‌ಗಳನ್ನು ಸ್ಥಾಪಿಸಿದೆ. ಉತ್ಸವದ ಮೊದಲ ಎರಡು ದಿನಗಳ 90,000 ಎಸ್‌ಎಸ್‌ಡಿ ಟೋಕನ್‌ಗಳನ್ನು ಶನಿವಾರ ಕೌಂಟರ್‌ಗಳು ತೆರೆದ ಕೆಲವೇ ಗಂಟೆಗಳಲ್ಲಿ ಭಕ್ತರು ಪಡೆದುಕೊಂಡರೆ, ಜನವರಿ 5 ರವರೆಗಿನ ಎಸ್‌ಎಸ್‌ಡಿ ಟೋಕನ್‌ಗಳ ಕೋಟಾವನ್ನು ಭಾನುವಾರ ಸಂಜೆಯೊಳಗೆ ಭಕ್ತರು ಸಂಪೂರ್ಣವಾಗಿ ಬುಕ್ ಮಾಡಿದ್ದರು.
ವೈಕುಂಠ ದ್ವಾರ ದರ್ಶನಕ್ಕಾಗಿ ಸಾಮಾನ್ಯ ಭಕ್ತರಿಗೆ ಸಂಪೂರ್ಣವಾಗಿ ಕಾಯ್ದಿರಿಸುವವರೆಗೆ ಈ ಕೌಂಟರ್‌ಗಳಲ್ಲಿ ಟಿಕೆಟ್ ವಿತರಣೆ ನಿರಂತರವಾಗಿ ಮುಂದುವರಿಯುತ್ತದೆ ಎಂದು ಟಿಟಿಡಿ ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಟಿಟಿಡಿ ಇಒ (ಎಫ್‌ಎಸಿ) ಅನಿಲ್ ಕುಮಾರ್ ಸಿಂಘಾಲ್ ಅವರು ದಿನವಿಡೀ ಟಿಕೆಟ್ ವಿತರಣೆ ಪ್ರಕ್ರಿಯೆಯನ್ನು ಖುದ್ದಾಗಿ ಮೇಲ್ವಿಚಾರಣೆ ಮಾಡಿದರು. ತಮ್ಮ ಎಸ್‌ಎಸ್‌ಡಿ ಟೋಕನ್‌ಗಳನ್ನು ಕಾಯ್ದಿರಿಸಲು ಪ್ರಯತ್ನಿಸುವಾಗ ಭಕ್ತರಿಗೆ ಯಾವುದೇ ರೀತಿಯ ಅನಾನುಕೂಲತೆ ಉಂಟಾಗದಂತೆ ನೋಡಿಕೊಳ್ಳಲು ದೇವಸ್ಥಾನದ ಆಡಳಿತದ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.












Click it and Unblock the Notifications