'ರೊಮ್ಯಾನ್ಸ್ ಸ್ಕ್ಯಾಮ್' ಬಗ್ಗೆ ಇರಲಿ ಎಚ್ಚರ: ಡೇಟಿಂಗ್ ಆ್ಯಪ್ ವಂಚನೆ ತಡೆಯಲು ಕೇಂದ್ರದ ಜೊತೆ ಕೈ ಜೋಡಿಸಿದ ಟಿಂಡರ್
ನವದೆಹಲಿ: ಪ್ರೀತಿ, ಪ್ರೇಮದ ಹೆಸರಿನಲ್ಲಿ ಆನ್‌ಲೈನ್ ಮೂಲಕ ನಡೆಯುವ ವಂಚನೆಗಳು ಇತ್ತೀಚೆಗೆ ಮಿತಿಮೀರುತ್ತಿವೆ. ಡೇಟಿಂಗ್ ಆ್ಯಪ್‌ಗಳಲ್ಲಿ ಪರಿಚಯವಾಗಿ, ನಂಬಿಕೆ ದ್ರೋಹ ಮಾಡುವ ರೊಮ್ಯಾನ್ಸ್ ಸ್ಕ್ಯಾಮ್ ಪ್ರಕರಣಗಳಿಗೆ ಬ್ರೇಕ್ ಹಾಕಲು ಇದೀಗ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಆನ್‌ಲೈನ್ ವಂಚನೆಗಳನ್ನ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಸೈಬರ್ ಕ್ರೈಮ್ ಸಮನ್ವಯ ಕೇಂದ್ರ (I4C) ಹಾಗೂ ಪ್ರಮುಖ ಡೇಟಿಂಗ್ ಆ್ಯಪ್‌ಗಳ ಮಾತೃಸಂಸ್ಥೆಯಾದ ಮ್ಯಾಚ್ ಗ್ರೂಪ್ ಜಂಟಿ ಅಭಿಯಾನವನ್ನ ಶುರುಮಾಡಿವೆ.

ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಎರಡನೇ ಆವೃತ್ತಿಯ 'ಟ್ರಸ್ಟ್ ಅಂಡ್ ಸೇಫ್ಟಿ ಫೆಸ್ಟಿವಲ್' ಕಾರ್ಯಕ್ರಮದಲ್ಲಿ ಈ ಮಹತ್ವದ ಒಪ್ಪಂದದ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗಿದೆ. ಟಿಂಡರ್ , ಹಿಂಜ್ (Hinge) ಮತ್ತು ದ ಲೀಗ್‌ನಂತಹ ಜನಪ್ರಿಯ ಡೇಟಿಂಗ್ ಆ್ಯಪ್‌ಗಳನ್ನ ಮುನ್ನಡೆಸುತ್ತಿರುವ ಮ್ಯಾಚ್ ಗ್ರೂಪ್, ಕೇಂದ್ರದ ಐಫೋರ್‌ಸಿ (I4C) ಜೊತೆ ಸೇರಿ ಆನ್‌ಲೈನ್ ವಂಚಕರ ತಂತ್ರಗಳನ್ನು ಮಟ್ಟಹಾಕಲು ಮತ್ತು ಸೈಬರ್ ವಂಚನೆಗಳ ಬಗ್ಗೆ ಬಳಕೆದಾರರಲ್ಲಿ ಜಾಗೃತಿ ಮೂಡಿಸಲು ಸಜ್ಜಾಗಿದೆ.
ಆನ್‌ಲೈನ್ ಡೇಟಿಂಗ್ ವಂಚನೆ: ಬಳಕೆದಾರರು ವಹಿಸಬೇಕಾದ ಮುನ್ನೆಚ್ಚರಿಕೆಗಳೇನು?
ಡೇಟಿಂಗ್ ಆ್ಯಪ್‌ಗಳಲ್ಲಿ ಪರಿಚಯವಾಗುವ ವಂಚಕರು, ಆರಂಭದಲ್ಲಿ ಅತ್ಯಂತ ಮಧುರವಾಗಿ ಮಾತನಾಡಿ ನಂಬಿಕೆ ಗಳಿಸುತ್ತಾರೆ. ಆ ನಂತರವಷ್ಟೇ ಹಣ ಅಥವಾ ವೈಯಕ್ತಿಕ ಮಾಹಿತಿಯನ್ನು ಕದಿಯಲು ಯತ್ನಿಸುತ್ತಾರೆ.
ಹೀಗಾಗಿ, ಆನ್‌ಲೈನ್‌ನಲ್ಲಿ ಪರಿಚಯವಾದ ವ್ಯಕ್ತಿಗಳು ಡೇಟಿಂಗ್ ಆ್ಯಪ್ ಬಿಟ್ಟು ತಕ್ಷಣವೇ ವಾಟ್ಸಾಪ್ ಅಥವಾ ಬೇರೆ ಮೆಸೇಜಿಂಗ್ ಆ್ಯಪ್‌ಗಳಿಗೆ ಬರಲು ಒತ್ತಾಯಿಸಿದರೆ, ಹಾಗೂ ವಿಡಿಯೋ ಕರೆ ಮಾಡಲು ಅಥವಾ ಖುದ್ದಾಗಿ ಭೇಟಿಯಾಗಲು ನಿರಾಕರಿಸಿದರೆ ನೀವು ತಕ್ಷಣವೇ ಎಚ್ಚೆತ್ತುಕೊಳ್ಳಬೇಕು.
ಎದುರಿಗಿರುವ ವ್ಯಕ್ತಿ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರೊಫೈಲ್ ವೆರಿಫಿಕೇಶನ್ ಚೆಕ್ ಮಾಡುವುದು ಬಹಳ ಮುಖ್ಯ. ಹೊಸದಾಗಿ ಪರಿಚಯವಾದ ವ್ಯಕ್ತಿಗಳು ದಿಢೀರನೆ ಕ್ರಿಪ್ಟೋಕರೆನ್ಸಿ ಅಥವಾ ಷೇರುಪೇಟೆ ಹೂಡಿಕೆಯ ಬಗ್ಗೆ ಸಲಹೆ ನೀಡಿದರೆ, ಅಧಿಕ ಲಾಭದ ಆಮಿಷವೊಡ್ಡಿದರೆ ಅಂಥವರನ್ನ ಕೂಡಲೇ ನಿರ್ಲಕ್ಷಿಸಬೇಕು.
ವೀಸಾ ಶುಲ್ಕ, ವೈದ್ಯಕೀಯ ಖರ್ಚು ಅಥವಾ ತುರ್ತು ಪ್ರಯಾಣದ ನೆಪವೊಡ್ಡಿ ಹಣ ಕೇಳಿದರೆ ಯಾವುದೇ ಕಾರಣಕ್ಕೂ ಹಣ ಅಥವಾ ಗಿಫ್ಟ್ ಕಾರ್ಡ್‌ಗಳನ್ನ ಕಳುಹಿಸಬಾರದು. ವಂಚಕರು ತಿಂಗಳುಗಟ್ಟಲೆ ನಂಬಿಕೆ ಗಳಿಸಿ ನಂತರ ವಂಚಿಸುವ ಕಾರಣ, ಹೊಸ ಪರಿಚಯವನ್ನ ಅಷ್ಟು ಸುಲಭವಾಗಿ ನಂಬಬಾರದು.
ಟಿಂಡರ್ ಮತ್ತು ಹಿಂಜ್ ಆ್ಯಪ್‌ಗಳಲ್ಲಿ ಹೊಸ ಸುರಕ್ಷತಾ ಫೀಚರ್‌ಗಳು
ಬಳಕೆದಾರರ ಸುರಕ್ಷತೆಗಾಗಿ ಮ್ಯಾಚ್ ಗ್ರೂಪ್ ತನ್ನ ಡೇಟಿಂಗ್ ಆ್ಯಪ್‌ಗಳಲ್ಲಿ ಹಲವು ಕಟ್ಟುನಿಟ್ಟಿನ ಬದಲಾವಣೆಗಳನ್ನ ತಂದಿದೆ. ಟಿಂಡರ್ ಆ್ಯಪ್‌ನಲ್ಲಿ ಫೇಕ್ ಅಕೌಂಟ್ ತಡೆಯಲು ಫೇಸ್ ಚೆಕ್ ಮತ್ತು ಫೋಟೋ ವೆರಿಫಿಕೇಶನ್ ಫೀಚರ್ ನೀಡಲಾಗಿದೆ.
ಆಕ್ಷೇಪಾರ್ಹ ಸಂದೇಶಗಳು ಬಂದರೆ ವಾರ್ನಿಂಗ್ ನೀಡುವ ವ್ಯವಸ್ಥೆ ಹಾಗೂ ಕಿರುಕುಳ ನೀಡುವವರನ್ನು ರಿಪೋರ್ಟ್ ಮಾಡಿ ಬ್ಲಾಕ್ ಮಾಡುವ ಆಯ್ಕೆಯಿದೆ. ಡೇಟ್‌ಗೆ ಹೋಗುವಾಗ ಆಪ್ತರೊಂದಿಗೆ ಲೊಕೇಶನ್ ಹಂಚಿಕೊಳ್ಳಲು 'ಶೇರ್ ಮೈ ಡೇಟ್'ಆಯ್ಕೆಯೂ ಇದೆ.
ಹಾಗೆಯೇ ಹಿಂಜ್ ಆ್ಯಪ್‌ನಲ್ಲಿ ಸ್ಕ್ರೀನ್‌ಶಾಟ್ ನಿರ್ಬಂಧ ಹಾಗೂ ಕಟ್ಟುನಿಟ್ಟಿನ ಫೇಸ್ ಚೆಕ್ ಪರಿಚಯಿಸಲಾಗಿದೆ. ಐಫೋರ್‌ಸಿ (I4C) ನಿರ್ದೇಶಕ ನಿಶಾಂತ್ ಕುಮಾರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, "ಆನ್‌ಲೈನ್‌ನಲ್ಲಿ ನಂಬಿಕೆಯ ಜೊತೆಗೆ ಎಚ್ಚರಿಕೆಯೂ ಇರಬೇಕು. ವಂಚಕರು ಭಾವನೆಗಳೊಂದಿಗೆ ಆಟವಾಡುತ್ತಾರೆ. ಸಾರ್ವಜನಿಕರು ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವ ಮುನ್ನ ಎಚ್ಚರವಹಿಸಬೇಕು" ಎಂದು ಸಲಹೆ ನೀಡಿದ್ದಾರೆ.
ಮ್ಯಾಚ್ ಗ್ರೂಪ್‌ನ ಹಿರಿಯ ಉಪಾಧ್ಯಕ್ಷ ಯೋಯೆಲ್ ರೋತ್ ಸಹ, ತಂತ್ರಜ್ಞಾನ ಸಂಸ್ಥೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳ ನಡುವಿನ ಸಹಕಾರದಿಂದ ಭಾರತದಲ್ಲಿ ಸುರಕ್ಷಿತ ಆನ್‌ಲೈನ್ ವಾತಾವರಣ ನಿರ್ಮಿಸಲು ಸಾಧ್ಯವಿದೆ ಎಂದಿದ್ದಾರೆ.
ರೊಮ್ಯಾನ್ಸ್ ಸ್ಕ್ಯಾಮ್‌ಗೊಳಗಾದರೆ ಸೈಬರ್ ಕ್ರೈಮ್‌ಗೆ ದೂರು ನೀಡುವುದು ಹೇಗೆ?
ನೀವು ಅಥವಾ ನಿಮ್ಮ ಪರಿಚಯಸ್ಥರು ಆನ್‌ಲೈನ್ ಡೇಟಿಂಗ್ ವೇಳೆ ಯಾವುದೇ ರೀತಿಯ ಸೈಬರ್ ವಂಚನೆಗೊಳಗಾದರೆ, ಭಯಪಡದೆ ತಕ್ಷಣವೇ ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಿ ದೂರು ದಾಖಲಿಸಬಹುದು. ಅಥವಾ ಕೇಂದ್ರ ಸರ್ಕಾರದ ಅಧಿಕೃತ ಪೋರ್ಟಲ್ cybercrime.gov.in ಗೆ ಭೇಟಿ ನೀಡಿ ದೂರು ನೀಡಬಹುದು. ಸೈಬರ್ ಸುರಕ್ಷತೆಯ ಅರಿವಿಗಾಗಿ ಸಾರ್ವಜನಿಕರು ಇನ್‌ಸ್ಟಾಗ್ರಾಮ್‌ನಲ್ಲಿ ಕೇಂದ್ರ ಸರ್ಕಾರದ ಅಧಿಕೃತ ಖಾತೆ @CyberDostI4C ಯನ್ನು ಫಾಲೋ ಮಾಡಬಹುದಾಗಿದೆ.


Click it and Unblock the Notifications
