'ಸಿಸೋಡಿಯಾ ವಿರುದ್ಧ ಅರವಿಂದ್ ಕೇಜ್ರಿವಾಲ್ ಪಿತೂರಿ ಮಾಡುತ್ತಿದ್ದಾರಾ...?': ಮನೋಜ್ ತಿವಾರಿ ಅನುಮಾನ
'ಮನೀಶ್ ಸಿಸೋಡಿಯಾಗೆ ಬಿಜೆಪಿಯಿಂದ ಬೆದರಿಕೆ ಇದೆ ಎಂಬ ವದಂತಿ ಸೃಷ್ಟಿಯಾಗುತ್ತಿದೆ. ಮನೀಶ್ ಸಿಸೋಡಿಯಾ ಅವರಿಗೆ ಉತ್ತಮ ಭದ್ರತೆ ಒದಗಿಸುವಂತೆ ನಾನು ಜೈಲು ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ'
ನವದೆಹಲಿ, ಮಾರ್ಚ್ 09: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿನ ಅಕ್ರಮಗಳ ಆರೋಪದಲ್ಲಿ ಜೈಲು ಸೇರಿರುವ ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ತಿಹಾರ್ ಜೈಲು ಅಧಿಕಾರಿಗಳು ಉತ್ತಮ ಭದ್ರತೆ ಒದಗಿಸಬೇಕು ಎಂದು ಭಾರತೀಯ ಜನತಾ ಪಕ್ಷದ ಸಂಸದ ಮನೋಜ್ ತಿವಾರಿ ಒತ್ತಾಯಿಸಿದ್ದಾರೆ.
"ದೆಹಲಿಯ ಜೈಲುಗಳು ದೆಹಲಿ ಸರ್ಕಾರದ ಅಡಿಯಲ್ಲಿ ಬರುತ್ತವೆ. ಅಂದರೆ ಅರವಿಂದ್ ಕೇಜ್ರಿವಾಲ್ ಅವರ ಅಡಿಯಲ್ಲಿ ಬರುತ್ತವೆ. ಮನೀಶ್ ಸಿಸೋಡಿಯಾ ಅವರಿಗೆ ಅರವಿಂದ್ ಕೇಜ್ರಿವಾಲ್ ಅವರ ಹಲವು ರಹಸ್ಯಗಳು ತಿಳಿದಿವೆ. ಅವರ ಸ್ವಂತ ಸಹಾಯಕ ಮನೀಶ್ ಸಿಸೋಡಿಯಾಗೆ ಜೈಲಿನೊಳಗೆ ಜೀವ ಬೆದರಿಕೆ ಇರುವುದು ಹೇಗೆ ಸಾಧ್ಯ? ಅರವಿಂದ್ ಕೇಜ್ರಿವಾಲ್ ಅವರು ಮನೀಶ್ ಸಿಸೋಡಿಯಾ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆಯೇ..?'' ಎಂದು ಮನೋಜ್ ತಿವಾರಿ ಪ್ರಶ್ನಿಸಿದ್ದಾರೆ.

"ಅರವಿಂದ್ ಕೇಜ್ರಿವಾಲ್ ಅವರ ರಹಸ್ಯಗಳನ್ನು ಬಹಿರಂಗಪಡಿಸುವುದನ್ನು ತಡೆಯಲು ಮನೀಶ್ ಸಿಸೋಡಿಯಾ ಅವರನ್ನು ಕೊಲ್ಲಲು ಅರವಿಂದ್ ಕೇಜ್ರಿವಾಲ್ ಸಂಚು ಮಾಡುತ್ತಿದ್ದಾರೆಯೇ..? ಮನೀಶ್ ಸಿಸೋಡಿಯಾಗೆ ಬಿಜೆಪಿಯಿಂದ ಬೆದರಿಕೆ ಇದೆ ಎಂಬ ವದಂತಿ ಸೃಷ್ಟಿಯಾಗುತ್ತಿದೆ. ಮನೀಶ್ ಸಿಸೋಡಿಯಾ ಅವರಿಗೆ ಉತ್ತಮ ಭದ್ರತೆ ಒದಗಿಸುವಂತೆ ನಾನು ಜೈಲು ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ" ಎಂದು ಮನೋಜ್ ತಿವಾರಿ ಹೇಳಿದ್ದಾರೆ.
ಕಠಿಣ ಮತ್ತು ಹಿಂಸಾತ್ಮಕ ಅಪರಾಧಿಗಳನ್ನು ಹೊಂದಿರುವ ತಿಹಾರ್ ಕಾಂಪ್ಲೆಕ್ಸ್‌ನ ಜೈಲು ಸಂಖ್ಯೆ 1 ರಲ್ಲಿ ಮನೀಶ್ ಸಿಸೋಡಿಯಾ ಅವರನ್ನು ಇರಿಸಲಾಗಿದೆ ಎಂದು ಎಎಪಿ ಆರೋಪಿಸಿದ ನಂತರ ತೀವ್ರ ರಾಜಕೀಯ ವಿವಾದವು ಸ್ಫೋಟಗೊಂಡಿದೆ. ಮನೀಶ್ ಸಿಸೋಡಿಯಾ ಅವರನ್ನು ಜೈಲಿನೊಳಗೆ ಅಪಾಯಕಾರಿ ಕ್ರಿಮಿನಲ್‌ಗಳೊಂದಿಗೆ ಇರಿಸಲಾಗಿದೆ. ಅಲ್ಲಿ ಅವರ ಜೀವಕ್ಕೆ ಅಪಾಯವಿದೆ ಎಂದು ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಆರೋಪಿಸಿದ್ದಾರೆ.

ಆಮ್ ಆದ್ಮಿ ಪಾರ್ಟಿ ಹೇಳಿಕೆಯನ್ನು ತಳ್ಳಿ ಹಾಕಿರುವ ತಿಹಾರ್ ಜೈಲು ಅಧಿಕಾರಿಗಳು, ಆಪ್ ನಾಯಕನ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಪ್ರತ್ಯೇಕ ವಾರ್ಡ್‌ಗೆ ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ. ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಅವರು ದರೋಡೆಕೋರರಲ್ಲದ ಮತ್ತು ಉತ್ತಮ ನಡವಳಿಕೆಯಿರುವ ಕನಿಷ್ಠ ಸಂಖ್ಯೆಯ ಕೈದಿಗಳನ್ನು ಹೊಂದಿರುವ CJ-1 ರ ವಾರ್ಡ್‌ನಲ್ಲಿ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುದ್ದಿಸಂಸ್ತೆ ಎಎನ್‌ಐ ವರದಿ ಮಾಡಿದೆ.
ಫೆಬ್ರವರಿ 26 ರಂದು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿತು. ಈ ಹಿಂದೆ ಅವರನ್ನು 7 ದಿನಗಳ ಸಿಬಿಐ ವಶಕ್ಕೆ ನೀಡಲಾಗಿತ್ತು. ನಂತರ, ದೆಹಲಿ ನ್ಯಾಯಾಲಯ ಅವರನ್ನು ಮಾರ್ಚ್ 20 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.












Click it and Unblock the Notifications