ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಸಾಧ್ಯವಿಲ್ಲ: ಕೇಂದ್ರ ಸರ್ಕಾರ
ಭಾರತದ ರಾಷ್ಟ್ರೀಯ ಪ್ರಾಣಿ ಹುಲಿಯಾಗಿದ್ದು, ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಗುರುತಿಸಲು ಸರ್ಕಾರ ಉದ್ದೇಶಿಸಿಲ್ಲ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ಸೋಮವಾರ ಸಂಸತ್ತಿನಲ್ಲಿ ತಿಳಿಸಿದ್ದಾರೆ.
ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಗುರುತಿಸಲು ಸರ್ಕಾರ ಉದ್ದೇಶಿಸಿದೆಯೇ ಎಂದು ಸಂಸ್ಕೃತಿ ಸಚಿವಾಲಯಕ್ಕೆ ಬಿಜೆಪಿ ಸಂಸತ್ ಸದಸ್ಯ ಭಗೀರಥ ಚೌಧರಿ ಕೇಳಿದ್ದ ಪ್ರಶ್ನೆಗಳಿಗೆ ಸಚಿವ ರೆಡ್ಡಿ ಉತ್ತರಿಸಿದರು.

ರಾಷ್ಟ್ರೀಯ ಪ್ರಾಣಿಯಾಗಿ, ಸಂಸತ್ತಿನಲ್ಲಿ ಶಾಸನವನ್ನು ತರುವ ಮೂಲಕ ಭಾರತೀಯ ಮತ್ತು 'ಸನಾತನ ಸಂಸ್ಕೃತಿ'ಯ ರಕ್ಷಣೆ ಮತ್ತು ಪುನರುಜ್ಜೀವನವನ್ನು ಪರಿಗಣಿಸಿ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಭಗೀರಥ ಚೌಧರಿ ಒತ್ತಾಯಿಸಿದರು.
ಅದಕ್ಕೆ ಉತ್ತರ ನೀಡಿದ ರೆಡ್ಡಿ, ಭಾರತ ಸರ್ಕಾರವು ಹುಲಿ ಮತ್ತು ನವಿಲುಗಳನ್ನು ಕ್ರಮವಾಗಿ 'ರಾಷ್ಟ್ರೀಯ ಪ್ರಾಣಿ' ಮತ್ತು 'ರಾಷ್ಟ್ರೀಯ ಪಕ್ಷಿ' ಎಂದು ಸೂಚಿಸಿದೆ ಮತ್ತು ಈ ಎರಡನ್ನೂ ವನ್ಯಜೀವಿ (ರಕ್ಷಣೆ) ಕಾಯಿದೆಯ 1972ರ ಶೆಡ್ಯೂಲ್-1 ಪ್ರಾಣಿಗಳಲ್ಲಿ ಸೇರಿಸಲಾಗಿದೆ ಎಂದು ರೆಡ್ಡಿ ಸ್ಪಷ್ಟಪಡಿಸಿದರು.
2011ರಲ್ಲಿ ಮರುಘೋಷಣೆ
"ಭಾರತ ಸರ್ಕಾರದಲ್ಲಿ ರಾಷ್ಟ್ರೀಯ ಪ್ರಾಣಿ ಮತ್ತು ಪಕ್ಷಿ ಘೋಷಣೆ ಕುರಿತಂತೆ ಅಧಿಕೃತ ದಾಖಲೆಗಳು ಇಲ್ಲದ ಕಾರಣ, ಸಚಿವಾಲಯ 30 ಮೇ 2011 ರಂದು ಹುಲಿ ಮತ್ತು ನವಿಲುಗಳನ್ನು ಕ್ರಮವಾಗಿ 'ರಾಷ್ಟ್ರೀಯ ಪ್ರಾಣಿ' ಮತ್ತು ರಾಷ್ಟ್ರೀಯ ಪಕ್ಷಿ' ಎಂದು ಮರುನೋಟಿಫೈ ಮಾಡಿದೆ" ಎಂದು ಸಚಿವರು ತಿಳಿಸಿದರು.
ಅಲಹಾಬಾದ್ ಮತ್ತು ಜೈಪುರದ ಉಚ್ಚ ನ್ಯಾಯಾಲಯವು 'ಹಸು'ವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಆದೇಶಿಸಿದೆ ಮತ್ತು ಕಾಮೆಂಟ್ ಮಾಡಿದೆಯೇ ಎಂಬ ನಿರ್ದಿಷ್ಟ ಪ್ರಶ್ನೆಗೆ ಉತ್ತರ ನೀಡಿದ, ರೆಡ್ಡಿ ಈ ವಿಷಯಗಳು ರಾಜ್ಯದ ಶಾಸಕಾಂಗ ಅಧಿಕಾರಿಗಳ ಕೈಯಲ್ಲಿದೆ ಎಂದು ಮಾಹಿತಿ ನೀಡಿದರು.
"ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾಡಿದ ಪ್ರಯತ್ನಗಳಿಗೆ ಪೂರಕವಾಗಿ ಮತ್ತು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಸ್ಥಳೀಯ ತಳಿಯ ಜಾನುವಾರುಗಳನ್ನು ಒಳಗೊಂಡಂತೆ ಸ್ಥಳೀಯ ತಳಿಗಳ ಅಭಿವೃದ್ಧಿ ಮತ್ತು ರಕ್ಷಣೆಗಾಗಿ ರಾಷ್ಟ್ರೀಯ ಗೋಕುಲ್ ಮಿಷನ್ ಅನ್ನು ಅನುಷ್ಠಾನಗೊಳಿಸುತ್ತಿದೆ. ಈ ಮಿಷನ್ ದೇಶದಲ್ಲಿ ಜಾನುವಾರು ಸೇರಿದಂತೆ ಸ್ಥಳೀಯ ತಳಿ ಹಸುಗಳ ಸಂಖ್ಯೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ. ಇಲಾಖೆಯು ಹಸು ಮತ್ತು ಅದರ ಸಂತತಿ ಸೇರಿದಂತೆ ಪ್ರಾಣಿಗಳನ್ನು ರಕ್ಷಿಸಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿದೆ." ಎಂದು ಮಾಹಿತಿ ನೀಡಿದರು.












Click it and Unblock the Notifications