ಉತ್ತರ ಪ್ರದೇಶ: ದಲಿತ ಕುಟುಂಬದ ಮೂವರ ಹತ್ಯೆ ಮಾಡಿ ಮನೆಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಲಖನೌ, ಸೆಪ್ಟೆಂಬರ್ 15: ಕೌಶಂಬಿ ಜಿಲ್ಲೆಯ ಹರಾಯ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸಂದೀಪನ್ ಘಾಟ್ ಪ್ರದೇಶದಲ್ಲಿ ದಲಿತ ಕುಟುಂಬದ ಮೂವರನ್ನು ಗುರುವಾರ ರಾತ್ರಿ ಹತ್ಯೆಗೈದ ದಾರುಣ ಘಟನೆ ನಡೆದಿದೆ.
ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿ ಕುಟುಂಬಕ್ಕೆ ನ್ಯಾಯ ಕೊಡಿಸುವಂತೆ ಘೋಷಣೆ ಕೂಗಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ಪ್ರದೇಶದ ಹಲವು ಪೊಲೀಸ್ ಠಾಣೆಗಳಿಂದ ಸ್ಥಳಕ್ಕೆ ಪೊಲೀಸರನ್ನು ಕಳುಹಿಸಲಾಗಿದೆ. ಹಲವಾರು ಹಿರಿಯ ಪೊಲೀಸ್ ಅಧಿಕಾರಿಗಳು ಈಗಾಗಲೇ ಘಟನಾ ಸ್ಥಳದಲ್ಲಿದ್ದಾರೆ.
ದಲಿತ ವ್ಯಕ್ತಿಗಳ ಸಾವಿನಿಂದ ಉದ್ರಿಕ್ತಗೊಂಡಿರುವ ಜನರು ಶಂಕಿತರ ಮನೆಗಳಿಗೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಅಧಿಕಾರಿಗಳು ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಕೌಶಂಬಿಯ ಪೊಲೀಸ್ ಅಧೀಕ್ಷಕ ಬ್ರಿಜೇಶ್ ಶ್ರೀವಾಸ್ತವ ಅವರು, 'ನಾಲ್ವರು ಆರೋಪಿಗಳ ಹೆಸರುಗಳು ಹೊರಬಂದಿವೆ. ಅವರು ತಲೆಮರೆಸಿಕೊಂಡಿದ್ದಾರೆ. ನಾವು ಅವರನ್ನು ಹುಡುಕುತ್ತಿದ್ದೇವೆ. ಎಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ' ಎಂದು ತಿಳಿಸಿದ್ದಾರೆ.
ಕೂಲಿ ಕೇಳಿದ್ದಕ್ಕಾಗಿ ದಲಿತ ವ್ಯಕ್ತಿಗೆ ಹತ್ಯೆ
ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ವೇತನ ಕೇಳಿದ್ದಕ್ಕೆ ದಲಿತ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದೆ. ಸಂತ್ರಸ್ತೆಯ ಕುಟುಂಬದ ಪ್ರಕಾರ, ಆತನನ್ನು ಕ್ರೂರವಾಗಿ ಹೊಡೆದು ಸಾಯಿಸಲಾಗಿದೆ.
ಆಗಸ್ಟ್ 25 ರಂದು ಈ ಘಟನೆ ನಡೆದಿದ್ದು, ಮೃತರ ಕುಟುಂಬವು ಮರಣೋತ್ತರ ಪರೀಕ್ಷೆಯ ವರದಿಯನ್ನು ಇನ್ನೂ ಸ್ವೀಕರಿಸಿಲ್ಲ.
ಮೃತ ವಿನಯ್ ಕುಮಾರ್ (18) ಅವರು ನಾಲ್ಕು ದಿನಗಳಿಂದ ಕೆಲಸ ಮಾಡಿದ್ದರು. ಆ ಬಳಿಕ ಆರೋಪಿ ದಿಗ್ವಿಜಯ್ ಯಾದವ್ ಅವರಿಂದ ವೇತನವನ್ನು ಕೇಳಿದರು. ಕುಮಾರ್‌ಗೆ ಕೂಲಿ ಕೊಡುವ ಬದಲು ಯಾದವ್ ಅವರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಎಫ್‌ಐಆರ್ ಪ್ರಕಾರ, ಆಗಸ್ಟ್ 25 ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಯಾದವ್‌ನಿಂದ ವೇತನ ಪಡೆಯಲು ಕುಮಾರ್ ಹೊರಟರು. ಆದರೆ, ಅವರು ಮನೆಗೆ ಹಿಂತಿರುಗಲಿಲ್ಲ. ಕುಮಾರ್ ಅವರು ಆಸ್ಪತ್ರೆಗೆ ದಾಖಲಾದ ಸುದ್ದಿ ಸಂಜೆಯ ವೇಳೆಗೆ ಕುಟುಂಬಕ್ಕೆ ತಿಳಿಯಿತು. ಕುಟುಂಬಸ್ಥರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಕುಮಾರ್ ಕುಟುಂಬದಲ್ಲಿ ಕಿರಿಯ ಮಗನಾಗಿದ್ದನು. ಜೀವನ ನಿರ್ವಹಣೆಗೆ ಕೂಲಿ ಕೆಲಸ ಮಾಡಿಕೊಂಡಿದ್ದರು. ರಕ್ಷಾಬಂಧನದಂದು ತನ್ನ ಸಹೋದರಿಯರಿಗೆ ಉಡುಗೊರೆಗಳನ್ನು ಖರೀದಿಸುವುದಕ್ಕಾಗಿ ಹಣವನ್ನು ಸಂಪಾದಿಸಲು ಆತ ಶ್ರಮಿಸುತ್ತಿದ್ದನು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.












Click it and Unblock the Notifications