Threat to Modi: ಮೋದಿ ಹತ್ಯೆ ಮಾಡುವ ಬೆದರಿಕೆ, ಲಾರೆನ್ಸ್ ಬಿಷ್ಣೋಯ್ ಬಿಡುಗಡೆಗೆ ಒತ್ತಾಯ!
ದೆಹಲಿ ಅಕ್ಟೋಬರ್ 7: ಪ್ರಧಾನಿ ನರೇಂದ್ರ ಮೋದಿಯನ್ನು ಕೊಲ್ಲುವ ಬೆದರಿಕೆಯ ಇಮೇಲ್‌ವೊಂದು ತಲ್ಲಣ ಸೃಷ್ಟಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬೆದರಿಕೆ ಇಮೇಲ್ ಸ್ವೀಕರಿಸಿದೆ ಎಂದು ಹೇಳಿದೆ. ಎನ್‌ಐಎಗೆ ಬಂದಿರುವ ಬೆದರಿಕೆ ಇಮೇಲ್‌ನಲ್ಲಿ 'ನಿಮ್ಮ ಸರ್ಕಾರದಿಂದ ನಮಗೆ 500 ಕೋಟಿ ರೂಪಾಯಿ ನೀಡಬೇಕು. ಲಾರೆನ್ಸ್ ಬಿಷ್ಣೋಯ್ ಬಿಡುಗಡೆ ಮಾಡಬೇಕು' ಎಂದು ಬರೆಯಲಾಗಿದೆ.
ಈ ಇಮೇಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವುದಾಗಿ ಮತ್ತು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಜೊತೆಗೆ ಸರ್ಕಾರದಿಂದ 500 ಕೋಟಿ ರೂಪಾಯಿಗಳ ಬೇಡಿಕೆಯನ್ನು ಇಡಲಾಗಿದೆ. ಹಣ ಪಾವತಿ ಜತೆಗೆ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅನ್ನು ಬಿಡುಗಡೆ ಮಾಡಬೇಕು ಎಂದೂ ಬರೆಯಲಾಗಿದೆ. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಲಾಗಿದೆ.

ಬೆದರಿಕೆ ಇಮೇಲ್ ಬಗ್ಗೆ ಎನ್‌ಐಎ ಮುಂಬೈ ಪೊಲೀಸರಿಗೆ ಎಚ್ಚರಿಕೆ ನೀಡಿದೆ. ಗುಜರಾತ್ ಪೊಲೀಸರನ್ನು ಹೊರತುಪಡಿಸಿ, ಪ್ರಧಾನಿ ಮೋದಿಯವರ ಭದ್ರತೆಗೆ ಸಂಬಂಧಿಸಿದ ಹಲವು ಏಜೆನ್ಸಿಗಳಿಗೆ ಈ ಬೆದರಿಕೆ ಇಮೇಲ್ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
2023ರ ವಿಶ್ವಕಪ್‌ನ ಹಲವು ಪಂದ್ಯಗಳು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವುದರಿಂದ ಮುಂಬೈ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಬೆದರಿಕೆಯ ಇಮೇಲ್ ಎಲ್ಲಿಂದ ಬಂದಿದೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ. ಎಲ್ಲೆಡೆ ಪೊಲೀಸರು ಅಲರ್ಟ್ ಆಗಿದ್ದಾರೆ. ಅಕ್ಟೋಬರ್ 5 ರಂದು ಬೆಳಿಗ್ಗೆ ಮುಂಬೈ ಪೊಲೀಸ್ ಕಂಟ್ರೋಲ್ ರೂಮ್‌ಗೆ ಬೆದರಿಕೆ ಇಮೇಲ್ ಬಗ್ಗೆ ಎನ್‌ಐಎ ಎಚ್ಚರಿಕೆಯನ್ನು ಸ್ವೀಕರಿಸಿದೆ.
ಇಮೇಲ್‌ನಲ್ಲಿ ಬರೆಯಲಾಗಿದ್ದು ಹೀಗೆ- "ನಮಗೆ ನಿಮ್ಮ ಸರ್ಕಾರದಿಂದ 500 ಕೋಟಿ ರೂ. ಬೇಕು. ಬಂಧನದಲ್ಲಿರುವ ಲಾರೆನ್ಸ್ ಬಿಷ್ಣೋಯ್ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ನಾಳೆ ನರೇಂದ್ರ ಮೋದಿ ಜೊತೆಗೆ ನರೇಂದ್ರ ಮೋದಿ ಸ್ಟೇಡಿಯಂ ಅನ್ನು ಸ್ಫೋಟಿಸುತ್ತೇವೆ. ಭಾರತದಲ್ಲಿ ಎಲ್ಲವೂ ಮಾರಾಟವಾಗಿದೆ, ಆದ್ದರಿಂದ ನಾವೂ ಏನು ಬೇಕಾದರು ಖರೀದಿಸುತ್ತೇವೆ. ನೀವು ಎಷ್ಟೇ ರಕ್ಷಿಸಿದರೂ ಏನೂ ಮಾಡಲಾಗುವುದಿಲ್ಲ. ಅವರನ್ನು ನಮ್ಮಿಂದ ಉಳಿಸಲು ಸಾಧ್ಯವಾಗುವುದಿಲ್ಲ. ನೀವು ಮಾತನಾಡಲು ಬಯಸಿದರೆ ಈ ಮೇಲ್‌ನಲ್ಲಿ ಮಾತ್ರ ಮಾತನಾಡಿ" ಎಂದು ಬರೆಯಲಾಗಿದೆ.
ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಉದ್ಘಾಟನಾ ಪಂದ್ಯವು ಗುರುವಾರ ಅಕ್ಟೋಬರ್ 5 ರಂದು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು.
ಲಾರೆನ್ಸ್ ಬಿಷ್ಣೋಯ್ 2014 ರಿಂದ ಜೈಲಿನಲ್ಲಿದ್ದಾರೆ. ಅವರು ಜೈಲಿನ ಒಳಗಿನಿಂದ ತನ್ನ ಗ್ಯಾಂಗ್ ಜೊತೆ ಸಂಪರ್ಕದಲ್ಲಿದ್ದಾನೆ ಎನ್ನಲಾಗುತ್ತಿದೆ. ಲಾರೆನ್ಸ್ ವಿರುದ್ಧ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಮೂಸೆವಾಲಾ ಮೇಲಿನ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ವಹಿಸಿಕೊಂಡಿದ್ದರು.












Click it and Unblock the Notifications