ಸ್ವತಂತ್ರ ದಿನಾಚರಣೆ ದಿನ ಮೋದಿ ಜೀವಕ್ಕೆ ಕಂಟಕ
ನವದೆಹಲಿ, ಜುಲೈ 29: ಸ್ವತಂತ್ರ ದಿನಾಚರಣೆ ದಿನದ ಪ್ರಧಾನಿ ಮೋದಿ ಜೀವಕ್ಕೆ ಕಂಟಕ ಎದುರಾಗಲಿದೆ ಎಂಬ ಸುದ್ದಿ ಬಂದಿದೆ. ಉಗ್ರರ ಟಾರ್ಗೆಟ್ ಲಿಸ್ಟ್ ನಲ್ಲಿ ಅಗ್ರಸ್ಥಾನದಲ್ಲಿರುವ ಮೋದಿ ಅವರು ಕೆಂಪುಕೋಟೆ ಮುಂದೆ ಭಾಷಣಕ್ಕೂ ಮುನ್ನ ಭದ್ರತೆ ಹೆಚ್ಚಿಸಿಕೊಳ್ಳಬೇಕು ಎಂಬ ಸಲಹೆ ಸಿಕ್ಕಿದೆ.
2014 ಹಾಗೂ 2015ರಲ್ಲಿ ಕೆಂಪುಕೋಟೆ ಮುಂದೆ ಯಾವುದೇ ಭದ್ರತಾ ಪಹರೆ ಇಲ್ಲದೆ ಪ್ರಧಾನಿ ಮೋದಿ ಅವರು ಭಾಷಣ ಮಾಡಿದ್ದರು. ಬುಲೆಟ್ ಪ್ರೂಫ್ ಗಾಜಿನ ತಡೆ ಹಾಕಿಕೊಂಡಿರಲಿಲ್ಲ. ಆದರೆ, ಈ ಬಾರಿ ವಿಶೇಷ ಭದ್ರತೆ ಒದಗಿಸುವುದು ಅನಿವಾರ್ಯವಾಗಿದೆ.

ವಿಶೇಷ ಭದ್ರತಾ ಪಡೆ (ಎಸ್ ಪಿಜಿ) ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊವಲ್ ಸಮಾಲೋಚನೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ.
ಇರಾಕಿ ಉಗ್ರ ಸಂಘಟನೆಗಳಾದ ಐಎಸ್ ಐಎಸ್, ಅಲ್ ಖೈದಾ, ಲಷ್ಕರ್ ಇ ತೋಯ್ಬಾ, ಜೈಷ್ ಇ ಮೊಹಮ್ಮದ್, ಹಿಜ್ಬುಲ್ ಮುಜಾಹೀದ್ದಿನ್, ಹರ್ಕತ್ ಉಲ್ ಜೆಹಾದಿ ಸೇರಿದಂತೆ ಅನೇಕ ಸಂಘಟನೆಗಳು ದೇಶದ ಪ್ರಮುಖ ವ್ಯಕ್ತಿ ಮೇಲೆ ಟಾರ್ಗೆಟ್ ಇಟ್ಟಿವೆ.
ಮಹಾರಾಷ್ಟ್ರ, ಗುಜರಾತ್ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಕೆಲ ರಾಜ್ಯಗಳಲ್ಲಿ ಹೈ ಅಲರ್ಟ್ ಜಾರಿಯಲ್ಲಿದೆ.
ಸುಮಾರು 5,000 ಎಸ್ ಪಿಜಿ ಜೊತೆಗೆ ದೆಹಲಿ ಪೊಲೀಸರು ಕೆಂಪು ಕೋಟೆ ಸೇರಿದಂತೆ ದೆಹಲಿಯ ಪ್ರಮುಖ ತಾಣಗಳಲ್ಲಿ ಭದ್ರತೆ ಒದಗಿಸಲು ಸಿದ್ಧರಾಗಿದ್ದಾರೆ.
1984ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರನ್ನು ಭದ್ರತಾ ಪಡೆಯವರೇ ಹತ್ಯೆ ಮಾಡಿದ ಬಳಿಕ ಕೆಂಪುಕೋಟೆಯಲ್ಲಿ ಬುಲೆಟ್ ಪ್ರೂಫ್ ಪಹರೆ ಜಾರಿಗೆ ಬಂದಿತು. ಆದರೆ, ಪ್ರಧಾನಿ ಮೋದಿ ಅವರು 2014ರಲ್ಲಿ ಈ ಪದ್ಧತಿಯನ್ನು ಮುರಿದರು.












Click it and Unblock the Notifications