ಮುಕ್ತ ಸ್ತನ್ಯಪಾನದಲ್ಲಿ ಯಾವುದೇ ಅಶ್ಲೀಲತೆಯಿಲ್ಲ : ಹೈಕೋರ್ಟ್
ತಿರುವನಂತಪುರಂ, ಜೂನ್ 21 : ಗೃಹಲಕ್ಷ್ಮಿ ಪತ್ರಿಕೆಗಾಗಿ ರೂಪದರ್ಶಿ ಗಿಲು ಜೋಸೆಫ್ ಅವರು ಮಗುವಿಗೆ ಸ್ತನ್ಯಪಾನ ಮಾಡಿಸುವ ಚಿತ್ರದಲ್ಲಿ ಯಾವುದೇ ಅಶ್ಲೀಲತೆ ಇಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಶ್ಲೀಲತೆ ಇರುವುದು ನೋಡುಗರ ದೃಷ್ಟಿಯಲ್ಲಿಯೇ ಹೊರತು, ಮಗುವಿಗೆ ಸ್ತನ್ಯಪಾನ ಮಾಡಿಸುವುದರಲ್ಲಿ ಇಲ್ಲ ಎಂದು ಹೈಕೋರ್ಟ್ ಹೇಳಿದ್ದನ್ನು ಎಲ್ಲರೂ ಮುಕ್ತಕಂಠದಿಂದ ಹೊಗಳುತ್ತಿದ್ದಾರೆ. ಇದು ಹೆಚ್ಚು ಸುದ್ದಿಗೇಕೆ ಗ್ರಾಸವಾಗಿತ್ತೆಂದರೆ, ಗಿಲು ಜೋಸೆಫ್ ಅವರು ಅವಿವಾಹಿತೆಯಾಗಿದ್ದು.
ಗಿಲು ಜೋಸೆಫ್ ಅವರು ಮುಕ್ತವಾಗಿ ಸ್ತನ್ಯಪಾನ ಮಾಡಿಸುತ್ತಿರುವ ಪೋಸ್ ನೀಡಿದ್ದರಿಂದ ಸ್ತ್ರೀತನದ ಗೌರವಕ್ಕೆ ಚ್ಯುತಿ ತಂದಿದೆ ಮತ್ತು ಆ ಚಿತ್ರ ಕಾಮ ಪ್ರಚೋದಕವಾಗಿದೆ ಎಂದು ವಕೀಲರಾದ ಮ್ಯಾಥ್ಯೂ ವಿಲ್ಸನ್ ಎಂಬುವವರು ಕಳೆದ ಮಾರ್ಚ್ ನಲ್ಲಿಯೇ ದೂರು ನೀಡಿದ್ದರು.

ರೂಪದರ್ಶಿ ಗಿಲು ಜೋಸೆಫ್ ಅವರು ಮಗುವಿಗೆ, ಮೈಮೇಲೆ ಯಾವುದೇ ಹೊದಿಕೆ ಹಾಕಿಕೊಳ್ಳದೆ ಮುಕ್ತವಾಗಿ ಸ್ತನ್ಯಪಾನ ಮಾಡಿಸಿದ್ದು ಸಂಪ್ರದಾಯಸ್ಥರ ಆಕ್ರೋಶಕ್ಕೆ ಗುರಿಯಾಗಿತ್ತು. ಕೆಲವರು ಇದು ಮಹಿಳಾ ಸ್ವಾತಂತ್ರ್ಯ ಮತ್ತು ಹಕ್ಕಿನ ಸಂಕೇತ ಎಂದೂ ಬೆಂಬಲಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರ ವೈರಲ್ ಆಗಿತ್ತು ಮತ್ತು ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಗಿಲು ಜೋಸೆಫ್ ಅವರು, ಮಗುವಿಗೆ ಹಾಲೂಡಿಸುವುದು ತಾಯ್ತನದ ಸಂಕೇತ. ಇದನ್ನು ಎಲ್ಲರೂ ಮಾಡಬೇಕು. ಆದರೆ, ಈರೀತಿ ಸ್ತನ್ಯಪಾನ ಮಾಡಿಸಿದ್ದು ಅನೇಕರು ಇಷ್ಟಪಡದಿದ್ದರೂ, ಇದು ನನ್ನ ಆಯ್ಕೆ ಎಂದು ಸಮರ್ಥಿಸಿಕೊಂಡಿದ್ದರು.
ಹೈಕೋರ್ಟ್ ನೀಡಿರುವ ತೀರ್ಪನ್ನು ಹಲವಾರು ಜನರು ಮುಕ್ತಕಂಠದಿಂದ ಹೊಗಳುತ್ತಿದ್ದಾರೆ. ಹಳ್ಳಿಗಳಲ್ಲಿ ಈಗಲೂ ಕೂಡ ತಾಯಂದಿರು ಮುಚ್ಚುಮರೆಯಿಲ್ಲದೆ ಸ್ತನ್ಯಪಾನ ಮಾಡಿಸುತ್ತಾರೆ. ಇದಕ್ಕೆ ಯಾರೂ ತಕರಾರು ತೆಗೆಯುವುದಿಲ್ಲ. ಆದರೆ, ಸ್ವೇಚ್ಛೆಯ ಹೆಸರಿನಲ್ಲಿ ಕೆಲ ಮಹಿಳೆಯರು ಬಿಕಿನಿ, ಶಾರ್ಟ್ಸ್ ಗಳಲ್ಲಿ ಅಲೆದಾಡುವುದು ಏಕೆ ಚರ್ಚೆಗೀಡಾಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications