ಭಟ್ಕಳದ ಯಾಸಿನ್ ಮೋಸ್ಟ್ ವಾಂಟೆಡ್ ಭಯೋತ್ಪಾದಕನಾಗಿ ಬೆಳೆದ ಬಗೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಡಿಸೆಂಬರ್ 14: ಆತ ಉಗ್ರರ ನೇಮಿಸಿಕೊಳ್ಳುತ್ತಿದ್ದ ಎಚ್ ಆರ್ ಮ್ಯಾನೇಜರ್, ಪ್ರೋತ್ಸಾಹಕ ಮಾತುಗಳನ್ನು ಸೊಗಸಾಗಿ ಆಡುತ್ತಿದ್ದ ಉತ್ತೇಜಕ, ಬಾಂಬ್ ತಯಾರಿ ಗೊತ್ತಿದ್ದವ, ಅವನೊಬ್ಬ ನಾಯಕ- ಯಾಸಿನ್ ಭಟ್ಕಳ್ ನನ್ನು ಗುಪ್ತಚರ ಇಲಾಖೆ ಬಣ್ಣಿಸಿರುವ ಬಗೆ ಇದು. ಭಾರತ ಕಂಡ ಅತ್ಯಂತ ಅಪಾಯಕಾರಿ ಉಗ್ರ ಯಾಸಿನ್ ಭಟ್ಕಳ್.

ಹೈದರಾಬಾದ್ ನ ದಿಲ್ ಸುಖ್ ನಗರದ ಸ್ಫೋಟ ಪ್ರಕರಣದಲ್ಲಿ ಯಾಸಿನ್ ಭಟ್ಕಳ್ ಗೆ ಕೋರ್ಟ್ ನಿಂದ ಮಂಗಳವಾರ ಮೊದಲ ಬಾರಿಗೆ ಆರೋಪಿ ಎಂದು ಘೋಷಣೆಯಾಗಿದೆ. ಆತ ನೇಣುಗಂಬಕ್ಕೆ ಏರುತ್ತಾನೋ ಅಥವಾ ಇಡೀ ಜೀವನ ಜೈಲಿನಲ್ಲಿ ಕಳೆಯುತ್ತಾನೋ ಎಂಬುದು ಡಿಸೆಂಬರ್ 19ರಂದು ತಿಳಿಯುತ್ತದೆ.[ಹೈದರಾಬಾದ್ ಸ್ಫೋಟ: ಇಂಡಿಯನ್ ಮುಜಾಹಿದ್ದೀನ್ ಮುಖ್ಯಸ್ಥ ಅಪರಾಧಿ]

ಆದರೆ, ಇಂಡಿಯನ್ ಮುಜಾಹಿದೀನ್ ನಲ್ಲಿ ಯಾಸಿನ್ ಭಟ್ಕಳ್ ನ ಬೆಳವಣಿಗೆ ಅಚ್ಚರಿ ಮೂಡಿಸುವಂಥದ್ದು. ಆತ ಸಾಮಾನ್ಯ ಸೇಲ್ಸ್ ಮನ್ ಆಗಿದ್ದವನು. ಭಟ್ಕಳ್ ನ ತಂದೆಯ ಗಾರ್ಮೆಂಟ್ ವ್ಯವಹಾರಕ್ಕೆ ಸಹಾಯ ಮಾಡ್ತಿದ್ದ. ಹಾಗಿದ್ದ ಯಾಸಿನ್ ಬಾಂಬ್ ತಯಾರಿಕೆಯಲ್ಲಿ ಪಳಗಿದ. ಐಎಂನ ಅತ್ಯುಚ್ಚ ನಾಯಕನಾಗಿ ಬೆಳೆದ.

ಯಾಸಿನ್ ಬೆಳವಣಿಗೆ

ಯಾಸಿನ್ ಬೆಳವಣಿಗೆ

ಜನವರಿ 15, 1983ರಲ್ಲಿ ಕರ್ನಾಟಕದ ಭಟ್ಕಳದಲ್ಲಿ ಹುಟ್ಟಿದವನು ಯಾಸಿನ್. ಇಂಡಿಯನ್ ಮುಜಾಹಿದೀನ್ ಸಂಘಟನೆ ಸ್ಥಾಪಕರಾದ ರಿಯಾಜ್ ಹಾಗೂ ಇಕ್ಬಾಲ್ ಭಟ್ಕಳ್ ಗೆ ತುಂಬ ಹತ್ತಿರದವರು. ಯಾಸಿನ್ ನ ಮೂಲ ಹೆಸರು ಅಹ್ಮದ್ ಜರಾರ್ ಸಿದ್ದಿಬಾಬ. ಆತನಿಗೆ ಶಾರುಕ್ ಖಾನ್, ಶಿವಾನಂದ್ ಹಾಗೂ ಡಾ.ಇಮ್ರಾನ್ ಹೀಗೆ ಹಲವು ಹೆಸರುಗಳಿವೆ.
ಆತ ತನ್ನ ಹುಟ್ಟೂರಿನಲ್ಲಿ ಬಹಳ ಕಾಲ ಕಳೆದವನಲ್ಲ. ತನ್ನ ತಂದೆಯ ಗಾರ್ಮೆಂಟ್ ವ್ಯವಹಾರಕ್ಕೆ ನೆರವಾಗುವ ಉದ್ದೇಶಕ್ಕೆ ದುಬೈಗೆ ತೆರಳಿದ. ಆತನ ಮೇಲೆ ಪ್ರಭಾವ ಬೀರಿದವನು ರಿಯಾಜ್. ಯಾಸಿನ್ ಭಾರತಕ್ಕೆ ಹಿಂತಿರುಗಿದವನೇ ಇಂಡಿಯನ್ ಮುಜಾಹಿದೀನ್ ಗೆ ಕೆಲಸ ಮಾಡಲು ಶುರು ಮಾಡಿದ.

ಹಣ ಹೊಂದಿಸುವ ಜವಾಬ್ದಾರಿ

ಹಣ ಹೊಂದಿಸುವ ಜವಾಬ್ದಾರಿ

ಯಾಸಿನ್ ಗೆ ಹಣ ಹೊಂದಿಸುವ ಜವಾಬ್ದಾರಿ ವಹಿಸಲಾಯಿತು. ಅದಕ್ಕಾಗಿ ಆತ ನಿರ್ಮಾಣದ ವ್ಯವಹಾರ ಶುರು ಮಾಡಿದ. ತುಂಬ ಶೀಘ್ರವಾಗಿ ಹದಿನಾಲ್ಕು ಲಕ್ಷ ರುಪಾಯಿ ಒಟ್ಟು ಮಾಡಿದ್ದ. ಇನ್ನು ಪಶ್ಚಿಮ ಬಂಗಾಲ ಮೂಲದ ವ್ಯಕ್ತಿಯೊಬ್ಬನ ಜತೆಗೆ ಸೇರಿ ನಕಲಿ ನೋಟು ದಂಧೆಯಲ್ಲಿ ಕೂಡ ತೊಡಗಿದ.
ಆ ನಂತರ ಯಾಸಿನ್ ಗೆ ಬಾಂಬ್ ತಯಾರಿಸುವುದನ್ನು ಕಲಿಸಲಾಯಿತು. ತುಂಬ ಬೇಗ ಬಾಂಬ್ ತಯಾರಿ ಕಲಿತ, ಅದರಲ್ಲಿ ಪಳಗಿಬಿಟ್ಟ. ಯೋಜನೆ ರೂಪಿಸಿದ ಎಲ್ಲ ವಿಧ್ವಂಸಕ ಕೃತ್ಯಗಳಲ್ಲಿ ಆತನೇ ಬಾಂಬ್ ತಯಾರಿಸುತ್ತಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.

ಐಎಂನಲ್ಲಿ ಬಿರುಕು

ಐಎಂನಲ್ಲಿ ಬಿರುಕು

ಆತ ಹಿಂದೆ ನಿಂತು ಕೆಲಸ ಮಾಡುತ್ತಿದ್ದರಿಂದ ಯಾವುದೇ ಗುಪ್ತಚರ ಸಂಸ್ಥೆ ಕಣ್ಣು ಅವನ ಮೇಲೆ ಬೀಳಲಿಲ್ಲ. ಐಎಂನಲ್ಲಿ ಮೊದಲ ಬಾರಿಗೆ ಬಿರುಕು ಕಂಡಾಗ ಅದರ ಪ್ರಮುಖರ ಪೈಕಿ ಕೆಲವರು ಬಂದಿಯಾದರು, ರಿಯಾಜ್ ಇಕ್ಬಾಲ್ ಮತ್ತು ಅಬ್ದುಸ್ ಸುಭಾನ್ ಪಾಕಿಸ್ತಾನವನ್ನು ಸೇರಿದರು. ಅಲ್ಲಿಗೆ ಐಎಂ ಸತ್ತೇ ಹೋಯಿತು ಅಂತ ಅಂದುಕೊಳ್ಳಲಾಯಿತು.
ಆದರೆ, ಯಾಸಿನ್ ಭಟ್ಕಳ್, ಆತನ ಸಹಚರರಾದ ವಕಾಸ್, ಅಸಾದುಲ್ಲಾ, ಅಖ್ತರ್, ತಹಸೀನ್ ಅಖ್ತರ್ ಮತ್ತು ಅಜಾಜ್ ಶೇಖ್ ಅದಕ್ಕೆ ಮರುಜೀವ ನೀಡಲು ಮುಂದಾದರು. ಸಣ್ಣ ತಂಡ ಮಾಡಿಕೊಂಡು ಕೆಲಸ ಆರಂಭಿಸಿದರು. ಫೋನ್ ನಲ್ಲಿ ಸಂಪರ್ಕವೇ ಮಾಡದೆ, ತಮ್ಮ ಮೇಲೆ ತನಿಖಾ ಸಂಸ್ಥೆಗಳ ಕಣ್ಣು ಬೀಳದಂತೆ ವಿಧ್ವಂಸಕ ಕೃತ್ಯಗಳನ್ನು ಮಾಡುತ್ತಿದ್ದರು.

 ವಿಧ್ವಂಸಕ ಕೃತ್ಯದ ಮೂಲಕವೇ ಸಂದೇಶ

ವಿಧ್ವಂಸಕ ಕೃತ್ಯದ ಮೂಲಕವೇ ಸಂದೇಶ

ವಿಧ್ವಂಸಕ ಕೃತ್ಯ ಮಾಡುವ ಮೂಲಕವೇ ಸಂದೇಶ ಕಳಿಸಬೇಕು ಎಂದು ನಂಬಿದ್ದ ಯಾಸಿನ್, ಹಳೆ ತಂಡದ ರೀತಿ ಕೃತ್ಯದ ಜವಾಬ್ದಾರಿ ಹೊತ್ತಿಕೊಳ್ಳುವುದು, ಇ ಮೇಲ್ ಕಳಿಸುವುದೆಲ್ಲ ಮಾಡ್ತಿರಲಿಲ್ಲ. ಆದರೆ ನಿರಂತರವಾಗಿ ದಾಳಿಗಳನ್ನು ಮಾತ್ರ ರೂಪಿಸುತ್ತಿದ್ದ. 13/7 ಮುಂಬೈ ರೈಲು ಸ್ಫೋಟ 2006, ದೆಹಲಿ ಸ್ಫೋಟ 2010, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸ್ಫೋಟ 2010, ಪುಣೆಯ ಜರ್ಮನ್ ಬೇಕರಿ ಸ್ಫೋಟ 2010, ದೆಹಲಿ ಹೈ ಕೋರ್ಟ್ ಸ್ಫೋಟ 2011, ಮುಂಬೈ ಸರಣಿ ಸ್ಫೋಟ 2011, ದಿಲ್ ಸುಖ್ ನಗರ್ ಸ್ಫೋಟ 2013- ಈ ಎಲ್ಲದರ ಯೋಜನೆ ಹಾಗೂ ಅದರ ಜಾರಿ ಹೊಣೆ ಯಾಸಿನ್ ಭಟ್ಕಳ್ ದೇ.

ಭಿನ್ನಾಭಿಪ್ರಾಯ ಬಂತು

ಭಿನ್ನಾಭಿಪ್ರಾಯ ಬಂತು

ಆದರೆ, ಯಾಸಿನ್ ಹಾಗೂ ಆತನ ಗುರು ರಿಯಾಜ್ ಮಧ್ಯೆ ಭಿನ್ನಾಭಿಪ್ರಾಯ ಆರಂಭವಾಯಿತು. ಬೀದಿಗಳಲ್ಲಿ ತಾನು ಶ್ರಮ ಪಟ್ಟು ಕೆಲಸ ಮಾಡುತ್ತಿದ್ದರೆ, ರಿಯಾಜ್ ಕರಾಚಿಯಲ್ಲಿ ಸುಖವಾಗಿ ಜೀವನ ಕಳೆಯುತ್ತಿದ್ದಾನೆ ಎಂಬ ಆಕ್ಷೇಪ ಯಾಸಿನ್ ದಾಗಿತ್ತು. ಯಾವುದೇ ಸಿದ್ಧಾಂತ ಇಲ್ಲದ ಪಾಕಿಸ್ತಾನದ ಐಎಸ್ ಐ ಜತೆ ನಂಟು ಬೇಡ ಎಂಬುದು ಆತನ ನಿಲವಾಗಿತ್ತು. ರಿಯಾಜ್ ನಿಂದ ಬೇರೆಯಾಗಲು ಯಾಸಿನ್ ನಿರ್ಧರಿಸಿದಾಗ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಬಂತು.

 ಪಾಕಿಸ್ತಾನಕ್ಕೆ ತೆರಳುವಾಗ ಸಿಕ್ಕಿಬಿದ್ದ

ಪಾಕಿಸ್ತಾನಕ್ಕೆ ತೆರಳುವಾಗ ಸಿಕ್ಕಿಬಿದ್ದ

ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳೋಣ ಪಾಕಿಸ್ತಾನಕ್ಕೆ ಬಾ ಅಂತ ಯಾಸಿನ್ ನನ್ನು ರಿಯಾಜ್ ಕರೆದಿದ್ದ. ಅಲ್ಲಿಗೆ ಹೋಗಲು ನೇಪಾಳ ಮೂಲಕ ತೆರಳುವಾಗ ಭಾರತದ ಗುಪ್ತಚರ ಇಲಾಖೆ ಆತನನ್ನು ಬಂಧಿಸಿತು. ತನ್ನ ಕಾರ್ಯಾಚರಣೆ ವೇಳೆ ಫೋನೇ ಬಳಸದ ಯಾಸಿನ್ , ತನ್ನ ಹೆಂಡತಿಗೊಂದು ಕರೆ ಮಾಡಿದ್ದ. ಅದು ಗುಪ್ತಚರ ಇಲಾಖೆ ಅಧಿಕಾರಿಗಳ ಕಿವಿಗೆ ಬಿದ್ದಿತ್ತು. ಆತನನ್ನು ಬಂಧಿಸಿದರು. ಖಚಿತಪಡಿಸದ ಮೂಲಗಳ ಪ್ರಕಾರ ಇಂಡಿಯನ್ ಮುಜಾಹಿದೀನ್ ನ ಒಳಗಿನವರೇ ಯಾಸಿನ್ ಭಟ್ಕಳ್ ನ ಚಲನವಲನದ ಬಗ್ಗೆ ಮಾಹಿತಿ ನೀಡಿ, ಸೆರೆಯಾಗುವಂತೆ ಮಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
From a simple sales boy who helped his father out in his garment business, Yasin Bhatkal went on to become one of the most prolific bomber and leader the dreaded Indian Mujahideen had ever seen.
Please Wait while comments are loading...