UPDATED: ಅನಂತನಾಗ್: ಉಗ್ರರ ಮುಖಂಡ ಬಷೀರ್ ಲಷ್ಕರಿ ಸೇರಿ 2 ಉಗ್ರರ ಬಲಿ
ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಉಗ್ರರ ಹಾವಳಿ. ಜಿಲ್ಲೆಯ ಬಾತ್ಪೋರಾ ಹಳ್ಳಿಯ ಮನೆಯೊಂದರೊಳಗೆ ನುಗ್ಗಿರುವ ಉಗ್ರರು. ಮನೆಯ ಸದಸ್ಯರನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುವ ಉಗ್ರರು. ಭಾರತೀಯ ಸೇನೆಯೊಂದಿಗೆ ಶುರುವಾದ ಗುಂಡಿನ ಕಾಳಗ.
ಶ್ರೀನಗರ, ಜುಲೈ 1: ಕಣಿವೆ ರಾಜ್ಯದ ಅನಂತನಾಗ್ ಜಿಲ್ಲೆಯ ಬಾತ್ಪೋರಾ ಹಳ್ಳಿಯೊಂದರ ಮನೆಯಲ್ಲಿ ಅಡಗಿಕುಳಿತ ಉಗ್ರರೊಂದಿಗೆ ಭಾರತೀಯ ಯೋಧರ ಗುಂಡಿನ ಚಕಮಕಿ ಶನಿವಾರ ಮುಂಜಾನೆಯಿಂದ ಆರಂಭವಾಗಿದ್ದು, ಈ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಇವರಲ್ಲೊಬ್ಬ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಮುಖಂಡ ಬಷೀರ್ ಲಷ್ಕರಿ ಎಂದು ಭಾರತೀಯ ಸೇನೆ ಹೇಳಿದೆ. ಈ ಗುಂಡಿನ ಚಕಮಕಿಯಲ್ಲಿ ಒಬ್ಬ ಮಹಿಳೆಯೊಬ್ಬರಿಗೆ ಗುಂಡು ತಗುಲಿ ಅವರು ಅಸುನೀಗಿದ್ದಾರೆ.
ಗ್ರಾಮದಲ್ಲಿನ ದೊಡ್ಡ ಮನೆಯೊಂದರೊಳಗೆ ನುಗ್ಗಿರುವ ಉಗ್ರವಾದಿಗಳ ತಂಡವೊಂದು, ಮನೆಯಲ್ಲಿದ್ದ ಎಲ್ಲಾ ಸದಸ್ಯರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿರುವುದಾಗಿ ಹೇಳಲಾಗಿದೆ. ಇವರಲ್ಲಿ 17 ಜನರನ್ನು ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಆದರೆ, ಇದರಿಂದ ಕೆರಳಿರುವ ಉಗ್ರರು ಭಾರತೀಯ ಸೇನೆಯ ಕಡೆಗೆ ಗುಂಡು ಹಾರಿಸಲೆತ್ನಿಸಿದಾಗ ಗುಂಡಿನ ಚಕಮಕಿ ಆರಂಭವಾಗಿದೆ.
ಈ ಗುಂಡಿನ ಚಕಮಕಿ ವೇಳೆಯಲ್ಲಿ ತಾಹಿರಾ ಬೇಗಮ್ (44) ಎಂಬ ಮಹಿಳೆಗೆ ಗುಂಡು ತಾಗಿದ್ದರಿಂದಾಗಿ ಆಕೆ ಗಂಭೀರವಾಗಿ ಗಾಯಗೊಂಡಿದ್ದಳು. ಆಕೆಯನ್ನು ಭಾರತೀಯ ಸೈನಿಕರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಿದೇ ಅವರು ಕೊನೆಯುಸಿರೆಳೆದಿದ್ದಾರೆ.
ಇತ್ತ, ಗ್ರಾಮದಲ್ಲಿ ಮನೆಯನ್ನು ಉಗ್ರರಿಂದ ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿದಿದೆ ಎಂದು ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ಬಂದಿರುವ ಮಾಹಿತಿಯ ಪ್ರಕಾರ, ಭಾರತೀಯ ಸೇನೆಯು ಇಬ್ಬರು ಉಗ್ರರನ್ನು ಬಲಿ ತೆಗೆದುಕೊಂಡಿದೆ.












Click it and Unblock the Notifications