ಚುನಾವಣೆ ಘೋಷಣೆ: ಆಂಧ್ರ-ತೆಲಂಗಾಣ ಕಥೆಯೇನು?
ಹೈದರಾಬಾದ್, ಮಾರ್ಚ್ 5: ಕೇಂದ್ರ ಚುನಾವಣಾ ಆಯೋಗವು ಅಖಂಡ ಆಂಧ್ರ ಪ್ರದೇಶ ವಿಧಾನಸಭೆಗೆ ಏಪ್ರಿಲ್ 30 ಮತ್ತು ಮೇ 7ರಂದು 2 ಹಂತಗಳಲ್ಲಿ ಚುನಾವಣೆ ನಡೆಯುತ್ತದೆ ಎಂದು ಇಂದು ಘೋಷಿಸಿದೆ. ಆದರೆ ನಿನ್ನೆ ತಡರಾತ್ರಿ ಕೇಂದ್ರ ಗೃಹ ಸಚಿವಾಲಯ, ಆಂಧ್ರ ಪ್ರದೇಶ ವಿಭಜನೆ ಕಾಯ್ದೆ 2014ರ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ ಜೂನ್ 2ರಂದು ತೆಲಂಗಾಣ ಸಂಸ್ಥಾಪನಾ ದಿನವನ್ನಾಗಿ ಘೋಷಿಸಿದೆ.
ಅಂದರೆ ಹಾಲಿ ಸ್ಥಿತಿಗೆ ಅನುಗುಣವಾಗಿ ಏಕೀಕೃತ ಆಂಧ್ರ ಪ್ರದೇಶ ವಿಧಾನಸಭೆಗೆ ಚುನಾವಣೆ ಮುಗಿದು ಮೇ 16ರಂದು ಫಲಿತಾಂಶ ಪ್ರಕಟಗೊಂಡರೂ ಯಾವುದೇ ಪಕ್ಷ ತಕ್ಷಣ ಅಧಿಕಾರಕ್ಕೆ ಬರುವಂತಿಲ್ಲ.

ಜೂನ್ 2ರಂದು ಭಾರತದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾದ ಬಳಿಕವಷ್ಟೇ ಆಯಾ ಪ್ರಾಂತ್ಯಕ್ಕೆ ಅನುಗುಣವಾಗಿ ಇಬ್ಬರು ಪ್ರತ್ಯೇಕ ಮುಖ್ಯಮಂತ್ರಿಗಳು ಅಧಿಕಾರ ವಹಿಸಿಕೊಳ್ಳಬೇಕಾಗುತ್ತದೆ. ಆಗಲೂ ಎರಡೂ ರಾಜ್ಯಗಳಿಗೆ ಹೈದರಾಬಾದ್ ರಾಜಧಾನಿಯಾಗಲಿದ್ದು, 10 ವರ್ಷಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದೆ.
ಜೂನ್ 2ರಂದು ಇಬ್ಭಾಗಗೊಳ್ಳುವ ಆಂಧ್ರದಲ್ಲಿ ತೆಲಂಗಾಣಕ್ಕೆ ಏಪ್ರಿಲ್ 30 ಮತ್ತು ಸೀಮಾಂಧ್ರಕ್ಕೆ ಮೇ 7ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಅಖಂಡ ಆಂಧ್ರದಲ್ಲಿ 42 ಸಂಸದೀಯ ಕ್ಷೇತ್ರಗಳು ಮತ್ತು 294 ವಿಧಾನಸಭಾ ಕ್ಷೇತ್ರಗಳು ಇವೆ. ತೆಲಂಗಾಣದಲ್ಲಿ 119 ಅಸೆಂಬ್ಲಿ ಕ್ಷೇತ್ರಗಳು- 17 ಲೋಕಸಭಾ ಕ್ಷೇತ್ರಗಳಿದ್ದರೆ ಸೀಮಾಂಧ್ರ ವ್ಯಾಪ್ತಿಯಲ್ಲಿ 175 ಅಸೆಂಬ್ಲಿ ಕ್ಷೇತ್ರಗಳು- ಉಳಿದ 25 ಲೋಕಸಭಾ ಕ್ಷೇತ್ರಗಳಿವೆ.
ಆಂಧ್ರದ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರು ಆಂಧ್ರ ಇಬ್ಭಾಗವನ್ನು ವಿರೋಧಿಸಿ ರಾಜೀನಾಮೆ ನೀಡಿದ ನಂತರ, ರಾಜ್ಯವು ಪ್ರಸ್ತುತ ರಾಷ್ಟ್ರಪತಿ ಆಡಳಿತದಲ್ಲಿದೆ.












Click it and Unblock the Notifications