Telangana Poll: ತೆಲಂಗಾಣದಲ್ಲಿ ಸಿದ್ದು-ಡಿಕೆಶಿ ಹವಾ, ಭರ್ಜರಿ ಚುನಾವಣಾ ಪ್ರಚಾರ
ಬೆಂಗಳೂರು, ನವೆಂಬರ್ 10: ಕರ್ನಾಟಕದಲ್ಲಿ ಪ್ರಚಂಡ ಬಹುಮತ ಪಡೆದುಕೊಂಡ ಕನಸಿನಂತೆ ತೆಲಂಗಾಣದಲ್ಲಿ ಸಹಿತ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ. ಈ ಸಂಬಂಧ ಸಾಕಷ್ಟು ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ ಶುಕ್ರವಾರ ತೆಲಂಗಾಣದಲ್ಲಿ ಚುನಾವಣಾ ಪ್ರಚಾರ ನಡೆಸಿದೆ. ಇದರಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾಗವಹಿಸಿದರು.
ತೆಲಂಗಾಣದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಸಿದ್ದರಾಮಯ್ಯ, ಶಿವಕುಮಾರ್ ಶುಕ್ರವಾರ ಬೆಳಗ್ಗೆ ತೆರಳಿದರು. ಸಿದ್ದರಾಮಯ್ಯ ಇಂದು ಬೆಳಗ್ಗೆ ಚುನಾವಣಾ ಕಣದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಮಧ್ಯಾಹ್ನ ನಂತರ ಉಪಮುಖ್ಯಮಂತ್ರಿ ಶಿವಕುಮಾರ್ ತೆಲಂಗಾಣ ರಾಜ್ಯದ ವಿವಿಧಡೆ ಮತಯಾಚನೆ ಮಾಡಿದರು.

ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಲು ಸಿದ್ದರಾಮಯ್ಯ ಬೆಳಗ್ಗೆ 11.30ರ ಸುಮಾರಿಗೆ ಹೈದರಾಬಾದ್‌ಗೆ ತೆರಳಿದರು. ನಂತರ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಕಾಮರೆಡ್ಡಿ ಜಿಲ್ಲೆ ತಲುಪಿಸಿದರು. ಕಾಮರೆಡ್ಡಿಯಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಸಂಜೆ 6.30ರ ಸುಮಾರಿಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮಧ್ಯಾಹ್ನದ ಬಳಿಕ ಡಿಕೆ ಶಿವಕುಮಾರ್ ರ‍್ಯಾಲಿ
ಮುಖ್ಯಮಂತ್ರಿಗಳಂತೆ ಡಿಸೆಂ ಶಿವಕುಮಾರ್ ಅವರು ತೆಲಂಗಾಣದ ಕೊಡಾಡ್ ನಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿದ್ದರು. ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನಿಂದ ಹೊರಟ ಅವರು ಸಂಜೆ 5 ಗಂಟೆಗೆ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದರು. ನಂತರ ರಾತ್ರಿ 8 ಗಂಟೆಗೆ ಹುಜೂರ್ ನಗರಕ್ಕೆ ರೋಡ್ ಶೋನಲ್ಲಿ ಭಾಗವಹಿಸಲಿದ್ದು, ನಂತರ ಅಲ್ಲಿಂದ ಅವರು ವಿಜಯವಾಡಕ್ಕೆ ತೆರಳಿ ಅಲ್ಲಿಯೇ ರಾತ್ರಿ ಕಳೆಯಲಿದ್ದಾರೆ.
ಎಐಸಿಸಿ ಇತ್ತೀಚೆಗೆ ತೆಲಂಗಾಣ ವಿಧಾನಸಭೆ ಚುನಾವಣೆಗೆ ಕರ್ನಾಟಕದ ಸಚಿವರು ಹಾಗೂ ಶಾಸಕರನ್ನು ಕ್ರಮವಾಗಿ ಕ್ಲಸ್ಟರ್ ಉಸ್ತುವಾರಿ ಮತ್ತು ಕ್ಷೇತ್ರವಾರು ವೀಕ್ಷಕರಾಗಿ ನೇಮಿಸಲಾಗಿದೆ. ಒಟ್ಟು 10 ಸಚಿವರನ್ನು ಕ್ಲಸ್ಟರ್ ಉಸ್ತುವಾರಿಗಳಾಗಿ ಮತ್ತು 48 ಶಾಸಕರನ್ನು ಕ್ಷೇತ್ರವಾರು ವೀಕ್ಷಕರನ್ನಾಗಿ ನೇಮಿಸುವ ಮೂಲಕ ಕಾಂಗ್ರೆಸ್ ಗೆಲುವಿನ ವಿಶ್ವಾಸದಲ್ಲಿ ಭರ್ಜರಿ ಪ್ರಚಾರ ನಡೆಸಿದರು.

ಕ್ಲಸ್ಟರ್ ಉಸ್ತುವಾರಿಗಳಾದ ಸಚಿವರು
ತೆಲಂಗಾಣದಲ್ಲಿ ಕ್ಲಸ್ಟರ್ ಉಸ್ತುವಾರಿಗಳ ಪಟ್ಟಿಯಲ್ಲಿರುವ ರಾಜ್ಯ ಸಚಿವರಾದ ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ಈಶ್ವರ ಖಂಡ್ರೆ, ಎಂಸಿ ಸುಧಾಕರ್, ಶರಣ ಪ್ರಕಾಶ್ ಪಾಟೀಲ್, ಕೆ.ಎಚ್.ಮುನಿಯಪ್ಪ, ಜಮೀರ್ ಅಹಮದ್ ಖಾನ್, ಶಿವರಾಜ್ ತಂಗಡಗಿ, ಕೃಷ್ಣ ಭೈರೇಗೌಡ, ಬಿ.ನಾಗೇಂದ್ರ ಇದ್ದಾರೆ.
ಅದೇ ರೀತಿ ಕ್ಷೇತ್ರವಾರು ವೀಕ್ಷಕರಾಗಿ ನೇಮಕವಾಗಿರುವ ಶಾಸಕರನ್ನು ನೋಡುವುದಾರೆ ಎಂಎಲ್ ಸಿ ಉಮಾಶ್ರೀ, ಯುಬಿ ವೆಂಕಟೇಶ್, ಮಹಾಂತೇಶ ಕೌಜಲಗಿ, ಸಲೀಂ ಅಹ್ಮದ್, ಪ್ರಕಾಶ ಹುಕ್ಕೇರಿ, ಅನಿಲ್ ಚಿಕ್ಕಮಾದು, ಕೋನರೆಡ್ಡಿ, ಪ್ರದೀಪ್ ಈಶ್ವರ್, ನಾರಾಯಣ ಸ್ವಾಮಿ, ಯುಬಿ ಬಣಕಾರ್, ವಿನಯ್ ಕುಲಕರ್ಣಿ, ಕಂಪ್ಲಿ ಗಣೇಶ್, ಬಸವರಾಜ ರಾಯರೆಡ್ಡಿ, ಶಿವಣ್ಣ, ಎಂಆರ್ ಸೀತಾರಾಮ್ ಮತ್ತಿತರರು ಪಾಲ್ಗೊಂಡಿದ್ದರು.
119 ಕ್ಷೇತ್ರಕ್ಕೆ ನ.30ಕ್ಕೆ ಮತದಾನ
ತೆಲಂಗಾಣದಲ್ಲಿ ಇದೇ ನವೆಂಬರ್ 30ಕ್ಕೆ ಒಂದೇ ಹಂತದಲ್ಲಿ 119 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಇಂದು ನ.10 ಕೊನೆ ದಿನವಾಗಿದೆ. ಇದೇ ನವೆಂಬರ್ 13 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನ.15 ರಂದು ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆ ದಿನಾಗಿದೆ. ಡಿಸೆಂಬರ್ 3ಕ್ಕೆ ಎಲ್ಲ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications